ಬೆಂಗಳೂರು: ಸಿಎಂ ಕುಮಾರಸ್ವಾಮಿ ಅವರು ಬಜೆಟ್ ಮಂಡಿಸದಿದ್ದರೆ 50 ಕೋಟಿ ರೂ. ವೆಚ್ಚದ ಸಿನಿಮಾ ಹಕ್ಕನ್ನು 5 ಕೋಟಿಗೆ ಬಿಜೆಪಿಗೆ ಬಿಟ್ಟು ಕೊಡುತ್ತೇನೆ ಎಂದು ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಅವರು ಸವಾಲು ಹಾಕಿದ್ದಾರೆ.
ಕುಮಾರಸ್ವಾಮಿ ಬಜೆಟ್ ಮಂಡಿಸುವುದು ಅನುಮಾನ ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಮಾತನಾಡಿದ ಮುನಿರತ್ನ ಅವರು, “ಕುಮಾರಸ್ವಾಮಿ ಬಜೆಟ್ ಮಂಡಿಸಲ್ಲ ಎಂದು ಬಿಜೆಪಿ ಅವರು ಹೇಳುತ್ತಾರೆ. ಆದರೆ ಬಿಜೆಪಿಯವರ ಮಾತು ನಡೆಯುವುದಿಲ್ಲ. ಕುಮಾರಸ್ವಾಮಿ ಬಜೆಟ್ ಮಂಡಿಸಿದರೆ ಬಿಜೆಪಿ ನನಗೆ ಐದು ಕೋಟಿ ರೂ. ಮಾತ್ರ ಕೊಡಲಿ. ಬಜೆಟ್ ಮಂಡಿಸದೇ ಇದ್ದರೆ ನನ್ನ ಕುರುಕ್ಷೇತ್ರ ಸಿನಿಮಾ ಬಿಜೆಪಿಯವರಿಗೆ ಬಿಟ್ಟುಕೊಡ್ತೇನೆ. ಬಿಜೆಪಿಯಲ್ಲಿ ಸರ್ಕಾರ ಉರುಳಿಸಲು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ನಾನು ಸವಾಲು ಹಾಕುತ್ತೇನೆ. ಬಿಜೆಪಿಯವರು ಮುಂದೆ ಬಂದು ನನ್ನ ಸವಾಲು ಸ್ವೀಕರಿಸಲಿ. ನಾವು ಬಜೆಟ್ ಅನ್ನು ಮಂಡನೆ ಮಾಡೇ ಮಾಡುತ್ತೇವೆ” ಎಂದು ಶಾಸಕ ಮುನಿರತ್ನ ವಿಶ್ವಾಸ ವ್ಯಕ್ತಪಡಿಸಿ ಸವಾಲು ಎಸೆದರು.
Advertisement
Advertisement
ಬಿಜೆಪಿಯವರು ದಯವಿಟ್ಟು ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುವುದನ್ನು ನಿಲ್ಲಿಸಬೇಕು. ಸರ್ಕಾರದ ಅಭಿವೃದ್ಧಿಯ ಬಗ್ಗೆ ಸಲಹೆ ಕೊಡಿ. ಹೋಮ, ಯಜ್ಞ, ಯಾಗ ಎಲ್ಲ ಸರ್ಕಾರದ ವಿರುದ್ಧ ಯಾಕೆ ಮಾಡುತ್ತೀರಿ. ಅದರ ಬದಲಾಗಿ ಲೋಕ ಕಲ್ಯಾಣಕ್ಕೆ ಯಾಗ, ಹೋಮ ಮಾಡಿಸಿ. ಅದನ್ನು ಬಿಟ್ಟು ಸರ್ಕಾರ ಬೀಳಿಸಲು ಪ್ರಯತ್ನ ಪಡುತ್ತಿದ್ದೀರಿ ಹಾಗೂ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದೀರಿ. ಆಮೇಲೆ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ನಂತರ ಕಾಲಕಸದಂತೆ ಕಾಣುತ್ತೀರಿ. ಇವೆಲ್ಲವನ್ನು ದಯವಿಟ್ಟು ನಿಲ್ಲಿಸಿ ಎಂದು ಮುನಿರತ್ನ ಅವರು ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದರು.
Advertisement
Advertisement
ಬಿಜೆಪಿಯವರು ಕರ್ನಾಟಕದ ರಾಜ್ಯದ ಜನತೆಗೆ ಗೊಂದಲದ ಹೇಳಿಕೆ ನೀಡುತ್ತಿದ್ದಾರೆ. ಕೆಲಸ ಮಾಡುತ್ತಿರುವ ಸರ್ಕಾರವನ್ನು ನೆಮ್ಮದಿಯಾಗಿ ಬಿಡಿ. ಜನರು ನಿಮ್ಮನ್ನು ವಿರೋಧ ಪಕ್ಷದಲ್ಲಿ ಕೂರಿಸಿದ್ದಾರೆ. ಐದು ವರ್ಷ ನೀವು ಪ್ರಾಮಾಣಿಕವಾಗಿ ವಿರೋಧ ಪಕ್ಷದಲ್ಲಿ ಕೆಲಸ ಮಾಡಿ. ರಾಜಕೀಯದಲ್ಲಿ ದೇವರ ಹೆಸರನ್ನು ಬಳಸಿಕೊಳ್ಳಬೇಡಿ. ಸಮ್ಮಿಶ್ರ ಸರ್ಕಾರ ಖಂಡಿತವಾಗಿ ಐದು ವರ್ಷ ಪೂರೈಸುತ್ತದೆ ಎಂದು ಮುನಿರತ್ನ ವಿಶ್ವಾಸ ವ್ಯಕ್ತಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv