ಚಿಕ್ಕಮಗಳೂರು: ಮಲೆನಾಡನಲ್ಲಿ ಜನ್ಮ ತಾಳಿ ನಾಡಿನ ಜೀವನದಿಯಾಗಿರುವ ಹೇಮಾವತಿಗೆ ಸಂಪ್ರಾದಾಯದಂತೆ ಬಾಗಿನ ಅರ್ಪಿಸಲಾಗಿದೆ.
ಜಿಲ್ಲೆಯ ಮೂಡಿಗೆರೆ ತಾಲೂಕಿನ ಜಾವಳಿ ಬಳಿ ಹನಿ-ಹನಿಯಾಗಿ ಜನ್ಮ ತಾಳಿರುವ ಹೇಮಾವತಿ, ಹಾಸನ, ಮೈಸೂರು, ಬೆಂಗಳೂರಿನ ಲಕ್ಷಾಂತರ ಜನ, ಜಾನುವಾರುಗಳ ಜೀವನಾಡಿಯಾಗಿದ್ದಾಳೆ. ಹೇಮಾವತಿ ನದಿ ಉಗಮ ಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಪೂಜಾ ವಿಧಿ-ವಿಧಾನದೊಂದಿಗೆ ಬಾಗೀನ ಅರ್ಪಣೆ ಮಾಡಲಾಗಿದೆ. ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ, ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸ್ಥಳೀಯರು ಬಾಗಿನ ಸಮರ್ಪಣೆಯಲ್ಲಿ ಪಾಲ್ಗೊಂಡಿದ್ದರು. ಜಾವಳಿ ಗ್ರಾಮದ ಗಣಪತಿ ದೇವಸ್ಥಾನದ ಬಳಿ ಇರುವ ಕಲ್ಯಾಣಿಗೆ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.
ಈ ಬಾರಿ ಉತ್ತಮ ಹಾಗೂ ಸಮೃದ್ಧ ಮಳೆಯಾಗಿದೆ. ಮಳೆಯಿಂದ ಕಷ್ಟ-ನಷ್ಟದ ಪ್ರಮಾಣವೂ ಸಂರ್ಪೂಣ ತಗ್ಗಿದೆ. ಹೀಗಾಗಿ ಮಲೆನಾಡಿನ ಜನ ಕೂಡ ಸಂತಸದಿಂದ್ದಾರೆ. ಕಳೆದ ಎರಡ್ಮೂರು ವರ್ಷವೂ ಹೇಮಾವತಿಯ ಅಬ್ಬರದಿಂದಾದ ಅನಾಹುತಗಳಿಂದ ಜನ ಇಂದಿಗೂ ಹೊರಬಂದಿಲ್ಲ. ಜೀವನಕ್ಕಾಗಿ ಪರದಾಡುತ್ತಲೇ ಇದ್ದಾರೆ. ಆದರೆ ಈ ವರ್ಷ ತಕ್ಕಮಟ್ಟಿಗೆ ಶಾಂತನಾಗಿರೋ ವರುಣದೇವನಿಂದ ಹೇಮಾವತಿಯೂ ಶಾಂತಳಾಗಿದ್ದು, ಮಲೆನಾಡಿಗರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಹುಟ್ಟಿ ಹಾಸನ ಜಿಲ್ಲೆಯ ಹೃದಯವಾಗಿರೋ ಹೇಮಾವತಿ ಮೈಸೂರಿನಿಂದ ಬೆಂಗಳೂರಿಗೆ ಹರಿಯುತ್ತಾಳೆ. ಲಕ್ಷಾಂತರ ಜನರ ಬಾಯಾರಿಕೆ ನೀಗಿಸಿ ತಮಿಳುನಾಡಿನತ್ತವೂ ಹರಿಯುತ್ತಾಳೆ. ಅಂತಹ ಜೀವದಾತೆಗೆ ಇಂದು ಸಂಭ್ರಮದಿಂದ ಬಾಗಿನ ಅರ್ಪಣೆ ಮಾಡಲಾಗಿದೆ.