ಚಿಕ್ಕೋಡಿ(ಬೆಳಗಾವಿ): ರಾಜ್ಯ ಸರ್ಕಾರದಲ್ಲಿ ಒಂದೆಡೆ ಸಚಿವ ಸ್ಥಾನಕ್ಕಾಗಿ ರಾಜಕೀಯ ಕಬಡ್ಡಿ ಆಟ ನಡೆಯುತ್ತಿದ್ದರೆ, ಇತ್ತ ಬೆಳಗಾವಿ ಜಿಲ್ಲೆಯ ಅಥಣಿ ಕ್ಷೇತ್ರದ ಬಿಜೆಪಿ ಶಾಸಕ ಮಹೇಶ್ ಕುಮಟಳ್ಳಿ ಫುಲ್ ಜೋಶ್‍ನಿಂದ ಕಬಡ್ಡಿ ಆಟ ಆಡಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಶೇಗುಣಶಿ ಗ್ರಾಮದ ಜಾತ್ರೆಯಲ್ಲಿ ಕುಮಟಳ್ಳಿ ಕಬಡ್ಡಿ ಆಡಿ ಬಿದ್ದಿದ್ದರು. ಇದು ಹಳೆಯ ವಿಡಿಯೋ ಆಗಿದ್ದರು ಕೂಡ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ಸಖತ್ತಾಗಿ ಹರಿದಾಡುತ್ತಿದೆ. ಅಲ್ಲದೆ ಸಚಿವ ಸ್ಥಾನಕ್ಕಾಗಿ ಶಾಸಕರ ಕಬಡ್ಡಿ ಆಟ ಎಂದು ಟ್ರೋಲ್ ಆಗುತ್ತಿದೆ. ರಾಜ್ಯ ರಾಜಕೀಯದಲ್ಲಿ ಸಚಿವ ಸ್ಥಾನಕ್ಕೆ ನಡೆದಿರುವ ಕಬಡ್ಡಿ ಆಟದ ಸಂದರ್ಭಕ್ಕೆ ಈಗ ಈ ವಿಡಿಯೋ ಸೂಟ್ ಆಗುತ್ತಿದೆ ಎಂದು ಕಮೆಂಟ್ ಗಳು ಬರುತ್ತಿದೆ.
ಕಾಂಗ್ರೆಸ್ ಪಕ್ಷ ತೊರೆದು ಅನರ್ಹರಾಗಿ ಈಗ ಮತ್ತೆ ಅಥಣಿ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ಮಹೇಶ್ ಕುಮಟಳ್ಳಿ ಸಚಿವ ಸ್ಥಾನ ನೀಡೇ ನೀಡುತ್ತೇವೆ ಎಂದು ಸ್ವತಃ ಸಿಎಂ ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಈಗ ನಡೆದಿರುವ ಸಚಿವ ಸ್ಥಾನದ ಕಬಡ್ಡಿ ಆಟದಲ್ಲಿ ಮಹೇಶ್ ಕುಮಟಳ್ಳಿ ಗೆಲ್ಲುತ್ತಾರಾ ಅಥವಾ ಬೀಳುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.