ಮಡಿಕೇರಿ: ಸಂಪತ್ ಬಿಜೆಪಿ ಕಾರ್ಯಕರ್ತನಲ್ಲ. ಬಿಜೆಪಿ ಕಾರ್ಯಕರ್ತರಿಗೂ ಮೊಟ್ಟೆ ಎಸೆದಿದ್ದಕ್ಕೂ ಸಂಬಂಧವಿಲ್ಲ ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದ್ದಾರೆ.
ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರು ಇಷ್ಟು ಕೀಳು ಮಟ್ಟಕ್ಕೆ ಇಳಿಯುವುದಿಲ್ಲ. ಸಿದ್ದರಾಮಯ್ಯನವರ ಸ್ಥಾನ ಮಾನ ನಮಗೂ ತಿಳಿದಿದೆ. ಅವರು ವಿರೋಧ ಪಕ್ಷದ ನಾಯಕರು, ಅವರನ್ನು ಶ್ಯಾಡೋ ಚೀಫ್ ಮಿನಿಸ್ಟರ್ ಅಂತ ಕೂಡ ಕರೆಯುತ್ತೇವೆ. ಅವರಿಗೆ ಪ್ರೋಟೋಕಾಲ್ ಇದೆ. ಅಂತಹ ದೊಡ್ಡ ವ್ಯಕ್ತಿ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದಿದ್ದು ಬಿಜೆಪಿ ಕಾರ್ಯಕರ್ತರಲ್ಲ ಎಂದು ಹತ್ತು ಬಾರಿ ಬೇಕಾದರೂ ಹೇಳುತ್ತೇನೆ ಎಂದಿದ್ದಾರೆ.
ಶಾಸಕ ಅಪ್ಪಚ್ಚು ರಂಜನ್ ಜೊತೆಗಿರುವ ಸಂಪತ್ ಫೋಟೋ ವೈರಲ್ ಆಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯ ಎಲ್ಲಾ ಮೆಂಬರ್ ಶಿಪ್ ಡಿಜಿಟಲ್ ಆಗಿದೆ. ಅದರಲ್ಲಿ ಸಂಪತ್ ಹೆಸರಿಲ್ಲ ಎಂದು ನಮ್ಮ ಜಿಲ್ಲಾಧ್ಯಕ್ಷರು ಪರಿಶೀಲನೆ ನಡೆಸಿ ತಿಳಿಸಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆತ ಪ್ರಕರಣ – ತಡರಾತ್ರಿ ಬಿಜೆಪಿಯ 9 ಮಂದಿ ಬಂಧನ, ಬಿಡುಗಡೆ
ಸಿದ್ದರಾಮಯ್ಯ ಅವರಿಗೆ ಕಪ್ಪು ಬಾವುಟ ತೋರಿಸಿ ಪ್ರತಿಭಟನೆ ನಡೆಸಿದ್ದು, ಬಿಜೆಪಿ ಕಾರ್ಯಕರ್ತರೇ, ಆದರೆ ಅದರ ಮಧ್ಯೆ ಯಾರೋ ಬಂದು ಮೊಟ್ಟೆ ಎಸೆದಿರುವುದಕ್ಕೂ, ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಯಾವ ಬಿಜೆಪಿ ಕಾರ್ಯಕರ್ತರು ಹಾಗೇ ಮಾಡುವುದಿಲ್ಲ ಎಂದು ಸ್ಪಷ್ಟನೇ ನೀಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದಿದ್ದು ಅಪ್ಪಚ್ಚು ರಂಜನ್ ಆಪ್ತ!
ಕೊಡಗು ಜಿಲ್ಲೆಯ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಶಾಸಕ ಅಪ್ಪಚ್ಚು ರಂಜನ್ ಆಪ್ತ ಹಾಗೂ ಬಿಜೆಪಿ ಕಾರ್ಯಕರ್ತ ಸಂಪತ್ ಮೊಟ್ಟೆ ಎಸೆದಿದ್ದನು. ಈ ಪ್ರಕರಣ ಎಕ್ಸ್‍ಕ್ಲೂಸಿವ್ ದೃಶ್ಯ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಸೋಮವಾರಪೇಟೆಯ ಲೋಡರ್ಸ್ ಕಾಲೋನಿಯ ಸಂಪತ್ ಕಳೆದ ಎರಡು ವರ್ಷಗಳಿಂದ ಬಿಜೆಪಿಯಲ್ಲಿದ್ದಾನಂತೆ. ಸಣ್ಣಪುಟ್ಟ ಕಾಮಗಾರಿಗಳ ಗುತ್ತಿಗೆ ಕೆಲಸ ಮಾಡುತ್ತಿದ್ದ ಸಂಪತ್ ಅನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.