ಮಂಡ್ಯ: ಮಹಿಳಾ ಸಿಬ್ಬಂದಿಗೆ ಮೆಮೋ ನೀಡಿದ್ದಕ್ಕೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯ ಜೆಡಿಎಸ್ ಶಾಸಕ ಕೆ.ಸಿ.ನಾರಾಯಣ ಗೌಡ ಸರ್ಕಾರಿ ವೈದ್ಯಾಧಿಕಾರಿಗೆ ಕರೆ ಮಾಡಿ ಅವಾಜ್ ಜೊತೆಗೆ ಬೆದರಿಕೆ ಹಾಕಿದ್ದಾರೆ.
ಮದ್ದೂರು ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಮುರಳಿಕೃಷ್ಣ ಅವರಿಗೆ ಕೆ.ಸಿ.ನಾರಾಯಣ ಗೌಡ ಕರೆ ಮಾಡಿ ಆವಾಜ್, ಬೆದರಿಕೆ ಹಾಕಿದ್ದಾರೆ. ಮದ್ದೂರು ಸಾರ್ವಜನಿಕ ಆಸ್ಪತ್ರೆಯ ಕ್ಲರ್ಕ್ ಆಗಿರುವ ತುಳಸಿ ಅವರಿಗೆ ನಿಧಾನಗತಿಯಲ್ಲಿ ಸಾಗುತ್ತಿದ್ದ ಕೆಲವನ್ನು ಆದಷ್ಟು ಬೇಗನೆ ಮುಗಿಸಿ ಎಂದು ವೈದ್ಯಾಧಿಕಾರಿ ಮೆಮೋ ಕೊಟ್ಟಿದ್ದರು.
ಈ ವಿಚಾರವಾಗಿ ವೈದ್ಯಾಧಿಕಾರಿಗೆ ಶಾಸಕ ಕರೆ ಮಾಡಿ, ಊರಿಗೆ ಹೋಗಬೇಕಾ, ಇಲ್ಲ ಕೈ ಕಾಲು ಮುರಿಸಿಕೊಳ್ಳಬೇಕಾ ನೀನು? ಒಬ್ಬ ಹೆಣ್ಣು ಮಗಳಿಗೆ ಏನು ಮಾತಾಡಿದ್ದೀಯ ನೀನು? 8 ಗಂಟೆಗೆ ಡ್ಯೂಟಿಗೆ ಕರೆಯೋಕೆ ನಿನಗೆ ಏನು ಅಧಿಕಾರವಿದೆ? ಆ ಹೆಣ್ಣು ಮಗಳ ಹತ್ತಿರ ಮೊದಲು ಕ್ಷಮೆ ಕೇಳು. ಆಮೇಲೆ ಡ್ಯೂಟಿಗೆ ಬಾ ನೀನು. ಇಲ್ಲ ಅಂದರೆ ಬೇರೆ ಥರ ಆಗುತ್ತೆ. ಯಾವ ಮೂಲೆಯಲ್ಲಿ ಇದ್ದರೂ ಬಿಡಲ್ಲ ಮಂಡ್ಯದವರು ನಾವು ಎಂದು ಆವಾಜ್ ಹಾಕಿದ್ದಾರೆ.
ನಾಳೆ ಬೆಳಿಗ್ಗೆ 8-9 ಗಂಟೆಗೆ ಬಂದು ನನಗೆ ಸಿಗಬೇಕು ನೀನು. ಏನ್ ತಿಳ್ಕೊಂಡಿದಿಯಪ್ಪ? ಯಾವ ಊರು? ಏನ್ ಬ್ಯಾಕ್ ಗ್ರೌಂಡ್ ನಿಂದು? ಎಲ್ಲಿಯವನು ನೀನು? ಬೆಂಗಳೂರಲ್ಲಿ ಯಾರ ಕುಟುಂಬದಲ್ಲಿ ಹುಟ್ಟಿದ್ದೀಯ ನೀನು? ತಂದೆ-ತಾಯಿ, ಸಿಸ್ಟರ್ ಇಲ್ಲವಾ ನಿನಗೆ ಎಂದು ಹೇಳಿ ಕ್ಲಾಸ್ ತೆಗೆದುಕೊಂಡಿದ್ದಾರೆ.