Connect with us

Districts

ಶೀಘ್ರವೇ ಕಂಪ್ಲಿ ಶಾಸಕ ಜೆ.ಎನ್ ಗಣೇಶ್ ಬಂಧನ, ಯಾವುದೇ ಒತ್ತಡವಿಲ್ಲ: ರಾಮನಗರ ಎಸ್‍ಪಿ

Published

on

ರಾಮನಗರ: ಬಳ್ಳಾರಿಯ ವಿಜಯನಗರ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ ಬಳಿಕ ತಲೆ ಮರೆಸಿಕೊಂಡಿರುವ ಕಂಪ್ಲಿ ಶಾಸಕ ಗಣೇಶ್ ಅವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದು, ಶೀಘ್ರವೇ ಕಂಪ್ಲಿ ಶಾಸಕ ಜೆ.ಎನ್ ಗಣೇಶ್ ಬಂಧನ ಮಾಡುವುದಾಗಿ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮೇಶ್ ಭಾನೋತ್ ತಿಳಿಸಿದ್ದಾರೆ.

ಮಾಧ್ಯಮಗಳಿಗೆ ಮಾಹಿತಿ ನೀಡಿ ಮಾತನಾಡಿದ ಅವರು, ಪ್ರಕರಣದ ಪ್ರಾಥಮಿಕ ತನಿಖೆ ನಡೆಸಿದ್ದು, ನಾಲ್ಕು ತಂಡಗಳು ಪ್ರತ್ಯೇಕವಾಗಿ ಶಾಸಕರ ಹುಡುಕಾಟದಲ್ಲಿ ನಿರತವಾಗಿವೆ. ಪ್ರಕರಣ ನಡೆದ ಬಳಿಕ ನಮಗೆ ಯಾವುದೇ ದೂರು ಹಾಗೂ ಎಂಎಲ್‍ಸಿ ಬಂದಿರಲಿಲ್ಲ. ಎಂಎಲ್‍ಸಿ ಬಂದ ಬಳಿಕ ಸ್ಥಳೀಯ ಪೊಲೀಸರನ್ನ ಕಳುಹಿಸಿ ಶಾಸಕ ಆನಂದ್ ಸಿಂಗ್ ಹೇಳಿಕೆ ಪಡೆದು ಎಫ್‍ಐಆರ್ ದಾಖಲಿಸಲಾಗಿತ್ತು. ಶಾಸಕ ಆನಂದ್ ಸಿಂಗ್ ನೀಡಿರುವ ಹೇಳಿಕೆಯಲ್ಲಿ ಸಚಿವ ತುಕಾರಾಂ, ಶಾಸಕರಾದ ತನ್ವೀರ್ ಸೇಠ್, ರಘುಮೂರ್ತಿ, ರಾಮಪ್ಪರ ಹೆಸರನ್ನ ಎಫ್‍ಐಆರ್‍ನಲ್ಲಿ ನಮೂದಿಸಲಾಗಿದ್ದು ಘಟನೆಯಲ್ಲಿ ಪ್ರತ್ಯಕ್ಷವಾಗಿ ನೋಡಿದ್ದನ್ನ ಹೇಳಿಕೆ ಪಡೆಯಲಿದ್ದೇವೆ. ಜೊತೆಗೆ ಘಟನೆ ನಡೆದ ವೇಳೆ ಇದ್ದವರು, ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಪಡೆದು ಕ್ರಮ ಜರುಗಿಸುವುದಾಗಿ ವಿವರಿಸಿದರು. ಇದನ್ನು ಓದಿ: ಈಗಲ್ಟನ್ ರೆಸಾರ್ಟಿನಲ್ಲಿ ರಾತ್ರಿ ನಡೆದಿದ್ದೇನು? ಎಳೆ ಎಳೆಯಾಗಿ ಬಿಚ್ಚಿಟ್ಟ ಶಾಸಕ ಗಣೇಶ್

ಉಳಿದಂತೆ ಪ್ರಕರಣ ಸಂಬಂಧ ಈಗಾಗಲೇ ರೆಸಾರ್ಟಿನ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ತನಿಖೆಗೆ ಯಾವುದೇ ರಾಜಕೀಯ ಒತ್ತಡ ಹೇರಿಲ್ಲ, ಸಂಪೂರ್ಣವಾಗಿ ತನಿಖೆ ನಡೆಸುತ್ತೇವೆ. ಅಲ್ಲದೇ ಶಾಸಕ ಗಣೇಶ್ ಮೇಲೆ ರೌಡಿಶೀಟರ್ ತೆರೆಯುವ ಸಂಬಂಧ ಯಾವ ಕ್ರಮ ಜರುಗಿಸಬೇಕು ಎಂಬುವುದನ್ನು ನೋಡುತ್ತೇವೆ. ಈ ಬಗ್ಗೆ ಬಳ್ಳಾರಿ ಎಸ್‍ಪಿ ಅವರೊಂದಿಗೆ ಮಾಹಿತಿ ಪಡೆಯುತ್ತಿದ್ದು ಮಾಹಿತಿ ಬಂದ ಬಳಿಕ ರೌಡಿ ಶೀಟರ್ ತೆರೆಯುವ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಸ್ಪಷ್ಟನೆ ನೀಡಿದರು. ಇದನ್ನು ಓದಿ: Exclsuive |ಆನಂದ್ ಸಿಂಗ್ ಮೇಲಿನ ಹಲ್ಲೆಗೂ ಮೊದಲು ಖಾಸಗಿ ಗನ್ ಮ್ಯಾನಿಗೆ ಥಳಿಸಿದ್ದ ಗಣೇಶ್!

ಜನವರಿ 19 ರ ರಾತ್ರಿ ಈಗಲ್ಟನ್ ರೆಸಾರ್ಟಿನಲ್ಲಿ ಗಲಾಟೆ ಮಾಡಿ ಶಾಸಕ ಆನಂದ್ ಸಿಂಗ್ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ನಡೆಸಲಾಗಿತ್ತು. ಹಲ್ಲೆ ಪ್ರಕರಣ ಸಂಬಂಧ ರಾಮನಗರ ಜಿಲ್ಲೆಯ ಬಿಡದಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿತ್ತು. ಇತ್ತ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರು ಕೂಡ ಶಾಸಕ ಗಣೇಶ್ ಘಟನೆ ಬಗ್ಗೆ ಮಾಹಿತಿ ನೀಡಿ ಫೇಸ್‍ಬುಕ್ ಪೋಸ್ಟ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ ಶಾಸಕ ಆನಂದ್ ಸಿಂಗ್ ತಮ್ಮ ಮೇಲೆ ಮೊದಲು ಹಲ್ಲೆ ಮಾಡಿದ್ದು, ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *