– ಕೂಡಲೇ ಸಿಎಂ ಸಮಾಜದ ಕ್ಷಮೆ ಕೇಳಲಿ
ಬಳ್ಳಾರಿ: ಬೆಳಗಾವಿಯಲ್ಲಿ ಪಂಚಮಸಾಲಿ ಮೀಸಲಾತಿ (Panchamasali Reservation) ಹೋರಾಟಗಾರರ ಮೇಲೆ ಸರ್ಕಾರ ಸೇಡಿನಿಂದ ಲಾಠಿ ಚಾರ್ಜ್ ಮಾಡಿಸಿ, ಹೋರಾಟಗಾರಿಗೆ ಹಿಂಸೆ ನೀಡಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಶಾಸಕ ಜನಾರ್ದನ ರೆಡ್ಡಿ (Janardhana Reddy) ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಬಳ್ಳಾರಿಯ ಜಿಲ್ಲಾ ಬಿಜೆಪಿ (BJP) ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಸರ್ಕಾರ ಬ್ರಿಟಿಷರ ಮಾದರಿಯಲ್ಲಿ ಭಯಾನಕವಾಗಿ ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಿಸಿದೆ. ವಯಸ್ಸು, ಹಿರಿಯರು, ಕಿರಿಯರು ಎನ್ನುವುದನ್ನು ನೋಡದೇ ಹೊಡೆದಿದ್ದಾರೆ ಎಂದು ದೂರಿದರು.
ಬಸವ ಜಯ ಮೃತ್ಯಂಜಯ ಸ್ವಾಮೀಜಿ ಅವರನ್ನ ಬಂಧನದಲ್ಲಿಟ್ಟಿದ್ದಾರೆ. ಹೋರಾಟಕ್ಕೆ ಬೆಂಬಲ ನೀಡಿದ್ದ ಪ್ರತಿಪಕ್ಷದ ನಾಯಕರನ್ನೂ ಬಂಧನ ಮಾಡಿದ್ದಾರೆ. ಅಮಾಯಕ ಜನರನ್ನ ಅಟ್ಟಾಡಿಸಿ ಮನಬಂದಂತೆ ಹೊಡೆದಿದ್ದಾರೆ. ಎಡಿಜಿಪಿ ಅವರು ಓಡೋಡಿ ಬಂದು ಸದನದಲ್ಲಿ ಮುಖ್ಯಮಂತ್ರಿ ಭೇಟಿಯಾದ್ರು. ಐದು ನಿಮಿಷಗಳಲ್ಲಿ ಸಿಎಂ ಹೊರಗೆ ಹೋಗಿ ಎಡಿಜಿಪಿ ಜೊತೆ ಸಭೆ ಮಾಡಿದ್ರು. ಆಮೇಲೆ ಏನೆಲ್ಲಾ ಅನಾಹುತ ಆಗಬೇಕಿತ್ತೋ ಅದೆಲ್ಲಾ ಆಯ್ತು. ಬ್ರಿಟಿಷರಂತೆ ಕೆಟ್ಟ ಕೆಲಸಕ್ಕೆ ಸರ್ಕಾರ ಕೈ ಹಾಕಿದೆ ಎಂದು ಸಿಟ್ಟು ಹೊರಹಾಕಿದರು. ಇದನ್ನೂ ಓದಿ: ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ -ಹೋರಾಟಗಾರರ ಮೇಲೆ ಲಾಠಿಚಾರ್ಜ್
ಹೋರಾಟದ ಸ್ಥಳಕ್ಕೆ ಬಂದು ಸಿಎಂ ಭರವಸೆ ಕೊಡುವ ಕೆಲಸ ಮಾಡಬೇಕಿತ್ತು. 50 ಸಾವಿರಕ್ಕೂ ಹೆಚ್ಚು ಸಮುದಾಯದ ಜನ ಹೋರಾಟಕ್ಕೆ ಬಂದಿದ್ರು. ಹೋರಾಟದ ಸ್ಥಳಕ್ಕೆ ಬಾರದೇ ನಿರ್ಲಕ್ಷ್ಯ ಮಾಡಿರುವ ಸಿಎಂ ಸಿದ್ದರಾಮಯ್ಯ ಆಮೇಲೆ ಮಾಧ್ಯಮಕ್ಕೆ ತಪ್ಪು ಮಾಹಿತಿ ಕೊಟ್ಟಿದ್ದಾರೆ. ಜಯ ಮೃತ್ಯುಂಜಯ ಸ್ವಾಮೀಜಿಯವರನ್ನು ಕರೆದ್ರೂ ಬರಲಿಲ್ಲ ಎಂದು ಸುಳ್ಳು ಹೇಳಿದ್ದಾರೆ. ಜಯ ಮೃತ್ಯಂಜಯ ಸ್ವಾಮೀಜಿ ಇಲ್ಲಿಯವರೆಗೆ ಶಾಂತಿಯುತವಾಗಿ ಪ್ರತಿಭಟನೆ ಮಾಡಿದ್ರು. ಸಿಎಂ ಐದು ನಿಮಿಷ ಅಲ್ಲಿಗೆ ಹೋಗಿ ಮನವರಿಕೆ ಮಾಡಿಕೊಡಬೇಕಿತ್ತು. ಆದ್ರೆ ಅದೆಲ್ಲವನ್ನೂ ಬಿಟ್ಟು, ಯಾವುದೇ ನೆಪ ಹೇಳಿ ಲಾಠಿ ಚಾರ್ಜ್ ಮಾಡಿಸಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: 2028ಕ್ಕೆ ನಮಗೆ ಬೇಕಾದ ಸರ್ಕಾರ ತಂದು ಮೀಸಲಾತಿ ಪಡೆಯುತ್ತೇವೆ: ಜಯ ಮೃತ್ಯುಂಜಯ ಸ್ವಾಮೀಜಿ
ಇನ್ಮುಂದೆ ಹೋರಾಟಕ್ಕೆ ಮುಂದೆ ಬರಬಾರದು, ಹೋರಾಟ ಮಾಡಬಾರದು ಅನ್ನೋ ರೀತಿಯ ಭಯ ಹುಟ್ಟಿಸುವ ಕೆಲಸ ಮಾಡಿದ್ದಾರೆ. ಕೈ, ಕಾಲು ಮುರಿದು, ರಕ್ತ ಬರುವ ರೀತಿ ಹೊಡೆದಿದ್ದಾರೆ. ಇಡೀ ಪಂಚಮಸಾಲಿ ಸಮಾಜಕ್ಕೆ ಮಾತ್ರ ಅಲ್ಲ, ಇಡೀ ಸಮಾಜಕ್ಕೆ ಕ್ಷಮೆ ಕೇಳುವ ಕೆಲಸ ಮಾಡಬೇಕಿದೆ. ಇದಕ್ಕೆ ಸಿಎಂ ಫುಲ್ ಸ್ಟಾಪ್ ಇಡಬೇಕಿದೆ. ಕೂಡಲೇ ಕ್ಷಮೆ ಕೇಳಿ, ಸ್ವಾಮೀಜಿಯವರನ್ನ ಭೇಟಿ ಮಾಡಿ, ಸಾಂತ್ವನ ಹೇಳಬೇಕಿದೆ. ಈ ರೀತಿ ಆಗೋದಿಲ್ಲ ಎಂದು ಭರವಸೆ ಕೊಡಬೇಕಿದೆ ಎಂದರು.