ಜೈಲು ಶಿಕ್ಷೆಗೆ ತಡೆಯಾಜ್ಞೆ ಸಿಗುತ್ತಿದ್ದಂತೆ ಅಂಜನಾದ್ರಿ ಬೆಟ್ಟದಲ್ಲಿ ಆಂಜಯೇಯ ದರ್ಶನ ಪಡೆದ ರೆಡ್ಡಿ

Public TV
2 Min Read
janardhan reddy anjanadri hill

– ಕೋರ್ಟ್‌ ತಡೆಯಾಜ್ಞೆಗೆ ನಾನು ನಂಬಿರುವ ದೇವರೇ ಕಾರಣ ಎಂದ ಶಾಸಕ

ಕೊಪ್ಪಳ: ಶಾಸಕ ಗಾಲಿ ಜನಾರ್ದನ ರೆಡ್ಡಿ (Janardhan Reddy) ದಂಪತಿಯು ಅಂಜನಾದ್ರಿ ಬೆಟ್ಟದಲ್ಲಿ (Anjanadri Hill) ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಕೋರ್ಟ್‌ ತಡೆಯಾಜ್ಞೆ ನೀಡಿದ ಬೆನ್ನಲ್ಲೇ ಶಾಸಕ ರೆಡ್ಡಿ, ಆಂಜಯೇಯನ ದರ್ಶನ ಪಡೆದಿದ್ದಾರೆ. ತಡೆಯಾಜ್ಞೆಗೆ ನಾನು ನಂಬಿರುವ ದೇವರೇ ಕಾರಣ ಎಂದು ತಿಳಿಸಿದ್ದಾರೆ.

ಜನಾರ್ದನ ರೆಡ್ಡಿ 575 ಮೆಟ್ಟಿಲು ಏರಿ ಆಂಜನೇಯನ ದರ್ಶನ ಪಡೆದಿದ್ದಾರೆ. ಅವರಿಗೆ ಪತ್ನಿ ಅರುಣಾಲಕ್ಷ್ಮೀ ಸಾಥ್ ನೀಡಿದ್ದಾರೆ. ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ.

ರೆಡ್ಡಿ ಜೈಲಿನಲ್ಲಿ ಇದ್ದಾಗ ತಮ್ಮ ಪತಿ ಬೇಗ ಬಿಡುಗಡೆಯಾಗಲಿ ಎಂದು ಪತ್ನಿ ಪೂಜೆ ಸಲ್ಲಿಸಿದ್ದರು. ಪೂಜೆಗೆ ಫಲ ಸಿಕ್ಕ ಹಿನ್ನೆಲೆ ಪತಿ ಜನಾರ್ದನ ರೆಡ್ಡಿ ಜೊತೆಗೂಡಿ ಅರುಣಾಲಕ್ಷ್ಮೀ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದರು.

ಏನಿದು ಪ್ರಕರಣ?
ಆಂಧ್ರ-ಕರ್ನಾಟಕದ ಗಡಿ ಭಾಗಕ್ಕೆ ಹೊಂದಿಕೊಂಡ ಹೀರೆಹಾಳ್-ಸಿದ್ದಾಪುರ ಬಳಿಯ ಓಬಳಾಪುರಂ ಬೆಟ್ಟದಲ್ಲಿ ನಡೆದಿದ್ದ ಅಕ್ರಮ ಗಣಿಕಾರಿಕೆಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಓಎಂಸಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸರೆಡ್ಡಿ ಮತ್ತು ಜನಾರ್ದನರೆಡ್ಡಿ ಈ ಕಂಪನಿಯ ಮುಖ್ಯಸ್ಥರಾಗಿದ್ದರು. ಈ ಕಂಪನಿಗೆ ಗಣಿ‌ಗಾರಿಕೆ ಮಂಜೂರಾತಿ ನೀಡುವಲ್ಲಿ ಅರಣ್ಯ ಇಲಾಖೆ ಹಾಗೂ ಗಣಿ‌ ಇಲಾಖೆಯಿಂದಲೂ ಅಕ್ರಮ‌ ನಡೆದಿತ್ತು. ಇದರಲ್ಲಿ ರಾಜ್ಯದ 29 ಲಕ್ಷ ಟನ್ ಅದಿರನ್ನು ಲೂಟಿ ಮಾಡಿ 884 ಕೋಟಿ ರೂ. ಆದಾಯ ಪಡೆದಿದ್ದಾರೆ ಎನ್ನುವ ಆರೋಪವಿದೆ. ಈ ಪ್ರಕರಣದಲ್ಲಿ ಶ್ರೀನಿವಾಸರೆಡ್ಡಿ, ಜನಾರ್ದನ ರೆಡ್ಡಿ, ಆಪ್ತ ಅಲಿಖಾನ್, ಗಣಿ ಇಲಾಖೆಯ ನಿರ್ದೇಶಕ ರಾಜಗೋಪಾಲ್, ಆಂಧ್ರದ ಮಾಜಿ ಸಚಿವೆ ಸಬಿತಾ ಇಂದ್ರಾರೆಡ್ಡಿ, ನಿವೃತ್ತ ಐಎಎಸ್ ಅಧಿಕಾರಿ ಕೃಪಾನಂದ, ಶ್ರೀಲಕ್ಷ್ಮೀ ಇದ್ದಾರೆ.

2009ರಲ್ಲಿ ಆಂಧ್ರದ ಅಂದಿನ ಮುಖ್ಯಮಂತ್ರಿ ಕಾಂಗ್ರೆಸ್‌ನ ರೋಸಯ್ಯ ಅವರು 2009 ರಲ್ಲಿ ಈ ಪ್ರಕರಣವನ್ನು‌ ಸಿಬಿಐ ತನಿಖೆಗೆ ನೀಡಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 2011ರ ಸೆಪ್ಟೆಂಬರ್ 5 ರಂದು ಜನಾರ್ದನ ರೆಡ್ಡಿ, ಶ್ರೀನಿವಾಸರೆಡ್ಡಿ ಸಿಬಿಐನಿಂದ ಬಂಧಿತರಾಗಿ, ಮೂರುವರೆ ವರ್ಷಗಳ ಕಾಲ ಚಂಚಲಗುಡ ಮತ್ತು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ವಾಸ ಅನುಭವಿಸಿದ್ದರು. ಪ್ರಕರಣದಲ್ಲಿ ಟಪಾಲ್ ಗಣೇಶ ಮತ್ತವರ ಸಹೋದರ ಏಕಾಂಬರಂ, ಪ್ರಮುಖ ಸಾಕ್ಷಿಯಾಗಿದ್ದು, ಈಗಾಗಲೇ ಸಿಬಿಐ 3400 ಕ್ಕೂ ಹೆಚ್ಚು ದಾಖಲೆಗಳ‌ ಪರಿಶೀಲನೆ ಹಾಗೂ 219ಕ್ಕೂ ಹೆಚ್ವು ಸಾಕ್ಷಿಗಳ ವಿಚಾರಣೆ ನಡೆಸಿದೆ. ಈ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಸೇರಿದಂತೆ ಎಲ್ಲಾ ಆರೋಪಿಗಳು ಜೈಲಿಗೆ ಹೋಗೇ ಹೋಗ್ತಾರೆ ಎಂದು ಟಪಾಲ್ ಗಣೇಶ್ ವಿಶ್ವಾಸ ವ್ಯಕ್ತಪಡಿಸಿದ್ದರು. ಈ ಹಿಂದೆ ಜನಾರ್ದನ ರೆಡ್ಡಿ ಹಾಗೂ ಅವರ ಪಟಾಲಂನಿಂದ ಅನುಭವಿಸಿದ್ದ ಕಿರುಕುಳದ ಬಗ್ಗೆಯೂ ಇಂಚಿಂಚಾಗಿ ತೆರೆದಿಟ್ಟಿದ್ದರು.

Share This Article