ಕೊಪ್ಪಳ: ಗಂಗಾವತಿಯ ಹಾಲಿ ಶಾಸಕ ಜನಾರ್ದನ ರೆಡ್ಡಿ (Janardhan Reddy), ಮಾಜಿ ಸಚಿವ ಶ್ರೀರಾಮುಲು (Sriramulu) ಮುನಿಸು ಮರೆತು ಮತ್ತೆ ಒಂದಾಗಿದ್ದಾರೆ.
ಬಳ್ಳಾರಿ ಜಿಲ್ಲೆಯ ರಾಜಕಾರಣದಿಂದ ಹಿಡಿದು ರಾಜ್ಯ, ರಾಷ್ಟ್ರಮಟ್ಟದಲ್ಲಿ ಒಂದು ಕಾಲದಲ್ಲಿ ಸದ್ದು ಮಾಡಿದ್ದ ರೆಡ್ಡಿ-ರಾಮುಲು ಈ ಜೋಡಿ ಇತ್ತೀಚೆಗಷ್ಟೇ ವೈಯಕ್ತಿಕ ಭಿನ್ನಾಭಿಪ್ರಾಯಗಳು ಕೆಲವು ಆಸ್ತಿ ಜಗಳಗಳಿಂದಾಗಿ ದೂರವಾಗಿದ್ದರು. ಬಿಜೆಪಿ ಹಿರಿಯ ನಾಯಕರು ಇವರನ್ನು ಒಂದು ಮಾಡಲು ನೋಡಿದ್ದರು. ಆದರೆ, ನಾವು ಒಂದಾಗುವ ಮಾತೇ ಇಲ್ಲ. ಪರಸ್ಪರ ಮುಖವನ್ನು ನೋಡುವುದಿಲ್ಲ ಎನ್ನುವ ಶಪಥ ತೊಟ್ಟಿದ್ದರು. ಆದರೆ, ದಿಢೀರ್ ಈಗ ಮನಸು ಬದಲಾಯಿಸಿದ್ದಾರೆ. ನಮ್ಮ ನಡುವೆ ಯಾವುದೇ ಜಗಳಗಳಿಲ್ಲ. ನಾವು ಚೆನ್ನಾಗಿದ್ದೇವೆ ಎಂದು ಒತ್ತಿ ಹೇಳುತ್ತಿದ್ದಾರೆ. ಇದನ್ನೂ ಓದಿ: ಡಿಕೆಶಿಯನ್ನು ಮುಗಿಸಲು ನಡೆಸಿದ ಸಮಾವೇಶ: ಆರ್.ಅಶೋಕ್
ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಧ್ಯಕ್ಷತೆಯಲ್ಲಿ ಇಂದು ನಡೆದ ಬಳ್ಳಾರಿ ವಿಭಾಗದ ಸಂಘಟನಾ ಸಭೆಯಲ್ಲಿ ಒಂದೇ ವೇದಿಕೆಯಲ್ಲಿ ಅಕ್ಕ-ಪಕ್ಕ ಕುಳಿತು ಕುಶಲೋಪರಿ ವಿಚಾರಿಸಿದರು. ಕೆಲ ನಿಮಿಷ ಗಮನಾರ್ಹವಾಗಿ ಚರ್ಚೆ ನಡೆಸಿದರು. ಭಾಷಣದಲ್ಲೂ ನಾವಿಬ್ಬರೂ ಒಂದಾಗಿದ್ದೇವೆ. ಯಾರು ಎಷ್ಟೇ ಹುಳಿ ಹಿಂಡಿದರೂ ಕಿವಿಗೊಡುವುದಿಲ್ಲ. ಹಿಂದೆಯೂ, ಮುಂದೆಯೂ ಜೀವದ ಗೆಳೆಯರಾಗಿದ್ದೇವೆ ಎಂದು ಪ್ರಸ್ತಾಪಿಸಿ ಒಗ್ಗಟ್ಟಿನ ಸಂದೇಶ ರವಾನಿಸಿದರು.
ರೆಡ್ಡಿ-ಶ್ರೀರಾಮುಲು ಆಪ್ತಮಿತ್ರರು. ಅಕ್ರಮ ಗಣಿಗಾರಿಗೆ ಆರೋಪದ ಮೇಲೆ ಜನಾರ್ದನ ರೆಡ್ಡಿ ಜೈಲು ಸೇರಿದರೂ ಅವರನ್ನು ಬಿಟ್ಟುಕೊಟ್ಟಿರಲಿಲ್ಲ. ಆದರೆ, ಇತ್ತೀಚೆಗೆ ಸಂಡೂರು ವಿಧಾನಸಭೆ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಶ್ರೀರಾಮುಲು ಸಕ್ರಿಯವಾಗಿ ಪ್ರಚಾರ ಮಾಡಲಿಲ್ಲ. ಇದೇ ಕಾರಣಕ್ಕೆ ಬಿಜೆಪಿ ಅಭ್ಯರ್ಥಿ ಆಗಿದ್ದ ಬಂಗಾರು ಹನುಮಂತು ಅವರ ಸೋಲಾಯಿತು ಎಂದು ಜನಾರ್ದನ ರೆಡ್ಡಿ ಹೈಕಮಾಂಡ್‌ಗೆ ದೂರು ನೀಡಿದ್ದರು. ಇದೊಂದು ಘಟನೆಯಿಂದ ರೆಡ್ಡಿ-ರಾಮುಲು ನಡುವಿನ ಬಿರುಕಿಗೆ ಕಿಡಿ ಹೊತ್ತಿಸಿತ್ತು. ಇದರ ಜೊತೆಗೆ ಆಂತರಿಕವಾಗಿ ಇದ್ದ ಕೆಲ ಖಾಸಗಿ ಭಿನ್ನಾಭಿಪ್ರಾಯದಿಂದ ಇಬ್ಬರು ಸಿಡಿದೆದ್ದು, ಏಕವಚನದಲ್ಲೇ ಬೈದಾಡಿಕೊಂಡಿದ್ದರು. ಬಳ್ಳಾರಿಯಲ್ಲಿದ್ದ ತಮ್ಮ ಮನೆಗಳಿಗೆ ಪರಸ್ಪರ ಸಂಪರ್ಕ ಕಲ್ಪಿಸುವ ದ್ವಾರ(ಗೇಟ್)ಗಳನ್ನು ಬಂದ್ ಮಾಡಿಕೊಂಡಿದ್ದರು. ಇದನ್ನೂ ಓದಿ: ಕೆಲವರು ಉದ್ದೇಶಪೂರ್ವಕವಾಗಿ ಧರ್ಮಸ್ಥಳದ ತೇಜೋವಧೆ ಮಾಡುತ್ತಿರಬಹುದು: ದಿನೇಶ್ ಗುಂಡೂರಾವ್
ಮೇಲ್ನೋಟಕ್ಕೆ ರಾಜಕೀಯ ಕಿತ್ತಾಟವೇ ಆಗಿದ್ದರೂ ರೆಡ್ಡಿ-ರಾಮುಲು ನಡುವೆ ಆಸ್ತಿ ಕಲಹಗಳಿವೆ. ಇದೇ ಕಾರಣಕ್ಕೆ ದೂರವಾಗಿದ್ದಾರೆ ಎಂಬುದು ಅವರ ಬೆಂಬಲಿಗರ ಸ್ಪಷ್ಟೋಕ್ತಿ ಆಗಿತ್ತು. ಆದರೆ ಈಗ ಇಬ್ಬರು ಯಾರ ಮಧ್ಯಸ್ಥಿಕೆ ಇಲ್ಲದೇ ಒಂದಾಗಿ ಬಿಜೆಪಿ ಹೈಕಮಾಂಡ್‌ಗೆ ಶಾಕ್ ನೀಡಿದ್ದಾರೆ. ಮರು ಹೊಂದಾಣಿಕೆ ಹಿಂದಿನ ಮರ್ಮವೇನು? ಎನ್ನುವ ಪ್ರಶ್ನೆ ಕೇವಲ ಸಾರ್ವಜನಿಕರಿಗೆ ಮಾತ್ರವಲ್ಲ, ಬಿಜೆಪಿ ರಾಜ್ಯ ಮುಖಂಡರಲ್ಲೂ ಮೂಡಿದೆ.