– ಹಳ್ಳಿ ಭಾಷೆಯಲ್ಲಿ ಮಾತನಾಡಿದ್ದೇನೆ ಎಂದು ಸಮಜಾಯಿಷಿ
ರಾಮನಗರ: ಮಾಗಡಿ ತಹಶೀಲ್ದಾರ್‌ಗೆ (Magadi Tahsildar) ಜನರಿಂದ ಚಪ್ಪಲಿಯಲ್ಲಿ ಹೊಡೆಸುತ್ತೇನೆ ಎಂದಿದ್ದ ಶಾಸಕ ಹೆಚ್.ಸಿ.ಬಾಲಕೃಷ್ಣ (HC Blakrishna) ಇದೀಗ ತಹಶೀಲ್ದಾರ್ ಶರತ್ ಕುಮಾರ್ ಬಳಿ ಕ್ಷಮೆಕೋರಿದ್ದಾರೆ.
ಇತ್ತೀಚೆಗೆ ಸಾರ್ವಜನಿಕರು ಅಹವಾಲು ಸ್ವೀಕರಿಸುವ ವೇಳೆ ತಹಶೀಲ್ದಾರ್‌ಗೆ ತರಾಟೆ ತೆಗೆದುಕೊಂಡಿದ್ದ ಶಾಸಕ, ಕೆಲಸ ಮಾಡದಿದ್ದರೆ ಜನರಿಂದ ಚಪ್ಪಲಿಯಲ್ಲಿ ಹೊಡೆಸುತ್ತೇನೆ ಎಂದಿದ್ದರು. ಈ ಬಗ್ಗೆ ಸಾಕಷ್ಟು ಟೀಕೆಗಳೂ ಕೂಡ ವ್ಯಕ್ತವಾಗಿತ್ತು. ಭಾನುವಾರ ಸರ್ಕಾರಿ ನೌಕರರ ತಾಲೂಕು ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಾಸಕ, ಅದೇ ವೇದಿಕೆಯಲ್ಲಿದ್ದ ತಹಶೀಲ್ದಾರ್‌ಗೆ ಕ್ಷಮೆಯಾಚನೆ ಮಾಡಿದ್ದಾರೆ. ಇದನ್ನೂ ಓದಿ: ಉಮರ್ ಖಾಲಿದ್, ಶರ್ಜೀಲ್ ಇಮಾಮ್ ಜಾಮೀನು ಅರ್ಜಿ ವಜಾ
ಜನರ ಕೆಲಸ ಮಾಡುತ್ತಾರೆ ಎಂದು ಒಂದು ರೂ. ಅಪೇಕ್ಷಿಸದೆ ಅಧಿಕಾರಿಯನ್ನ ತಾಲೂಕಿಗೆ ಕರೆತಂದೆ. ಆದರೆ ತಹಶೀಲ್ದಾರ್ ರೈತರ ಸಮಸ್ಯೆ ಬಗೆಹರಿಸದಿದ್ದರೆ ಹೇಗೆ? ಹಳ್ಳಿಗಾಡಿನಿಂದ ಬಂದಿರುವ ನಾನು ಸಹಜವಾಗಿ ಆಡುಭಾಷೆಯಲ್ಲಿ ನೇರವಾಗಿ ಮಾತನಾಡಿದ್ದೇನೆ. ನಿಮ್ಮ ಮನಸ್ಸಿಗೆ ನೋವಾಗಿದ್ದರೆ ಕ್ಷಮಿಸಿ. ಜನರಿಗೆ ನ್ಯಾಯ ಕೊಡುವ ಕೆಲಸ ಮಾಡಬೇಕು. ಜನರು ಅಧಿಕಾರಿಗಳನ್ನು ಬೈಯ್ಯುವುದಿಲ್ಲ, ನನ್ನನ್ನು ಬೈಯ್ಯುತ್ತಾರೆ. ಯಾರಿಗೂ ಮನಸ್ಸಿಗೆ ನೋವಾಗುವಂತೆ ಬೈಯ್ಯುವ ಉದ್ದೇಶ ಇರಲಿಲ್ಲ. ಸಮಯ, ಸಂದರ್ಭ ಹಾಗೂ ಸನ್ನಿವೇಶ ಹಾಗೆ ಮಾಡಿಸಿದೆ ಎಂದು ಸಮಜಾಯಿಷಿ ನೀಡಿದ್ದಾರೆ. ಇದನ್ನೂ ಓದಿ: ಅಸ್ಸಾಂನಲ್ಲಿ 5.1 ತೀವ್ರತೆಯ ಪ್ರಬಲ ಭೂಕಂಪ – ಮನೆಯಿಂದ ಹೊರಗೆ ಓಡಿದ ಜನ
ರೈತನಿಂದ ಅಧಿಕಾರಿಗಳು ಲಂಚ ಪಡೆದರೆ ಹೇಗೆ? ಕೂಲಿ ಮಾಡಿ ರೈತ ಲಂಚ ನೀಡಬೇಕು. ಐಎಎಸ್ ಅಧಿಕಾರಿ ಡಿ.ಕೆ.ರವಿ ಸತ್ತಾಗ ಇಡೀ ಜಿಲ್ಲೆಯ ಜನರು ಕಣ್ಣೀರು ಹಾಕಿದ್ದರು. ಅಂತಹ ಅಧಿಕಾರಿಗಳು ಇದ್ದರೆ ನಾವ್ಯಾಕೆ ಬೈಯ್ಯುತ್ತೇವೆ? ಈಗ ದುರ್ಬಿನ್ ಹಾಕಿ ಒಳ್ಳೆಯ ಅಧಿಕಾರಿಗಳನ್ನು ಹುಡುಕುವ ಸ್ಥಿತಿಗೆ ಬಂದಿದ್ದೇವೆ. ನಾನು ಯಾರಿಂದಲೂ ಒಂದು ರೂಪಾಯಿ ಕೇಳುವುದಿಲ್ಲ. ನನ್ನ ಕ್ಷೇತ್ರದ ಜನತೆಗೆ ನ್ಯಾಯ ಸಿಗಬೇಕು ಎಂಬುವುದು ನನ್ನ ಉದ್ದೇಶ. ಅಧಿಕಾರಿಗಳನ್ನು ಬೈಯ್ಯುವ ಇರಾದೆ ಖಂಡಿತ ಇಲ್ಲ. ಈ ಎಲ್ಲ ನೋವಿನಿಂದ ತಹಶೀಲ್ದಾರ್ ಶರತ್ ಕುಮಾರ್ ಅವರಿಗೆ ಬೈದಿದ್ದೇನೆ ಅಷ್ಟೆ. ಬೇರೆ ವಿಚಾರ ಮನಸ್ಸಿನಲ್ಲಿ ಇಟ್ಟುಕೊಂಡು ಮಾತನಾಡಿಲ್ಲ. ಒಳ್ಳೆ ಕೆಲಸ ಮಾಡಿದರೆ ಅವರನ್ನು ಪೂಜಿಸುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸುಳ್ಯ | ರಾತ್ರಿ ಮನೆಯಲ್ಲಿ ಮಲಗಿದ್ದ ತಾಯಿ ಮಗು ಕೆರೆಯಲ್ಲಿ ಶವವಾಗಿ ಪತ್ತೆ

