ಬಿಜೆಪಿ ವಿರುದ್ಧ ಮತ್ತೆ ಮುನಿದ ಗೂಳಿಹಟ್ಟಿ – ಮುಂದಿನ ಚುನಾವಣೆಗೆ ಪಕ್ಷೇತರನಾಗಿ ಸ್ಪರ್ಧಿಸೋ ಇಂಗಿತ

Public TV
2 Min Read
ctd gulihatti shekhar

ಚಿತ್ರದುರ್ಗ: ಅನರ್ಹ ಶಾಸಕರು ಬಿಜೆಪಿಯಿಂದ ಗೆದ್ದು ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಕಮಲದ ಭದ್ರಕೋಟೆ ಎನಿಸಿರುವ ಕೋಟೆನಾಡು ಚಿತ್ರದುರ್ಗದಲ್ಲಿ ಬಿಜೆಪಿಗೆ ತಲೆನೋವು ಶುರುವಾಗಿದೆ. ಸಚಿವ ಸ್ಥಾನ ಸಿಗಲ್ಲ ಅಂತ ಬಿಜೆಪಿಗೆ ಸೆಡ್ಡು ಹೊಡೆಯಲು ಹೊಸದುರ್ಗ ಕ್ಷೇತ್ರದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ರೆಡಿಯಾಗ್ತಿದ್ದಾರೆ.

ಹೊಸದುರ್ಗದ ಬನಶಂಕರಿ ಭವನದಲ್ಲಿ ಸ್ವಾಭಿಮಾನಿ ಗೂಳಿಹಟ್ಟಿ ಶೇಖರ್ ಅಭಿಮಾನಿಗಳ ಬಳಗದಿಂದ ಪ್ರತ್ಯೇಕ ಸಭೆ ನಡೆಸಲಾಗಿದೆ. ಮುಂದಿನ ರಾಜಕೀಯ ನಿರ್ಧಾರಗಳ ಬಗ್ಗೆ ಸಾರ್ವಜನಿಕರ ಸಭೆಯಲ್ಲಿ ಚರ್ಚಿಸಲಾಯಿತು. 2008ರಲ್ಲಿ ಸಿಎಂ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಬರಲು ಮೊಟ್ಟ ಮೊದಲು ಬಿಜೆಪಿ ಜೊತೆ ಕೈಜೋಡಿಸಿದ್ದ ಅಂದಿನ ಪಕ್ಷೇತರ ಶಾಸಕ ಗೂಳಿಹಟ್ಟಿ ಶೇಖರ್, ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಜಯಭೇರಿ ಬಾರಿಸಿದ್ದರು ಸಹ ಸಚಿವ ಸ್ಥಾನ ನೀಡದೇ ವಂಚಿಸಲಾಗ್ತಿದೆ ಎಂಬ ಬೇಸರದಿಂದ ಬಿಜೆಪಿ ಸರ್ಕಾರದ ವಿರುದ್ಧ ಮುನಿದಿದ್ದಾರೆ.

CM BSY 1

ಈವರೆಗೆ ಬೋವಿ ಸಮುದಾಯಕ್ಕೆ ಆದ್ಯತೆ ನೀಡಬೇಕೆಂಬ ಅಜೆಂಡಾದೊಂದಿಗೆ ಸಚಿವ ಸ್ಥಾನ ಕೇಳುತ್ತಿದ್ದ ಗೂಳಿಹಟ್ಟಿ ಶೇಖರ್ ಈಗ ಅನರ್ಹ ಶಾಸಕರಿಗೆ ನೀಡಿರೋ ಗೌರವ ಹಾಗೂ ಸ್ಥಾನಮಾನ ತಮಗೂ ನೀಡುವಂತೆ ಕೇಳುತ್ತಿದ್ದಾರೆ. 2008ರಲ್ಲಿ ಸರ್ಕಾರ ಬರಲು ಬೆಂಬಲ ನೀಡಿದ್ದ ನನಗೆ ಮೆಡಿಕಲ್ ಕಾಲೇಜು, ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಸಹ ನೀಡಲಿಲ್ಲ. ಆದರೆ ಇದೀಗ ಬಿಜೆಪಿಗೆ ಸರ್ಕಾರ ಬರಲು ಕಾರಣರಾದ ಅನರ್ಹ ಶಾಸಕರಿಗೆ ರೆಡ್ ಕಾರ್ಪೆಟ್ ಹಾಕಿ ಬಿಜೆಪಿ ನಾಯಕರು ಸ್ವಾಗತಿಸಿದ್ದೂ, ಹಣ, ಅಧಿಕಾರ ನೀಡುತ್ತಿದ್ದಾರೆ. ಆದರೆ ನನಗೆ ಮಾತ್ರ ತಾರತಮ್ಯ ಮಾಡುತ್ತಿರುವ ಬಿಜೆಪಿ ನಾಯಕರು ತಮ್ಮನ್ನು ಸಹ 18ನೇ ಅನರ್ಹ ಶಾಸಕ ಅಂತ ಪರಿಗಣಿಸಿ ಸಚಿವ ಸ್ಥಾನ ನೀಡಲಿ ಎಂದು ಇತ್ತೀಚೆಗೆ ಗೂಳಿಹಟ್ಟಿ ಶೇಖರ್ ಆಕ್ರೋಶ ಹೊರಹಾಕಿದ್ದರು.

BJP 2

ಹೊಸದುರ್ಗದಲ್ಲಿ ಬೆಂಬಲಿಗರ ಸಭೆಯಲ್ಲಿ ತಮ್ಮ ಮನಸಿನ ನೋವನ್ನು ವ್ಯಕ್ತಪಡಿಸಿದ ಗೂಳಿಹಟ್ಟಿ ಶೇಖರ್ ಅವರು, ನಾನೊಬ್ಬ ಶಾಸಕನಾದರೂ ಬಿಜೆಪಿ ನನ್ನನ್ನು ಕಡೆಗಣಿಸುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ ಹೊಸದುರ್ಗ ತಾಲೂಕು ಬಿಜೆಪಿ ಅಧ್ಯಕ್ಷರ ನೇಮಕ ವಿಚಾರದಲ್ಲಿ ನಾಮಕಾವಸ್ಥೆಗೂ ಸಹ ಶಾಸಕರ ಅಭಿಪ್ರಾಯವನ್ನು ಕೇಳಿಲ್ಲ. ಬಿಜೆಪಿ ಪಕ್ಷದ ನಾಯಕರ ಕಪಿಮುಷ್ಟಿಯಲ್ಲೇ ಇರಲಿ ಅಂತ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೆ ತೆರೆಮರೆಯಲ್ಲಿ ಅತೀ ಬೇಗ ಶಾಸಕರಾಗುವ ಬಯಕೆಯುಳ್ಳ ತಾಲೂಕಿನ ಬಿಜೆಪಿ ನಾಯಕರು ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದು, ಪಕ್ಷದ ವರಿಷ್ಠರಲ್ಲಿ ಚಾಡಿ ಹೇಳುತ್ತಿದ್ದಾರೆ. ಆದರೆ ಅವರಿಗೆ ಶಾಸಕರಾಗಲು ಅಷ್ಟೊಂದು ಬಯಕೆ ಇದ್ದರೆ ನನ್ನ ವಿರುದ್ಧ ಬಿಜೆಪಿಯಿಂದ ಸರ್ಧಿಸಲಿ ಅಂತ ಸವಾಲು ಹಾಕಿದರು. ಜೊತೆಗೆ ನಾನು ಇನ್ನೂ ಮೂರು ವರ್ಷ ಎಲ್ಲೂ ಹೋಗಲ್ಲ. ಬಿಜೆಪಿಯಲ್ಲಿ ಎಷ್ಟೇ ಕಿರುಕುಳವಿದ್ದರೂ ಇಲ್ಲೇ ಇರುತ್ತೇನೆ. ಆದರೆ ಮುಂದಿನ ಚುನಾವಣೆಗೆ ಪಕ್ಷೇತರನಾಗಿ ಸ್ಪರ್ಧಿಸುವ ಸಾಧ್ಯತೆ ಇರುವ ಬಗ್ಗೆ ಗೂಳಿಹಟ್ಟಿ ಶೇಖರ್ ತಿಳಿಸಿದರು.

gulihatti shekhar

ಒಂದು ವೇಳೆ ನಾನು ಬಿಜೆಪಿ ಬಿಟ್ಟರೆ ಮಾಜಿ ಶಾಸಕ ಗೋವಿಂದಪ್ಪ ಅವರ ಗೆಲುವು ಈ ಕ್ಷೇತ್ರದಲ್ಲಿ ಸುಲಭವಾಗಲಿದೆ. ಹೀಗಾಗಿ ನನ್ನ ಜೀವನಪರ್ಯಂತ ಗೋವಿಂದಪ್ಪನ ವಿರುದ್ಧ ಸ್ಪರ್ಧಿಸುತ್ತೇನೆ. ಗೋವಿಂದಪ್ಪ ಎಲ್ಲಿಯ ತನಕ ರಾಜಕಾರಣದಲ್ಲಿ ಇರುತ್ತಾರೋ ಅಲ್ಲಿಯ ತನಕ ನಾನು ರಾಜಕಾರಣ ಮಾಡ್ತೇನೆ ಎಂದು ಸ್ಪಷ್ಟಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *