ಬೆಂಗಳೂರು: ಕರ್ನಾಟಕದ ಸದನದಲ್ಲಿ ಬಹಳ ಕಡಿಮೆ ಬಾರಿ ಅಮಾನತುಗಳಾಗಿವೆ. ಮೊನ್ನೆ ದುರ್ಬೀನು ಹಾಕಿಕೊಂಡು ಹುಡುಕಿದರೆ ಸಿಗುವಷ್ಟು ಚಿಕ್ಕ ವಿಷಯಕ್ಕೆ 10 ಬಿಜೆಪಿ ಶಾಸಕರ ಅಮಾನತು ಘಟನೆ ನಡೆದಿದೆ. ಇದು ಅಕ್ಷಮ್ಯ ಕ್ರಮ ಎಂದು ಎಂದು ವಿಧಾನಸಭೆಯ (Vidhanasabhe) ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಅವರು ಅಭಿಪ್ರಾಯಪಟ್ಟರು.
ಬೆಂಗಳೂರಿನ `ಸಿಟಿಜನ್ಸ್ ಫಾರ್ ಡೆಮಾಕ್ರೆಸಿ’ ವತಿಯಿಂದ ನಗರದ ಗಾಂಧಿ ಭವನದಲ್ಲಿ ಏರ್ಪಡಿಸಿದ್ದ “ಶಾಸಕರ ಅಮಾನತು ಒಂದು ಚರ್ಚೆ” ಕಾರ್ಯಕ್ರಮದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿದರು. ಚಿಕ್ಕ ವಿಷಯವನ್ನೇ ದೊಡ್ಡ ವಿಷಯ ಮಾಡಿ ಸ್ಪೀಕರ್ ಮತ್ತು ಸರ್ಕಾರ ಶಾಸಕರನ್ನು ಅಮಾನತು ಮಾಡಿದ್ದು, ಅದು ಅಕ್ಷಮ್ಯ ಎಂದು ಅವರು ತಿಳಿಸಿದರು. ಇದರಲ್ಲಿ ಮುಖ್ಯಮಂತ್ರಿ, ಸಂಸದೀಯ ವ್ಯವಹಾರ ಸಚಿವರ ಪ್ರಮುಖ ಪಾತ್ರವೂ ಇದೆ. ಸದನದ ರಾಜಕೀಯ ದುರ್ಬಳಕೆಗೆ ಇದು ಸ್ಪಷ್ಟ ಉದಾಹರಣೆ ಎಂದು ತಿಳಿಸಿದರು.
Advertisement
Advertisement
ಸುಗಮ ಕಲಾಪ ನಡೆಯಲು ಆಡಳಿತ ಪಕ್ಷದ ಹೊಣೆಯೂ ಪ್ರಮುಖವಾದುದು. ದೇಶದಲ್ಲಿ ಕಾಂಗ್ರೆಸ್ (Congress) ಪಕ್ಷ 50-60 ವರ್ಷ ಆಡಳಿತ ಮಾಡಿದೆ. ಪೇಪರ್ ಹರಿದು ಹಾಕಿದ ಚಿಕ್ಕ ಘಟನೆಗೆ ಅಮಾನತಿನ ಶಿಕ್ಷೆ ಕೊಡುವುದು ಸರಿಯಲ್ಲ. ಇದು ವ್ಯವಸ್ಥೆಗೆ ಹೊಡೆತ ನೀಡುತ್ತದೆ ಎಂದು ತಿಳಿಸಿದರು.
Advertisement
ಊಟಕ್ಕೆ ವಿರಾಮ ಕೊಟ್ಟಿದ್ದರೆ ಘಟನೆಯೇ ನಡೆಯುತ್ತಿರಲಿಲ್ಲ. ಯೋಗೀಶ್ ಭಟ್ ಅವರು ಡೆಪ್ಯುಟಿ ಸ್ಪೀಕರ್ ಇದ್ದಾಗ ಪೇಪರ್ ವೆಯ್ಟನ್ನೇ ಅವರತ್ತ ಒಗೆದಿದ್ದರು. ಫೈಲುಗಳನ್ನೇ ಕಿತ್ತೆಸೆದಿದ್ದರು. ಆಗೆಲ್ಲ ಸಸ್ಪೆಂಡ್ ಮಾಡಿದ್ದರೇ? ಇದು ಕ್ಷಮಾರ್ಹವಲ್ಲ ಎಂದು ತಿಳಿಸಿದರು. ಹಿರಿಯ ಸಚಿವರು ವಿಪಕ್ಷದವರಿಗೂ ಮಾತಿನ ಅವಕಾಶ ಕೊಡಬೇಕೆಂದು ತಿಳಿಸಬೇಕಿತ್ತು. ಉಗುರು ತುದಿಯಲ್ಲಿ ಹೋಗುವುದನ್ನು ಖಡ್ಗ ತೆಗೆದುಕೊಂಡು ಕತ್ತರಿಸುವುದು ಶೋಭೆ ತರುವ ವಿಚಾರವಲ್ಲ ಎಂದು ಹೇಳಿದರು.
Advertisement
ಪಶ್ಚಿಮ ಬಂಗಾಳ (West Bengal), ಕೇರಳದಲ್ಲಿ (Kerala) ರಾಜ್ಯಪಾಲರನ್ನು ಸಹಿಸದ, ಅವರನ್ನು ಮಾತನಾಡಲು ಬಿಡದ ಸ್ಥಿತಿ ಬಂದಿದೆ. ಲೋಕಸಭೆಯಲ್ಲಿ ಏನಾಗುತ್ತಿದೆ? ವಂಶಪಾರಂಪರ್ಯ ಆಡಳಿತದ ಮನಸ್ಥಿತಿಯನ್ನು ಒಪ್ಪಿಕೊಂಡ ಜನರು ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಬಲಪಡಿಸಲು ಅಸಾಧ್ಯ ಎಂದು ಹೇಳಿದರು.
ಕರ್ನಾಟಕದಲ್ಲಿ ಒಳ್ಳೊಳ್ಳೆಯ ಮುಖ್ಯಮಂತ್ರಿ, ಸ್ಪೀಕರ್, ಪ್ರತಿಪಕ್ಷಗಳ ನಾಯಕರು ಕೆಲಸ ಮಾಡಿದ್ದಾರೆ. ಉತ್ತಮ ಕೊಡುಗೆಯನ್ನೂ ಕೊಟ್ಟಿದ್ದಾರೆ. 10 ಜನ ಬಿಜೆಪಿ (BJP) ಶಾಸಕರನ್ನು ಸಭಾಧ್ಯಕ್ಷ ಯು.ಟಿ.ಖಾದರ್ (UT Khader) ಅವರು ಅಮಾನತು ಮಾಡಿದ್ದರು. ಸದನದ ಒಳಗೆ ಅಂಗಿ ಬಿಚ್ಚಿ ಅದನ್ನು ತೂರಾಡಿಕೊಂಡು ಓಡಾಡಿದರೆ ನಮ್ಮ ಸದನದ ಘನತೆ ಹೆಚ್ಚಲು ಸಾಧ್ಯವಿದೆಯೇ? ಅಂಥ ಸಂದರ್ಭದಲ್ಲಿ ನಾನೂ ಅವರನ್ನು ಸಸ್ಪೆಂಡ್ ಮಾಡಿದ್ದೇನೆ ಎಂದು ವಿಶ್ಲೇಷಿಸಿದರು.
ಮತದಾನ ಮಾಡುವ ನಾವೆಲ್ಲರೂ ವ್ಯವಸ್ಥೆಯನ್ನು ಸರಿದಾರಿಗೆ ತರುವ ಜವಾಬ್ದಾರಿ ಹೊಂದಿದ್ದೇವೆ. ಸಂವಿಧಾನದ ಆಶಯದಂತೆ ಸಿಟಿಜನ್ಸ್ ಫಾರ್ ಡೆಮಾಕ್ರೆಸಿ ಸಂಸ್ಥೆ ಈ ಮುಕ್ತ ಚರ್ಚೆ ಏರ್ಪಡಿಸಿದೆ ಎಂದು ಅವರು ತಿಳಿಸಿದರು. ನಾಡಿನ ಜನ ಈ ವಿಷಯದ ಕುರಿತು ಇನ್ನಷ್ಟು ಚರ್ಚೆ ನಡೆಸಿ ವ್ಯವಸ್ಥೆಯಲ್ಲಿ ಬದಲಾವಣೆ ಆಗಲಿ ಎಂದು ಆಶಿಸಿದರು.
ಸಂವಿಧಾನ (Constitution) ರಚನೆ ಕೇವಲ ನಾಲ್ಕಾರು ದಿನಗಳಲ್ಲಿ ಆಗಿಲ್ಲ. ಹಲವು ವರ್ಷಗಳ ಕಾಲ ಇದಕ್ಕೆ ಬೇಕಾಗಿತ್ತು ಎಂದ ಅವರು, ಸಂವಿಧಾನ ಹೇಗಿರಬೇಕು ಎಂಬ ಕುರಿತು ಎರಡು ವರ್ಷಕ್ಕೂ ಹೆಚ್ಚು ಕಾಲ ಮುಕ್ತ ಚರ್ಚೆ ನಡೆದಿತ್ತು. ಬಳಿಕ ಶ್ರೇಷ್ಠ ಸಂವಿಧಾನ ಸಿಕ್ಕಿದೆ ಎಂದು ವಿವರಿಸಿದರು. ಸಂವಿಧಾನದ ಆಶಯ ಕಾಪಾಡುವ ಜಾಗೃತಿಯನ್ನು ಜನರಲ್ಲಿ ಮೂಡಿಸಬೇಕು ಎಂದು ತಿಳಿಸಿದರು.
ಕರ್ನಾಟಕದ ಸಂಸದೀಯ ವ್ಯವಸ್ಥೆಯು ಜಗತ್ತಿಗೇ ಇಡೀ ವಿಶ್ವಕ್ಕೇ ಮಾದರಿ. ಇಂಗ್ಲೆಂಡ್ ಕಣ್ಣು ಬಿಡುವ ಮೊದಲೇ 12ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪದ ಮೂಲಕ ಇಡೀ ಜಗತ್ತಿಗೇ ಪ್ರಜಾಪ್ರಭುತ್ವ ವ್ಯವಸ್ಥೆ ಹೇಗಿರಬೇಕು ಎಂದು ತಿಳಿಸಿದವರು. ನಾವು ಅದಕ್ಕಾಗಿ ಹೆಮ್ಮೆ ಪಡಬೇಕು ಎಂದು ವಿಶ್ಲೇಷಿಸಿದರು. ಮೈಸೂರು ರಾಜರು 1881ರಲ್ಲಿ ರಾಜರ ಆಡಳಿತ ಇದ್ದರೂ ರಾಜ್ಯವು ಪ್ರಜೆಗಳ ಧ್ವನಿ ಆಗಬೇಕು ಎಂಬುದನ್ನು ತಿಳಿಸಿಕೊಟ್ಟವರು ಎಂದು ನುಡಿದರು. ತಪ್ಪುಗಳಾಗುತ್ತದೆ, ಅದನ್ನು ಸರಿಪಡಿಸಲು ನೂರೆಂಟು ವಿಧಾನಗಳಿವೆ. ಅದರ ಕುರಿತು ಯೋಚಿಸಬೇಕೇ ಹೊರತು ಕಾಲಿಗೆ ಮುಳ್ಳು ಚುಚ್ಚಿದೆ ಎಂದು ಕಾಲನ್ನೇ ತುಂಡರಿಸುವ ವೈದ್ಯಕೀಯ ಪ್ರವೃತ್ತಿ ಜಾರಿಯಾದರೆ ಅದು ಸಮರ್ಪಕವಲ್ಲ. ಅಂತೆಯೇ ಕರ್ನಾಟಕದ ಶಾಸಕರ ಅಮಾನತು ಘಟನೆ ಪ್ರಜಾಪ್ರಭುತ್ವ ವಿರೋಧಿ ನಿಲುವೆನ್ನದೆ ಬೇರೇನು ಹೇಳಲು ಸಾಧ್ಯ ಎಂದು ತಿಳಿಸಿದರು.
ಜಗತ್ತಿನಲ್ಲಿ ಇನ್ನೂ ರಾಜಪದ್ಧತಿ, ಸರ್ವಾಧಿಕಾರ ಇರುವ ಅನೇಕ ದೇಶಗಳಿವೆ. ಕ್ಯಾಪಿಟಲಿಸ್ಟ್, ಸೋಷಿಯಲಿಸ್ಟ್ ದೇಶಗಳನ್ನೂ ನಾವು ನೋಡಿದ್ದೇವೆ. ಪ್ರಜಾಪ್ರಭುತ್ವದಲ್ಲಿ ಅನೇಕ ರೀತಿ ಇದ್ದು, ಜಗತ್ತಿನಲ್ಲಿ ಭಾರತ ಅತ್ಯುತ್ತಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದೆ ಎಂದು ಅವರು ಅಭಿಪ್ರಾಯಪಟ್ಟರು. ನಾವು ವ್ಯವಸ್ಥೆಯನ್ನು ಮಾದರಿಯಾಗಿ ನಡೆಸಲು ಶ್ರೇಷ್ಠ ಸಂವಿಧಾನವೇ ಕಾರಣ. ಗುಡ್ಡಗಾಡು ನಿವಾಸಿ ಗೌರವಾನ್ವಿತ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿಯಾಗಲು, ರೈಲ್ವೆ ಸ್ಟೇಷನ್‍ನಲ್ಲಿ ಚಹಾ ಮಾರಾಟ ಮಾಡುತ್ತಿದ್ದ ನರೇಂದ್ರ ಮೋದಿಯವರು ಪ್ರಧಾನಿಯಾಗಲು ನಮ್ಮ ಶ್ರೇಷ್ಠ ಸಂವಿಧಾನವೇ ಕಾರಣ ಎಂದು ತಿಳಿಸಿದರು.
ಸಮಾಜದಲ್ಲಿ ಸಮಾನತೆಗೆ ಸಂವಿಧಾನವೇ ಕಾರಣ. ಸಂವಿಧಾನಕ್ಕೆ ಗೌರವ ನೀಡಬೇಕು. ಅದಕ್ಕೆ ಕಾರಣಕರ್ತರಾದ ಡಾ. ಅಂಬೇಡ್ಕರರನ್ನು ನಾವೆಲ್ಲ ಗೌರವಿಸಿ ಅಭಿನಂದಿಸಬೇಕು ಎಂದ ಅವರು, ಅವರ ಕೊಡುಗೆ ಅದ್ಭುತ ಎಂದರು. ಇವತ್ತು ಮೋದಿಯವರು ಜಗತ್ತಿನ ನಾಯಕರಾಗಿದ್ದಾರೆ. ಅದಕ್ಕೆ ಈ ಸಂವಿಧಾನದ ಕೊಡುಗೆ ಅನನ್ಯ ಎಂದರು.
ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ, ಪತ್ರಿಕಾರಂಗದ ಸದುಪಯೋಗ ಆಗಿದೆ. ಆದರೆ, ನ್ಯೂನತೆಗಳು, ದೋಷಗಳು ಬೆಳೆಯುತ್ತಿವೆ. ಅವನ್ನು ಸರಿಪಡಿಸುವ ಜವಾಬ್ದಾರಿ ನಮ್ಮದು. ಚುನಾವಣೆ ಸುಧಾರಣೆ ವ್ಯವಸ್ಥೆಗಾಗಿ ನಾನು ಸ್ಪೀಕರ್ ಆಗಿ ಶ್ರಮಿಸಿದ್ದೆ ಎಂದು ತಿಳಿಸಿದರು. ಸಮಾಜದಲ್ಲಿ ಜಾಗೃತ ಸ್ಥಿತಿಯಿಂದ ವಿಷವರ್ತುಲದಿಂದ ಹೊರಬರಲು ಸಾಧ್ಯವಿದೆ. ಯುವಕರು ನನ್ನ ಮತ ಮಾರಾಟಕ್ಕಿಲ್ಲ ಎಂಬ ಮಾತನ್ನು ನಂಬಿಕೆಯಿಂದ ಪ್ರತಿಜ್ಞೆಯಾಗಿ ಸ್ವೀಕರಿಸಿ ಅನುಷ್ಠಾನಕ್ಕೆ ತರಬೇಕೆಂದು ತಿಳಿಸಿದ್ದೆ ಎಂದರು. ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ, ಪತ್ರಿಕಾರಂಗ ಮೇಲ್ಪಂಕ್ತಿ ಆಗಬೇಕಿದೆ. ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಒಂದು ರಾಷ್ಟ್ರ ಒಂದು ಚುನಾವಣೆಯ (One Nation One Election) ವಿಚಾರವನ್ನೂ ಪ್ರತಿಪಾದಿಸಿದ್ದೆ. ಆದರೆ ಅದರ ಕುರಿತು ಮಾತನಾಡಲೊಲ್ಲದ ಕಾಂಗ್ರೆಸ್ಸಿಗರು ಬಿಜೆಪಿ ಮುಖಂಡರ ಮಾತಿಗೂ ಅವಕಾಶ ಕೊಡಲಿಲ್ಲ. ಚರ್ಚೆಯೇ ಬೇಡ ಎಂಬ ಮಾನಸಿಕತೆ ಸರಿಯಲ್ಲ ಎಂದು ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ (DH Shankaramurthy) ಅವರು ಮಾತನಾಡಿ, 10 ಶಾಸಕರ ಅಮಾನತು ಮಾಡಿದ್ದು, ಸಭೆಯಿಂದ ಹೊರಕ್ಕೆ ಹಾಕಿದ್ದನ್ನು ನೋಡಿದರೆ, ಅದು ಪಿಕ್ ಪಾಕೆಟ್ ಮಾಡಿದವನಿಗೆ ಮರಣ ದಂಡನೆ ಕೊಟ್ಟಂತೆ ಎಂದು ವಿಶ್ಲೇಷಿಸಿದರು.
ಇವತ್ತಿನ ಮುಖ್ಯಮಂತ್ರಿಗಳ ಬಗ್ಗೆ ಮಾತನಾಡದಿರುವುದೇ ಒಳ್ಳೆಯದು. ವಿಧಾನಸಭೆಯಲ್ಲಿ ಪೈಲ್ವಾನರಂತೆ ತೊಡೆ ತಟ್ಟಿದವರು ಅವರು. ಸಂಸದೀಯ ವ್ಯವಹಾರಗಳ ಸಚಿವರ ನಡೆ ಬೇಸರ ತಂದಿದೆ ಎಂದು ತಿಳಿಸಿದರು. ಅವರು ನಿರ್ಣಯ ಮಂಡಿಸಿದ್ದಾರೆ. ಮುಂದಿನ ಬಾರಿ ವಜಾ ಕೂಡ ಮಾಡಬಹುದೇನೋ ಎಂದು ನೋವಿನಿಂದ ನುಡಿದರು. ನಾವೇನೂ ಎದೆಗುಂದಬೇಕಿಲ್ಲ. ಕ್ಷುಲ್ಲಕ ರಾಜಕಾರಣದಿಂದ ನಿರಾಶರಾಗದಿರಿ ಎಂದು ತಿಳಿಸಿದರು.
ಕೊಲೆ ಮಾಡಿದವರಿಗೂ ಯಾಕೆ ಕೊಲೆ ಮಾಡಿದ ಎಂದು ಕೇಳುತ್ತಾರೆ. ಆದಷ್ಟು ಕಡಿಮೆ ಅಂದರೆ, ಜೀವಂತ ಇರುವಷ್ಟು ದಿನ ಜೈಲಿಗೆ ಹಾಕುತ್ತಾರೆ. ಪ್ರಜಾಪ್ರಭುತ್ವ ಎಂದರೆ ಕಾಂಗ್ರೆಸ್ ಎಂದು ಎಲ್ಲಿದೆ ಸ್ವಾಮಿ ಎಂದು ಕೇಳಿದರು. ಪೇಪರ್ ಹರಿದೆಸೆದುದನ್ನಷ್ಟೇ ನೋಡಿದರೆ ಅಪರಾಧ ಎನಿಸುತ್ತದೆ. ಅದರ ಹಿನ್ನೆಲೆ ಗಮನಿಸಬೇಕು ಎಂದು ವಿವರಿಸಿದರು.
2009ರ ಡಿಸೆಂಬರ್ 30ರಂದು ಪೇಪರ್ ವೆಯ್ಟ್ ಎಸೆದುದನ್ನೇ ಕ್ಷಮಿಸಿದ್ದರು. ತೊಡೆ ತಟ್ಟಿದ್ದು, ಬಾಗಿಲು ಒದ್ದಿದ್ದು ಮರೆತು ಹೋಗಿದೆಯೇ ಎಂದು ಕೇಳಿದರು. ವಾಜಪೇಯಿಯವರು ಕರ್ನಾಟಕಕ್ಕೆ ಬಂದಾಗ ಅವರನ್ನು ಶಾಸಕರು ಪ್ರಶ್ನಿಸಿದ್ದೆವು. ಧರಣಿ ಮಾಡಬೇಡಿ; ಕಾಂಗ್ರೆಸ್ಸಿನಂತೆ ನಾವಾಗುವುದು ಬೇಡ. ನಾವಾದರೂ ಮೇಲ್ಪಂಕ್ತಿ ಆಗಿರೋಣ ಎಂದಿದ್ದರು. ಮೇಲೆ ಕುಳಿತವರು ಧಾರಾಳತನ ತೋರಿಸಿ, ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ವಾಟ್ ಈಸ್ ದಿಸ್ ನಾನ್‍ಸೆನ್ಸ್? ಶಾಬಾನೊ ಕೇಸಿನಲ್ಲಿ ರಾಜ್ಯಾಂಗವನ್ನು ಗೌರವಿಸದವರು, ಸಂವಿಧಾನವನ್ನೇ ತಿರುಚಿದವರು ಕಾಂಗ್ರೆಸ್ಸಿಗರು. ಮಾಧ್ಯಮದವರೂ ಅವರು ಹೇಳಿದಷ್ಟನ್ನೇ ಬರೆಯುತ್ತಾರೆ ಎಂದು ಡಿ.ಹೆಚ್. ಶಂಕರಮೂರ್ತಿ ಅವರು ಬೇಸರದಿಂದ ನುಡಿದರು. ಸಂಸತ್ತಿಗೆ, ಸಂವಿಧಾನಕ್ಕೆ ದೊಡ್ಡ ಗೌರವ ಕೊಡುವ ಪಕ್ಷ ಬಿಜೆಪಿ. ಇವರು ಹೇಳೋದೊಂದು ಮಾಡೋದೊಂದು ಎಂದು ತಿಳಿಸಿದರು.
ಮಾಜಿ ಶಾಸಕ ಎ.ಟಿ. ರಾಮಸ್ವಾಮಿ (AT Ramaswamy) ಅವರು ಮಾತನಾಡಿ, ತಪ್ಪನ್ನು ತಪ್ಪೆಂದು ಹೇಳದಿದ್ದರೆ ಈಗಾಗಲೇ ಕೆಟ್ಟು ಹೋದ ವ್ಯವಸ್ಥೆಯಲ್ಲಿ ಸುಧಾರಣೆ ತರುವುದು ಹೇಗೆ ಎಂದು ಪ್ರಶ್ನಿಸಿದರು. ಕೆಟ್ಟ ವ್ಯವಸ್ಥೆಯ ಸುಧಾರಣೆಯಲ್ಲಿ ನಮ್ಮೆಲ್ಲರ ಜವಾಬ್ದಾರಿ ಪ್ರಮುಖವಾಗಿದೆ. ಸಾಂವಿಧಾನಿಕ ಸಂಸ್ಥೆ, ಅಂಗಗಳಲ್ಲಿ, ಲೋಕಾಯುಕ್ತದಂಥ ಸ್ವಾಯತ್ತ ಸಂಸ್ಥೆಗಳಲ್ಲಿ ಕ್ರಮೇಣ ಕುಸಿತ ಉಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬೇಲಿಯೇ ಎದ್ದು ಹೊಲ ಮೇಯ್ದರೆ, ಕಾಪಾಡುವ ದೊರೆಯೇ ಕೊಲೆಗಾರನಾದರೆ ರಕ್ಷಣೆ ಮಾಡುವವರು ಯಾರು ಎಂದು ಕೇಳಿದರು. ಇವತ್ತಿನ ಆಡಳಿತ ವ್ಯವಸ್ಥೆಗೆ ಲಂಗೂ ಇಲ್ಲ; ಲಗಾಮೂ ಇಲ್ಲವಾಗಿದೆ ಎಂದ ಅವರು, ಚುನಾವಣೆಗಳಲ್ಲಿ ಬೀದಿಬೀದಿಗಳಲ್ಲಿ ಹಣ ಚೆಲ್ಲಿದರೂ ಯಾರಿಗೂ ಶಿಕ್ಷೆ ಆಗುತ್ತಿಲ್ಲ ಎಂದು ವಿಷಾದದಿಂದ ನುಡಿದರು.
ಈಟ್ `ಇಂಡಿಯ’ ಕಂಪನಿ ಈಗ ಬಂದಿದೆ. ಬ್ರಿಟಿಷರ ಈಸ್ಟ್ ಇಂಡಿಯ ಕಂಪನಿ ಹೋಗಿದೆ; ವಿಪಕ್ಷಗಳ ಈಟ್ `ಇಂಡಿಯ’ ಕಂಪನಿ ಈಗ ಬಂದಿದೆ. ಇವರಿಗೆ ಸ್ಥಿರ ಸರ್ಕಾರ ಕೊಡಲು ಸಾಧ್ಯವೇ ಎಂದು ಕೇಳಿದರು. ಮೋದಿಜಿ ಅವರ ನೇತೃತ್ವದಲ್ಲಿ ದೇಶದ ನಾಯಕತ್ವ ವಿಶ್ವದ ನಾಯಕತ್ವವಾಗಿದೆ. ಇದು ಇವರ ಕೈಯಿಂದ ಸಾಧ್ಯವೇ ಎಂದು ಎ.ಟಿ. ರಾಮಸ್ವಾಮಿ ಅವರು ಪ್ರಶ್ನಿಸಿದರು.
ಪ್ರಾಮಾಣಿಕ ವ್ಯಕ್ತಿಗಳಿಗೆ ಮಾನ್ಯತೆ ಸಿಗುತ್ತಿಲ್ಲ. ವರ್ಗಾವಣೆ ಒಂದು ಉದ್ಯಮ, ದಂಧೆಯಾಗಿದೆ. ಎರಡು ತಿಂಗಳಲ್ಲೇ ಭ್ರಷ್ಟಾಚಾರ ಬೆಳೆದಿದೆ. ಬೆಲೆ ಏರಿಕೆ ಆಗುತ್ತಿದೆ ಎಂದರು. ಇದೆಲ್ಲದರಿಂದ ನುಣುಚಿಕೊಳ್ಳಲು ಈ ನಾಟಕ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಲೂಟಿ ಮಾಡಲೆಂದೇ ನೈಸ್ ವಿಷಯದಲ್ಲಿ ತನಿಖೆ ಮಾಡಲಾಗಿತ್ತು. ದಲಿತರಿಗೆ ನೀಡಿದ್ದ 11 ಸಾವಿರ ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗೆ ವರ್ಗಾಯಿಸಿದ್ದು ಸರಿಯೇ? ನಾಲಿಗೆ ಒಂದೇ ಎರಡೇ ಎಂದು ನೀವೇ ಹೇಳಿ ಎಂದು ಪ್ರಶ್ನೆ ಮುಂದಿಟ್ಟರು.
ಕ್ಷುಲ್ಲಕ ಕಾರಣಕ್ಕಾಗಿ ಅಮಾನತಿನ ಶಿಕ್ಷೆ ಕೊಡಲಾಗಿದೆ ಎಂದು ಟೀಕಿಸಿದರು. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದರು. ಅದು ಆತುರದ ಕ್ರಮ; ಅದು ಸದನ, ಪೀಠಕ್ಕೆ ಗೌರವ ಕೊಡುವುದಿಲ್ಲ ಎಂದು ವಿಶ್ಲೇಷಿಸಿದರು. ಬೆಂಗಳೂರಿನ ಸಿಟಿಜನ್ಸ್ ಫಾರ್ ಡೆಮಾಕ್ರೆಸಿಯ ಅಧ್ಯಕ್ಷ ಚಂದ್ರಶೇಖರ್ ಅವರು ಸ್ವಾಗತಿಸಿದರು. ಅಜಯ್ ಹೆಬ್ಬಾರ್ ಅವರು ವಂದಿಸಿದರು.
Web Stories