ಬೆಂಗಳೂರು: ಕಾಂಗ್ರೆಸ್- ಜೆಡಿಎಸ್ ಈ ಸಮ್ಮಿಶ್ರ ಸರ್ಕಾರ ಹುಚ್ಚನ ಮನೆಯಲ್ಲಿ ಉಂಡವನೇ ಜಾಣ ಅನ್ನೋ ಗಾದೆ ಮಾತಿನಂತಿದೆ. ಒಬ್ಬ ಕಂಡಕ್ಟರ್ ಬಳಿ 100 ರೂ ಹಣ ಜಾಸ್ತಿ ಇತ್ತು ಅಂದ್ರೆ ಅವನನ್ನು ಕೆಲಸದಿಂದ ವಜಾ ಮಾಡುತ್ತಾರೆ. ಆದ್ರೆ ಇಲ್ಲಿ 25 ಲಕ್ಷ ರೂ. ವಿಧಾನಸೌಧಕ್ಕೆ ಬರುತ್ತದೆ ಅಂದರೆ ಮಂತ್ರಿ ಇನ್ನೇನು ಮಾಡುತ್ತಾರೆ ಅಂತ ಶಾಸಕ ಸಿಟಿ ರವಿ ಪ್ರಶ್ನಿಸಿದ್ದಾರೆ.
ವಿಧಾನಸೌಧದಲ್ಲಿ ಹಣ ಪತ್ತೆಯಾದ ವಿಚಾರಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಯಾರೋ ತಂದ ದುಡ್ಡನ್ನು ಸಚಿವರ ತಲೆಗೆ ಯಾಕೆ ಕಟ್ಟುತ್ತೀರಿ ಅನ್ನೋದು ಗೃಹ ಸಚಿವರ ಬೇಜವಾಬ್ದಾರಿ ಹೇಳಿಕೆಯಾಗಿದೆ. ಅಲ್ಲದೇ ಇದೆಲ್ಲ ಮಾಮೂಲಿ ಅನ್ನೋ ಮನಸ್ಥಿತಿ ಅವರದ್ದಾಗಿದೆ. ಅವರ ದೃಷ್ಟಿಯಲ್ಲಿ 25 ಲಕ್ಷ ಚಿಲ್ಲರೆ ಹಣವಾಗಿದೆ. ಹೀಗಾಗಿ ಇದು ಯಾವ ಮಹಾ ದೊಡ್ಡದು. ಅದಕ್ಕಿಂತ ಜಾಸ್ತಿ ಡೀಲ್ ಮಾಡುವ ನಾವೇ ಆರಾಮಾಗಿದ್ದೇವೆ ಅನ್ನೋ ಮನಸ್ಥಿತಿಯ ಹೇಳಿಕೆಯೂ ಆಗಿರಬಹುದು ಅಂತ ಅವರು ಹೇಳಿದ್ರು.
Advertisement
Advertisement
25 ಲಕ್ಷ ರೂ. ಪಿಎಗೆ ಯಾರು ಸುಮ್ಮನೆ ತಂದು ಕೊಡಲ್ಲ. ಅಂತಿಮ ನಿರ್ಧಾರ ತೆಗೆದುಕೊಳ್ಳುವವರು ಸಚಿವರುಗಳೇ ಹೊರತು ಪಿಎ ಅಲ್ಲ. ಯಾರಾದರೂ ಬಂದು ಸುಮ್ಮನೆ ದುಡ್ಡು ಕೊಡ್ತೀನಿ ಅಂತ ಹೇಳಿದ್ರೆ, ಅದು 10-20, 200-500 ರೂ. ಅಲ್ಲ ಬದಲಾಗಿ 25 ಲಕ್ಷ ರೂ. ಆಗಿದೆ. ಸುಮ್ಮನೆ ಅವನು ಯಾಕೆ ತಗೋತಾನೆ ಅವನು ಅಂತ ಅವರು ಪ್ರಶ್ನಿಸಿದ ಅವರು, ಇದು ಬಹಳ ಗಂಭೀರವಾಗಿರುವ ವಿಷಯವಾಗಿದೆ. ಹೀಗಾಗಿ ಸಚಿವ ಪುಟ್ಟರಂಗಶೆಟ್ಟಿಯವರು ತಕ್ಷಣ ರಾಜೀನಾಮೆ ಕೊಡಬೇಕು. ಮತ್ತು ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದ್ರು. ಇದನ್ನೂ ಓದಿ: ಯಾವುದೇ ತನಿಖೆಗೂ ಸಿದ್ಧ, ನನ್ನ ವಿರುದ್ಧ ಷಡ್ಯಂತ್ರ: ಪುಟ್ಟರಂಗಶೆಟ್ಟಿ
Advertisement
Advertisement
ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ ಅನ್ನೋ ಗಾದೆ ಮಾತಿದೆ. ದೊಡ್ಡೋರು ಅನ್ನೋರು ಸ್ಟಾರ್ ಹೊಟೇಲಿನಲ್ಲಿ ಡೀಲಿಂಗ್ ಮಾಡಿಕೊಂಡಿರುತ್ತಾರೆ. ಅವರ ಕೆಳಗಡೆ ಇರೋರು ಎಲ್ಲರೂ ವಿಧಾಸೌಧವನ್ನೇ ಡೀಲಿಂಗ್ ಸೆಂಟರ್ ಮಾಡಿಕೊಂಡು ಬಿಟ್ಟಿದ್ದಾರೆ ಅಂತ ಸಿಟಿ ರವಿ ಆರೋಪಿಸಿದ್ರು.
ಸಿದ್ದರಾಮಯ್ಯ ಸರ್ಕಾರದಲ್ಲಿ ಬರೀ ಬ್ರೋಕರ್ ಗಳೇ ತುಂಬಿಕೊಂಡಿದ್ದರು ಅಂತ ಕುಮಾರಸ್ವಾಮಿ ಅವರು ಈ ಹಿಂದೆ ಹೇಳಿದ್ದರು. ಈಗ ಅದರ ಮುಂದುವರಿಕೆ ಆಗುತ್ತಿದೆ. ಈಗ ಸಿಕ್ಕಿರೋದು ಒಂದು ಸ್ಯಾಂಪಲ್ ಅಷ್ಟೇ. ಇಲ್ಲಿ ನಡೀತಾ ಇರೋದೇ ಡೀಲಿಂಗ್. ಈ ಸರ್ಕಾರದ ವಿಚಾರ ಹೇಗಿದೆ ಅಂದ್ರೆ, ಯಾರಿಗೆ ಎಷ್ಟು ದಿನ ಇರುತ್ತೇವೆ ಅನ್ನೋದು ಗೊತ್ತಿಲ್ಲದೇ ಇರುವುದರಿಂದ ಅವರಿಗೆ ಸಮಗ್ರ ರಾಜ್ಯದ ಅಭಿವೃದ್ಧಿಯ ಚಿಂತನೆಯ ಯೋಚನೆಯನ್ನೂ ಕೂಡ ಮಾಡುತ್ತಿಲ್ಲ ಅಂತ ಕಿಡಿಕಾರಿದ್ರು.
ಪುಟ್ಟರಂಗ ಶೆಟ್ಟಿಯವರು ಟೈಪಿಸ್ಟ್ ನನ್ನು ಕಳೆದೆರಡು ದಿನಗಳಿಂದ ಕೆಲಸದಿಂದ ತೆಗೆದುಹಾಕಿದ್ದೇನೆ ಅಂತ ಹೇಳುತ್ತಾರೆ. ಆದ್ರೆ ಕೆಲಸದಿಂದ ತೆಗೆದು ಹಾಕಿದ್ರೆ ಅವರು ಯಾಕೆ ಮತ್ತೆ ಕಚೇರಿಗೆ ಬಂದ್ರು ಹಾಗೂ ಅವರ ಬಳಿ ಯಾಕೆ 25 ಲಕ್ಷ ರೂ. ಬಂತು ಅನ್ನೋ ಪ್ರಶ್ನೆಗೆ ಉತ್ತರಿಸಿದ ಶಾಸಕರು, 3-4 ದಿನಗಳ ಹಿಂದಿನಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಿ. ಯಾಕಂದ್ರೆ ಇದು ನೂರಕ್ಕೆ ನೂರು ಒಬ್ಬ ಮಂತ್ರಿಗೆ ಸಂಬಂಧಿಸಿದ ಹಣವಾಗಿದೆ. ಈವಾಗ ಇವರು ಹೇಳುತ್ತಿರೋದು ಎಲ್ಲಾ ಕಾಗಕ್ಕ ಗೂಬಕ್ಕನ ಕಥೆಯಾಗಿದೆ. ನ್ಯಾಯಾಧೀಶರ ನೇತೃತ್ವದ ತನಿಖೆ ನಡೆಸಲಿ. ಪೊಲೀಸರ ತನಿಖೆಗೆ ಮುಂಚೆ ಕ್ರಮ ತೆಗೆದುಕೊಳ್ಳಬೇಕು ಅಂತ ಅವರು ಆಗ್ರಹಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv