ಬೆಂಗಳೂರು: ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿ (Chandru Lamani ಲೋಕಾಯುಕ್ತ ಬಲೆಗೆ ಬಿದ್ದಿರೋದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಇದನ್ನ ವಿಪರ್ಯಾಸ ಅನ್ನಬೇಕೋ? ಅತಿಯಾದ ನಂಬಿಕೆ, ವಿಶ್ವಾಸದ ಫಲ ಅನ್ನಬೇಕೋ? ಗೊತ್ತಿಲ್ಲ.
ಅಂದಹಾಗೆ… 2023 ರ ವಿಧಾನಸಭೆ ಚುನಾವಣೆಗೆ ಬಿಜೆಪಿ (BJP) ಬಿಡುಗಡೆ ಮಾಡಿದ್ದ 189 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಡಾ. ಚಂದ್ರು ಲಮಾಣಿ ಅಭ್ಯರ್ಥಿ ಅಂತ ಘೋಷಣೆ ಆಗಿತ್ತು. ಹೊಸ ಮುಖ.. ಹೊಸ ತಂತ್ರ ಅಂತೇಳಿ ಡಾ.ಚಂದ್ರು ಲಮಾಣಿ ಪ್ರಕಟಿಸಲಾಗಿತ್ತು.
ಆಗ ಶಿರಹಟ್ಟಿ ತಾಲೂಕು ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಡಾ. ಚಂದ್ರು ಲಮಾಣಿ, 2021 ರ ಆಗಸ್ಟ್ 21 ರಂದು ಸರ್ಕಾರಿ ಸೇವೆಗೆ ರಾಜೀನಾಮೆ ಸಲ್ಲಿಕೆ ಮಾಡಿದ್ರು. ಆದರೆ ಲೋಕಾಯುಕ್ತದಲ್ಲಿ (lokayukta) ಡಾ.ಚಂದ್ರು ಲಮಾಣಿ ವಿರುದ್ಧ ದೂರು ದಾಖಲಾಗಿತ್ತು. ಆದ್ದರಿಂದ ರಾಜೀನಾಮೆ ಅಂಗೀಕಾರಗೊಂಡಿರಲಿಲ್ಲ.

ರಾಜೀನಾಮೆ ಅಂಗೀಕಾರಗೊಂಡಿರದ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ಬದಲಾವಣೆ ಮಾಡುವ ಚಿಂತನೆ ನಡೆಸಿತ್ತು. ಬಳಿಕ ನಾಮಪತ್ರ ಸಲ್ಲಿಕೆಗೆ ಮೊದಲು ವಿಆರ್‌ಎಸ್ ರಾಜೀನಾಮೆ ಅಂಗೀಕಾರವಾಯಿತು. ತದ ನಂತರ ಚುನಾವಣೆಗೆ ಸ್ಪರ್ಧಿಸಿ ಗೆಲುವು ಕಂಡಿದ್ದರು ಡಾ.ಚಂದ್ರು ಲಮಾಣಿ. ಈಗ ಅದೇ ಚಂದ್ರು ಲಮಾಣಿ ಮತ್ತೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕಮಿಷನ್ ವಿರುದ್ಧ ಹೋರಾಟ ನಡೆಸಿ ಕಾಂಗ್ರೆಸ್ ವಿರುದ್ಧ ಕೆಂಡ ಉಗುಳುತ್ತಿದ್ದ ಬಿಜೆಪಿಗೆ ತಮ್ಮದೇ ಪಕ್ಷದ ಶಾಸಕನ ಕಮಿಷನ್ ಬಯಲು ನುಂಗಲಾರದ ತುತ್ತಾಗಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ಶಾಸಕ ಚಂದ್ರು ಲಮಾಣಿ ಮೇಲೆ ಲೋಕಾಯುಕ್ತ ದಾಳಿ ನನ್ನ ಗಮನಕ್ಕೆ ಬಂದಿಲ್ಲ. ಆದ್ರೆ ನಮ್ಮ ಪಕ್ಷ ಎಂದೂ ಕೂಡ ಲಂಚ ಸ್ವೀಕಾರ ಮಾಡಿ ಅಂತ ಹೇಳಿಲ್ಲ. ಇದರ ಹಿಂದೆ ಸತ್ಯಾಸತ್ಯತೆ ಏನಿದೆ ಪರಿಶೀಲನೆ ಮಾಡಬೇಕಿದೆ ಅಂತಷ್ಟೇ ಹೇಳಿದ್ರು.

