ಹಾವೇರಿ: ಜಿಲ್ಲೆಯ ಹಿರೇಕೆರೂರಿನ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಕ್ಕೆ ಬಿ.ಸಿ.ಪಾಟೀಲ್ ಕ್ಷೇತ್ರದ ಕಾರ್ಯಕರ್ತರಲ್ಲಿ ವಾಟ್ಸಪ್ ಗ್ರೂಪ್ ಮೂಲಕ ಕ್ಷಮೆ ಕೇಳಿದ್ದಾರೆ.
ಬಿ.ಸಿ.ಪಾಟೀಲ್ ಅವರು ಮಂತ್ರಿ ಸ್ಥಾನ ಕೊಡದೇ ಪಕ್ಷ ತಾಲೂಕಿಗೆ ಅನ್ಯಾಯ ಮಾಡಿದೆ ಎಂಬ ಸಂದೇಶವನ್ನ ಹಾಕಿದ್ದು, ವಾಟ್ಸಪ್ ಗ್ರೂಪ್ ಮೂಲಕ ಕಾರ್ಯಕರ್ತರಲ್ಲಿ ಕ್ಷಮೆ ಕೇಳಿದ್ದಾರೆ. ನಿಮ್ಮ ಸಲಹೆ ಸೂಚನೆ ಪಡೆದು ಮುಂದಿನ ನಿರ್ಧಾರ ತೆಗೆದುಕೊಳ್ಳತ್ತೇನೆ ಎಂಬ ಸಂದೇಶವನ್ನ ತಾಲೂಕಿನ ಕಾರ್ಯಕರ್ತರಿಗೆ ರವಾನಿಸಿದ್ದಾರೆ.
Advertisement
Advertisement
ಸಂದೇಶ:
ಆತ್ಮೀಯ ಬಂಧುಗಳೇ ರಾಜಕೀಯ ಗೊತ್ತಿಲ್ಲದ ನನಗೆ ಆಕಸ್ಮಿಕವಾಗಿ ರಾಜಕಾರಣಕ್ಕೆ ಬಂದಾಗ ಮೂರು ಬಾರಿ ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿದ್ದೀರಿ. ಇದುವರೆಗೂ ನಾನು ನನ್ನ ಕೈಲಾದ ಅಭಿವೃದ್ಧಿ ಕೆಲಸವನ್ನು ಸರ್ಕಾರದಿಂದ ಮಾಡಿ ತಾಲೂಕು ಅಭಿವೃದ್ಧಿಯ ಕಡೆಗೆ ದಾಪುಗಾಲಿಟ್ಟಿದೆ. ಈಗ ತಮ್ಮೆಲ್ಲರಿಗೂ ಗೊತ್ತಿರುವ ಹಾಗೆ ನಮ್ಮ ತಾಲೂಕಿಗೆ ಸಾಕಷ್ಟು ಅನ್ಯಾಯವನ್ನು ಮಾಡಿ ಕಾಂಗ್ರೆಸ್ ಪಕ್ಷ ಬೇರೆಯವರಿಗೆ ಮಂತ್ರಿ ಪದವಿಯನ್ನು ಕೊಟ್ಟು ನಮ್ಮ ತಾಲೂಕಿಗೆ ದೊಡ್ಡ ದ್ರೋಹವನ್ನು ಮಾಡಿದೆ. ಇದರಿಂದಾಗಿ ಸರ್ವತೋಮುಖ ಅಭಿವೃದ್ಧಿಗೆ ಕುಂಠಿತವಾಗುತ್ತದೆ.
Advertisement
Advertisement
ಅಲ್ಲದೆ ಮುಂದಿನ ತಾಲೂಕಿನ ಬೃಹತ್ ಭವಿಷ್ಯವನ್ನು ನೆನೆದು ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗಾಗಿ ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದೇನೆ. ತಮ್ಮ ಕ್ಷಮೆ ಇರಲಿ, ಮುಂದಿನ ದಿನಗಳಲ್ಲಿ ತಮ್ಮ ಸಲಹೆ ಸೂಚನೆಗಳನ್ನು ಪಡೆದು ಮುಂದಿನ ನಿರ್ಧಾರವನ್ನು ಕೈಗೊಳ್ಳುತ್ತೇನೆ. ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಯೇ ನನ್ನ ಗುರಿಯಾಗಿದ್ದು, ಸದಾ ನಿಮ್ಮ ಆಶೀರ್ವಾದ ಬೇಕೆಂದು ಕೇಳಿ ಮತ್ತೊಮ್ಮೆ ತಮ್ಮಲ್ಲಿ ಕ್ಷಮೆಯನ್ನು ಕೇಳಿ ತಮ್ಮ ಆಶೀರ್ವಾದವನ್ನು ಬೇಡುತ್ತಿದ್ದೇನೆ ಇಂತಿ ನಿಮ್ಮ ವಿಶ್ವಾಸಿ ಬಿ.ಸಿ ಪಾಟೀಲ್ ಎಂದು ವಾಟ್ಸಪ್ ಗ್ರೂಪಿಗೆ ಸಂದೇಶ ರವಾನೆ ಮಾಡಿದ್ದಾರೆ.
ವಾಪಸ್ ಪಡೆಯಲ್ಲ: ಕಳೆದ ದಿನ ರಾಜೀನಾಮೆ ನೀಡಿದ್ದೇನೆ. ಯಾವುದೇ ಕಾರಣಕ್ಕೂ ರಾಜೀನಾಮೆಯನ್ನು ವಾಪಸ್ಸ್ ಪಡೆಯುವುದಿಲ್ಲ. ಮುಂದೆ ಏನಾಗಬೇಕು, ಎನು ಮಾಡಬೇಕು ಅನ್ನೋ ಚರ್ಚೆ ಆಗಿಲ್ಲ. ಮುಂದೆ ಏನಾಗುತ್ತೆ ಕಾದುನೋಡೋಣ. ಕ್ಷೇತ್ರದ ಜನರ ಹಾಗೂ ಕಾರ್ಯಕರ್ತರ ಅಭಿಪ್ರಾಯ ಕೇಳಿದ್ದೇನೆ. ಕ್ಷೇತ್ರಕ್ಕೆ ಅನ್ಯಾಯವಾದ ಬಗ್ಗೆ ಕಾರ್ಯಕರ್ತರಿಗೆ ತಿಳಿಸಿದ್ದೇನೆ. ಅವರು ಸಹ ಸಹಮತ ನೀಡಿದ್ದಾರೆ. ನಾವೆಲ್ಲ ಮುಂಬೈನಲ್ಲಿ ಇದ್ದೇವೆ. ಬಿಜೆಪಿಗೆ ಹೋಗುವ ಬಗ್ಗೆ ಚರ್ಚೆ ಆಗಿಲ್ಲ. ಇನ್ನೂ ಕೆಲವು ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ಪಬ್ಲಿಕ್ ಟಿವಿಗೆ ದೂರವಾಣಿ ಮೂಲಕ ಬಿಸಿ ಪಾಟೀಲ್ ಹೇಳಿಕೆ ನೀಡಿದ್ದಾರೆ.