– ಸ್ವಪಕ್ಷದವರ ವಿರುದ್ಧವೇ ಯತ್ನಾಳ್ ಕಿಡಿ
ಕಾರವಾರ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮೇಲಿನವರು ತೊಂದರೆ ಕೊಟ್ಟರೆ ಮಹಾರಾಷ್ಟ್ರಕ್ಕಾಗ ಸ್ಥಿತಿ ಕರ್ನಾಟಕಕ್ಕೂ ಬರುತ್ತದೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಸ್ವಪಕ್ಷದವರ ವಿರುದ್ಧವೇ ಗುಡುಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮಾತನಾಡಿದ ಶಾಸಕರು, ಉಪ ಚುನಾವಣೆ ಫಲಿತಾಂಶದಿಂದ ಸಿಎಂ ಯಡಿಯೂರಪ್ಪ ಅವರು ಕರ್ನಾಟಕದ ಜನ ನಾಯಕ ಎನ್ನುವುದು ಪಕ್ಷದ ನಾಯಕರಿಗೆ ಗೊತ್ತಾಗಿದೆ. ಈ ಮೂಲಕ ಸಿಎಂ ತಮ್ಮ ನೇತ್ರತ್ವಕ್ಕೆ ಯಾರೂ ತೊಂದರೆ ಕೊಡಬಾರದು ಎಂಬ ಸ್ಪಷ್ಟ ಸಂದೇಶ ಕೊಟ್ಟಿದ್ದಾರೆ. ಅದು ಹೈಕಮಾಂಡ್‍ಗೂ ಅರ್ಥವಾಗಿದೆ ಎಂದು ಹೇಳಿದರು.
Advertisement
Advertisement
ಸಿಎಂ ಯಡಿಯೂರಪ್ಪ ಅವರಿಗೆ ತೊಂದರೆ ಕೊಟ್ಟರೆ ಮಹಾರಾಷ್ಟ್ರದ ಪರಿಸ್ಥಿತಿ ಕರ್ನಾಟಕಕ್ಕೂ ಬರಬಹುದು. ಹತ್ತು ಮತಗಳನ್ನು ಪಡೆಯಲು ಸಾಧ್ಯವಾಗದವರು ಮೇಲೆ ಕುಳಿತು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಯಾರನ್ನೋ ಅಧಿಕಾರದಿಂದ ಕೆಳಗೆ ಇಳಿಸುತ್ತೇನೆ, ಮತ್ಯಾರನ್ನೋ ತಂದು ಪ್ರಚಾರ ಮಾಡಿಸುತ್ತೇನೆ ಎನ್ನುವ ಕಾಲ ಹೋಗಿದೆ. ಅದು ಡಿಸೆಂಬರ್ 9ಕ್ಕೆ ಕ್ಲೋಸ್ ಆಯಿತು. ನಾಯಕರು ಫೀಲ್ಡ್‌ನಲ್ಲಿ ಇದ್ದು ಕೆಲಸ ಮಾಡಬೇಕು ಎಂದು ಪರೋಕ್ಷವಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಟಾಂಗ್ ಕೊಟ್ಟರು.
Advertisement
ಪಕ್ಷ ಮತ್ತು ಸರ್ಕಾರ ಹೊಂದಾಣಿಕೆಯಿಂದ ಸಾಗಬೇಕು. ಒಂದು ವೇಳೆ ಪಕ್ಷ ಬೇರೆ ಕಡೆಗೆ ಜಾರಿಕೊಂಡರೆ ಸರ್ಕಾರವನ್ನು ಹೇಗೆ ನಡೆಸಬೇಕು ಎನ್ನುವುದು ಸಿಎಂ ಯಡಿಯೂರಪ್ಪ ಅವರಿಗೆ ಗೊತ್ತಿದೆ. ಎಲ್ಲರೂ ಒಟ್ಟಾಗಿ ಹೋದರೆ ಉತ್ತಮ ಎಂದು ಪರೋಕ್ಷವಾಗಿ ಪಕ್ಷದ ರಾಜ್ಯಾಧ್ಯಕ್ಷರಿಗೆ ಎಚ್ಚರಿಕೆ ನೀಡಿದರು.
Advertisement
ಸಚಿವ ಸ್ಥಾನದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಶಾಸಕರು, ನನಗೆ ಸಚಿವ ಸ್ಥಾನ ಕೊಡಲೇ ಬೇಕು ಎಂದು ಪಟ್ಟು ಹಿಡಿದಿಲ್ಲ, ಲಾಭಿ ಮಾಡಿಲ್ಲ. ನಾನು ಮಂತ್ರಿಗಿರಿ ಆಕಾಂಕ್ಷಿಯಲ್ಲ. 12 ಶಾಸಕರು ಪಕ್ಷಕ್ಕೆ ಬಂದಿದ್ದು ಖುಷಿ ತಂದಿದೆ. ಅವರಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಹೀಗಾಗಿ ನಾನು ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿ ಮಾಡಬಲ್ಲೆ ಎಂದು ಹೇಳಿದರು.