ಮಡಿಕೇರಿ: ಆಡಬಾರದ್ದನ್ನು ಆಡಿದರೆ ಕೇಳಬಾರದ್ದನ್ನು ಕೇಳಬೇಕಾಗುತ್ತೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ನಾಪೋಕ್ಲು ಕೊಡವ ಸಮಾಜದಲ್ಲಿ ವಿದ್ಯಾರ್ಥಿಗಳೊಂದಿಗೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಆಗಮಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಹೆಚ್.ಎಸ್ ದೊರೆಸ್ವಾಮಿ ಅವರ ಬಗ್ಗೆ ನಮಗೆ ಅಪಾರ ಗೌರವವಿದೆ. ಅವರು ದೊಡ್ಡವರು, ಶತಾಯುಷಿ. ಸ್ವಾತಂತ್ರ್ಯ ಹಿರಿಯ ಹೋರಾಟಗಾರರು. ಅವರ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವಹೇಳನಕಾರಿಯಾಗಿ ಮಾತನಾಡಿರುವುದು ಸರಿಯಲ್ಲ ಎಂದರು.
ದೊರೆಸ್ವಾಮಿ ಕೂಡ ಪ್ರಧಾನಿ ಮಂತ್ರಿ ಬಗ್ಗೆ ಲಘುವಾಗಿ ಮಾತನಾಡಬಾರದಿತ್ತು. ಮಾತನಾಡುವಾಗ ವಿವೇಚನೆಯಿಂದ ಮಾತನಾಡಬೇಕು. ಹೇಳಿಕೆ ನೀಡುವಾಗ ಬಹಳ ಎಚ್ಚರಿಕೆಯಿಂದಿರಬೇಕು. ಹೀಗೆ ಆಡಬಾರದ್ದನ್ನು ಆಡಿದರೆ ಕೇಳಬಾರದ್ದನ್ನು ಕೇಳಬೇಕಾಗುತ್ತೆ ಎಂದು ಇಬ್ಬರಿಗೂ ಚಾಟಿ ಬೀಸಿದರು.
ಆಡಬಾರದ ಮಾತು ಆಡಿದರೆ ಕೇಳಬಾರದ ಮಾತುಗಳನ್ನು ಕೇಳಬೇಕಾಗುತ್ತದೆ!
— S.Suresh Kumar (@nimmasuresh) February 29, 2020
ಕುಶಾಲನಗರದ ಟಿಬೆಟಿಯನ್ ಕ್ಯಾಂಪ್ ಶಾಲೆಗಳಲ್ಲಿ 6ನೇ ತರಗತಿಯಿಂದ ಮಾತೃಭಾಷೆ ಕಲಿಕೆಗೆ ಅವಕಾಶ ಕಲ್ಪಿಸುವಂತೆ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಒಂದನೇ ತರಗತಿಯಿಂದ ಮಾತೃಭಾಷೆ ಕನ್ನಡ ಕಲಿಕೆ ಕಡ್ಡಾಯವಾಗಿದೆ. ಕನ್ನಡವನ್ನು ರಾಜ್ಯದ ಎಲ್ಲಾ ಸಿಬಿಎಸ್‍ಸಿ ಹಾಗೂ ಐಸಿಎಸ್‍ಪಿ ಶಾಲೆಗಳಲ್ಲಿ ಕಲಿಸಬೇಕೆಂಬ ಕಾನೂನುವಿದೆ. ಆ ನಿಯಮವನ್ನು ನೀವು ಕೂಡ ಪಾಲಿಸಬೇಕು ಎಂದು ಲಿಖಿತ ರೂಪದಲ್ಲಿ ಸೂಚನೆ ನೀಡಿದ್ದೇನೆ ಎಂದರು.