– ಅನ್ಯಾಯವಾದಾಗ ಧ್ವನಿ ಎತ್ತುತ್ತೇನೆ
– ಕೇಂದ್ರದಿಂದ ನಾವು ಭಿಕ್ಷೆ ಕೇಳುತ್ತಿಲ್ಲ
ವಿಜಯಪುರ: ಕರ್ನಾಟಕದಲ್ಲಿ ಹಣವಿದೆ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದರೆ ನಾನು ಸುಮ್ಮನೆ ಕೂರುವುದಿಲ್ಲ. ಬೇಜವಾಬ್ದಾರಿಯುತ ಹೇಳಿಕೆಗೆ ಉತ್ತರ ಕರ್ನಾಟಕ ಕಣ್ಣು ಮುಚ್ಚಿ ಕೂರುವುದಿಲ್ಲ. ಸಂಸದ ತೇಜಸ್ವಿ ಸೂರ್ಯ ನೀಡಿರುವ ಹೇಳಿಕೆಯನ್ನು ವಾಪಸ್ ಪಡೆಯಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆಕ್ರೋಶ ಹೊರಹಾಕಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೇನು ಕೇಂದ್ರದಿಂದ ಭಿಕ್ಷೆ ಕೇಳುತ್ತಿಲ್ಲ. ಸಂತ್ರಸ್ತರು ಕಣ್ಣೀರು ಹಾಕುತ್ತಿದ್ದಾರೆ. ಇಂತಹ ಬೇಜವಾಬ್ದಾರಿಯುತ ಹೇಳಿಕೆ ನೀಡುವವರು ಸ್ಥಳಕ್ಕೆ ಬಂದು ಜನರ ಕಷ್ಟ ನೋಡಲಿ ಎಂದು ಸ್ವಪಕ್ಷೀಯ ಸಂಸದನ ವಿರುದ್ಧವೇ ಯತ್ನಾಳ್ ಹರಿಹಾಯ್ದರು.
Advertisement
Advertisement
ಉತ್ತರ ಕರ್ನಾಟಕದ ಬಗ್ಗೆ ಕೀಳುಮಟ್ಟದ ಮಾತು ಕೇಳಲು ಇಲ್ಲಿನ ಜನಪ್ರತಿನಿಧಿಗಳು ಸತ್ತಿಲ್ಲ. ಉತ್ತರ ಕರ್ನಾಟಕಕ್ಕೆ ಅನ್ಯಾಯವಾದಾಗ ಧ್ವನಿ ಎತ್ತುತ್ತೇನೆ. ನೆರೆ ಸಂತ್ರಸ್ತರಿಗೆ ಕೇಂದ್ರದಿಂದ ಪರಿಹಾರ ಬಂದಿಲ್ಲ. ಉತ್ತರ ಕರ್ನಾಟಕದ ಜನರ ಜೀವನ ಅಸ್ತವ್ಯಸ್ತವಾಗಿದೆ. ತಕ್ಷಣ 5 ಸಾವಿರ ಕೋಟಿ ರೂ. ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
Advertisement
ಇದಕ್ಕಾಗಿ ಎಲ್ಲ ಸಂಸದರು ಹಾಗೂ ಸಚಿವರು ಪ್ರಧಾನಿ ಮೋದಿ ಬಳಿ ನಿಯೋಗ ತೆಗೆದುಕೊಂಡು ಹೋಗಬೇಕು. ಇದರಲ್ಲಿ ಯಾರೂ ರಾಜಕೀಯ ಮಾಡಬಾರದು. ಕೇಂದ್ರ ಸರ್ಕಾರ ನಮ್ಮ ನ್ಯಾಯಯುತ ಬೇಡಿಕೆಯನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
Advertisement
ಆದಿಚುಂಚನಗಿರಿ ಶ್ರೀಗಳ ಫೋನ್ ಕೂಡ ಟ್ಯಾಪಿಂಗ್ ಮಾಡಿರುವುದು ಆಶ್ಚರ್ಯ ಹಾಗೂ ನೋವು ತಂದಿದೆ. ಶ್ರೀಗಳ ಫೋನ್ ಟ್ಯಾಪಿಂಗ್ ಮಾಡಿದ್ದು ಕೀಳುಮಟ್ಟದ ರಾಜಕೀಯ. ಅಲ್ಲದೆ ಫೋನ್ ಟ್ಯಾಪಿಂಗ್ ಮಾಡುವವರಿಗೆ ಶಿಕ್ಷೆ ಆಗಬೇಕು. ಶ್ರೀಗಳ ಫೋನ್ ಟ್ಯಾಪಿಂಗ್ ಮಾಡಿರುವುದು ಹಿಂದೂ ಸಮಾಜಕ್ಕೆ ಅಪಮಾನ. ಶ್ರೀಗಳೇನು ದೇಶದ್ರೋಹಿ ಕೆಲಸ ಮಾಡಲ್ಲ, ಇದು ಶೋಭೆ ತರುವ ಕೆಲಸ ಅಲ್ಲ. ಫೋನ್ ಟ್ಯಾಪಿಂಗ್ ರಾಜಕೀಯ ವ್ಯಭಿಚಾರ ಎಂದು ಕಿಡಿಕಾರಿದರು.
ರಾಮ ಮಂದಿರ ಯಾಕೆ ಕಟ್ಟುತ್ತಾರೆ ಎಂದು ಪ್ರಶ್ನಿಸಿದ್ಧ ಸಾಹಿತಿ ಭಗವಾನ್ ಹೇಳಿಕೆ ಕುರಿತು ಶಾಸಕ ಯತ್ನಾಳ್ ವಾಗ್ದಾಳಿ ನಡೆಸಿದ್ದು, ಭಗವಾನ್ ಸಲಹೆ, ಮಾರ್ಗದರ್ಶನ ಈ ದೇಶಕ್ಕೆ ಅವಶ್ಯತೆ ಇಲ್ಲ. ಭಗವಾನ್ ನಕಲಿ ಬುದ್ಧಿ ಜೀವಿ. ದೇಶದಲ್ಲಿ ಭಗವಾನ್ ನಂತಹ ನಕಲಿ ಬುದ್ಧಿ ಜೀವಿಗಳ ಕೆಲಸ ಏನು ಇಲ್ಲ. ಅವ ಬಾಗ್ವಾನ್ ಅದಾನೋ, ಭಗವಾನ್ ಅದಾನೋ ನನಗೆ ಗೊತ್ತಿಲ್ಲ. ಪ್ರಧಾನಿ ಮೇಲೆ ವಿಶ್ವಾಸವಿಟ್ಟು ಜನ ಆಶೀರ್ವಾದ ಮಾಡಿದ್ದಾರೆ. ನಾವು ರಾಮಮಂದಿರ, ಬೌದ್ಧ ಸ್ತೂಪ, ಮಹಾವೀರ ಬಸದಿ ಕಟ್ಟುತ್ತೇವೆ. ಡಾ.ಅಂಬೇಡ್ಕರ್ ಅವರ ಸ್ಮೃತಿ ಭವನವನ್ನೂ ಪ್ರಧಾನಿ ಕಟ್ಟಿದ್ದಾರೆ ಎಂದು ಹೇಳಿ ಭಗವಾನ್ ವಿರುದ್ಧ ಹರಿಹಾಯ್ದರು.