ವಿಜಯಪುರ: ನಾನೇನು ಸಾಹಿತಿ ಅಲ್ಲ, ಕವಿಯೂ ಅಲ್ಲ. ಹೀಗಾಗಿ ಸಾಹಿತಿಗಳ ಜೊತೆ ನಮ್ಮದೇನಿದೆ. ನಾನೊಬ್ಬ ರಾಜಕಾರಣಿ ಅಷ್ಟೇ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರತ ಗಿರೀಶ್ ಕಾರ್ನಾಡ್ ನಿಧನಕ್ಕೆ ಸಂತಾಪ ಸೂಚಿಸಿದ ಅವರು ಮಾಧ್ಯಮಗಳ ಜೊತೆ ಮಾತನಾಡಿ, ನಮ್ಮ ಜೊತೆ ಅವರ ಒಡನಾಟವಿಲ್ಲ. ನಾವು ಅವರಿಗಿಂತ ಬಹಳ ಸಣ್ಣವರು, ಅವರು ನಮಗಿಂತ ಬಹಳ ಹಿರಿಯರಾಗಿದ್ದಾರೆ. ಅವರ ಫೋಟೋ ಇಲ್ಲೆಲ್ಲ ಇದೆ ನೋಡಿ ಎಂದರು.
ಜ್ಞಾನಪೀಠ ಪ್ರಶಸ್ತಿ ಅವರಿಗೆ ಕೊಟ್ಟಿದ್ರು. ಬಹಳ ಜನಕ್ಕೆ ಕೊಟ್ಟಿದ್ದಾರೆ. ಹೆಚ್ಚಾಗಿ ದೇಶದ ಬಗ್ಗೆ ಚಿಂತನೆ ಮಾಡುವವರಿಗೆ ಸಿಗಬೇಕಿತ್ತು, ಪಾಪ ಸಿಕ್ಕಿಲ್ಲ. ಅಂಥವರು ಕರ್ನಾಟಕದಲ್ಲಿ ಬಹಳ ಜನ ಇದ್ದಾರೆ. ಅವರಿಗೆ ಸಿಗಲಿ ಎಂದು ಹಾರೈಸುವುದಾಗಿ ತಿಳಿಸಿದ ಅವರು, ಅತ್ಯಂತ ಶ್ರೇಷ್ಠ ಸಾಹಿತಿಗಳಿಗೆ ಇನ್ನೂ ಜ್ಞಾನಪೀಠ ಸಿಕ್ಕಿಲ್ಲ. ಅರ್ಹತೆ ಹೊಂದಿದವರಿಗೂ ನೀಡಲಿ ಎಂದು ಮೋದಿ ಅವರ ಬಳಿ ಮನವಿ ಮಾಡುತ್ತೇನೆ ಎಂದು ಹೇಳಿದರು.
ಕಳೆದ ಒಂದು ತಿಂಗಳಿನಿಂದ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ಅವರು ಇಂದು ಬೆಂಗಳೂರಿನ ಲ್ಯಾವೆಲ್ಲಾ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ವಿಧಿವಶರಾಗಿದ್ದಾರೆ. ಸಾಹಿತಿಯ ನಿಧನಕ್ಕೆ ಕನ್ನಡ ಚಿತ್ರರಂಗ, ರಾಜಕಾರಣಿಗಳು ಸೇರಿದಂತೆ ಹಲವು ಮಂದಿ ಸಂತಾಪ ಸೂಚಿಸುತ್ತಿದ್ದಾರೆ.