ಚಿಕ್ಕಬಳ್ಳಾಪುರ: ಆಪರೇಶನ್ ಕಮಲದ ಭೀತಿಯಿಂದ ಬೆಂಗಳೂರಿನ ಲಿ ಮೆರಿಡಿಯನ್ ಹೋಟೆಲ್ ನಲ್ಲಿ ತಂಗಿದ್ದ ಜೆಡಿಎಸ್ ಶಾಸಕರು ದೇವನಹಳ್ಳಿ ಬಳಿಯ ಪ್ರೆಸ್ಟೀಜ್ ಗೋಲ್ಡನ್ ಶೈರ್ ವಿಲ್ಲಾಸ್ ಗೆ ಶಿಫ್ಟ್ ಆಗಿದ್ದರು.
ರೆಸಾರ್ಟ್ ಮತ್ತು ಹೋಟೆಲ್ ಸುತ್ತಾಟದಿಂದ ಹೈರಾಣಗಿದ್ದ ಶಾಸಕ ಬಂಡೆಪ್ಪ ಕಾಶಪ್ಪನವರ್ ರೆಸಾರ್ಟ್ ನಿಂದ ಹೊರಬಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ನಾನು ಸಚಿವ ಸ್ಥಾನಕ್ಕಾಗಿ ಒತ್ತಡ ಹಾಕುತ್ತಿಲ್ಲ. ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾದಗಲೇ ನಾನು ಸಚಿವನಾಗಿ ಸೇವೆ ಮಾಡಿದ್ದೇನೆ. ಈಗಲೂ ಸಹ ಸಚಿವ ಸ್ಥಾನಕ್ಕೆ ವರಿಷ್ಠರ ಮುಂದೆ ಬೇಡಿಕೆ ಇಟ್ಟಿಲ್ಲ. ನಮ್ಮ ಪ್ರಥಮ ಆದ್ಯತೆ ಕುಮಾರಸ್ವಾಮಿ ಮುಖ್ಯಮಂತ್ರಿ ಮಾಡುವುದು. ಕಾಂಗ್ರೆಸ್ ಮತ್ತು ಜೆಡಿಎಸ್ ಸಹಭಾಗಿತ್ವದಲ್ಲಿ ಉತ್ತಮ ಆಡಳಿತ ನೀಡಲಾಗುವುದು. ಗುರುವಾರದ ವರೆಗೂ ರೆಸಾರ್ಟ್ ನಲ್ಲಿ ವಾಸ್ತವ್ಯ ಮಾಡುತ್ತೇವೆ ಎಂದರು.
ಸದ್ಯಕ್ಕೆ ಎಲ್ಲರು ಪ್ರೆಸ್ಟೀಜ್ ಗಾಲ್ಫ್ ಶೈರ್ ನಲ್ಲಿ ವಿಶ್ರಾಂತಿ ತೆಗೆದುಕೊಳ್ಳಲಾಗುತ್ತಿದ್ದಾರೆ. ದೆಹಲಿಯಲ್ಲಿ ಸೋನಿಯಾ ಗಾಂಧಿ ಭೇಟಿಯ ನಂತರ ಜೆಡಿಎಸ್ ಶಾಸಕರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿ ನಂತರ ಕುಮಾರಸ್ವಾಮಿ ಸಂಜೆ ರೆಸಾರ್ಟ್ ಗೆ ಬರಲಿದ್ದಾರೆ. ಬಳಿಕ ಎಲ್ಲಾ ಶಾಸಕರ ಜೊತೆ ಮಾತುಕತೆ ನಡೆಸಲಿದ್ದಾರೆ ಎಂದರು.
ಕುಮಾರಸ್ವಾಮಿ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡುವವರೆಗೂ ಜೆಡಿಎಸ್ ಶಾಸಕರನ್ನು ಕ್ಷೇತ್ರಗಳಿಗೆ ಕಳಿಸದೇ ಶಾಸಕರು ಒಟ್ಟಾಗಿ ಇರುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹೀಗಾಗಿ ದೇವನಹಳ್ಳಿ ನಂದಿಬೆಟ್ಟ ರಸ್ತೆಯಲ್ಲಿರುವ ಪ್ರೆಸ್ಟೀಜ್ ಗಾಲ್ಫ್ ರೆಸಾರ್ಟ್‍ನಲ್ಲಿ 38 ರೂಂಗಳನ್ನ ಬುಕ್ ಮಾಡಲಾಗಿದೆ. ಈ ಹಿನ್ನೆಲೆ ಭಾನುವಾರ ರಾತ್ರಿ 35 ಜೆಡಿಎಸ್ ಶಾಸಕರು ರೆಸಾರ್ಟ್ ಗೆ ಆಗಮಿಸಿದ್ದು, ಕೆಲ ಶಾಸಕರು ತಮ್ಮ ಕುಟುಂಬಸ್ಥರ ಜೊತೆ ವಿಲ್ಲಾಗಳಲ್ಲಿ ತಂಗಿದ್ದಾರೆ.