ದಾವಣಗೆರೆ: ಬಿ.ವೈ ವಿಜಯೇಂದ್ರ (B.Y Vijayendra) ಅವರಿಗೆ ಅನುಭವದ ಕೊರತೆ ಇದೆ. ಹೀಗಾಗಿ ನಮ್ಮ ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆ ಆಗಬೇಕು ಎಂದು ಶಾಸಕ ಬಿ.ಪಿ ಹರೀಶ್ ( B P Harish) ಆಗ್ರಹಿಸಿದ್ದಾರೆ.
ದಾವಣಗೆರೆಯಲ್ಲಿ (Davanagere) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಯತ್ನಾಳ್ ಅಂತವರು ರಾಜ್ಯಾಧ್ಯಕ್ಷರಾಗಬೇಕು, ಇಲ್ಲವೇ ವಿಪಕ್ಷ ನಾಯಕರಾಗಬೇಕು. ನಮ್ಮ ರಾಜ್ಯಾಧ್ಯಕ್ಷರು ರಮೇಶ್ ಜಾರಕಿಹೊಳಿಯವರಿಗೆ ಬೆದರಿಸುವ ರೀತಿ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಓಡಾಡಬೇಕಾದರೆ ಯಡಿಯೂರಪ್ಪನವರ ಅಭಿಮಾನಿಗಳು ಘೇರಾವ್ ಹಾಕುತ್ತಾರೆ ಎಂದು ಭಯದ ವಾತಾವರಣ ಸೃಷ್ಟಿಸುವ ಹೇಳಿಕೆ ನೀಡಿದ್ದಾರೆ. ಇದು ಬಾಲಿಶತನದ ಹೇಳಿಕೆ ಎಂದು ವ್ಯಂಗ್ಯವಾಡಿದ್ದಾರೆ.
ರಮೇಶ್ ಜಾರಕಿಹೊಳಿ 17 ಶಾಸಕರನ್ನು ಕರೆತಂದು ಬಿಎಸ್‍ವೈ ಅವರನ್ನು ಸಿಎಂ ಮಾಡಿದ್ದು. ಈಗ ಪೂಜ್ಯ ತಂದೆ ಬೇಡ ಎಂದು ಮನೆಗೆ ಕಳಿಸಿ, ನಿಮಗೆ ಅವಕಾಶ ನೀಡಿದ್ದಾರೆ. ಆದರೆ ನಿಮ್ಮ ಸಾಧನೆ ಶೂನ್ಯವಾಗಿದೆ. ಶಿಕಾರಿಪುರ ಚುನಾವಣೆ ವಿಚಾರದಲ್ಲಿ ಡಿಕೆಶಿ ಭಿಕ್ಷೆ ಕೊಟ್ಟಿದ್ದೇನೆ ಎಂದು ಬಹಿರಂಗವಾಗಿ ಹೇಳಿದ್ದಾರೆ. ಇದಕ್ಕೆ ಉತ್ತರಿಸುವ ಕೆಲಸ ವಿಜಯೇಂದ್ರ ಮಾಡಿಲ್ಲ. ನಕಲಿ ಸಹಿ ಮಾಡಿದ್ದು ಸುಳ್ಳು ಎನ್ನಬೇಕು, ಇಲ್ಲವೇ ಪ್ರತಿಭಟಿಸಬೇಕು ಅದನ್ನು ಕೂಡ ಮಾಡಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ವೈಫಲ್ಯ ವಾಗುತ್ತಿದೆ. 2028ಕ್ಕೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಅದನ್ನು ನಡೆಸಿಕೊಂಡು ಹೋಗುವ ಸಾಮಥ್ರ್ಯ ವಿಜಯೇಂದ್ರಗೆ ಇಲ್ಲ. ಕಾಂಗ್ರೆಸ್ ವೈಫಲ್ಯ ಎತ್ತಿಹಿಡಿಯಲು ಸಮರ್ಥ ನಾಯಕ ಬೇಕು. ಅವರ ಪ್ರಶ್ನೆಗೆ ಸಮರ್ಥವಾಗಿ ಯಾವುದಕ್ಕೂ ಉತ್ತರ ಕೊಟ್ಟಿಲ್ಲ. ಇದರಿಂದ ನಮಗೆ ನಾಚಿಕೆ ಆಗ್ತಾ ಇದೆ. ಆಡಳಿತ ಪಕ್ಷದವರು ನಿಮ್ಮದು ಬಂಡವಾಳ ಬಿಚ್ಚಬೇಕಾ ಎಂದರೆ ನಮ್ಮ ರಾಜ್ಯಾಧ್ಯಕ್ಷರು ಹಿಂಬಾಗಿಲಿನಿಂದ ಓಡಿ ಹೋಗ್ತಾರೆ. ಇಂತವರಿಂದ ಕಾಂಗ್ರೆಸ್‍ನವರಿಗೆ ಮತ್ತಷ್ಟು ಹಬ್ಬ ಆಗುತ್ತೆ. ಅವರಿಂದ ವಿಧಾನಸೌಧದಲ್ಲಿ ನಮಗೆ ಮುಜುಗರ ಆಗ್ತಾ ಇದೆ ಎಂದು ಕಿಡಿಕಾರಿದ್ದಾರೆ.