ಹಾವೇರಿ: ಇದ್ದಕ್ಕಿದ್ದಂತೆ ಸ್ಯಾಂಡಲ್‍ವುಡ್ ಸ್ಟಾರ್ ನಟರ ಮನೆ ಮೇಲೆ ಐಟಿ ದಾಳಿ ಆಗಿರೋದು ಬೇಸರವಾಗಿದೆ. ಎಲ್ಲೋ ಒಂದು ಕಡೆ ಇದು ಸರಿಯಲ್ಲವೇನೋ ಅಂತ ಅನಿಸುತ್ತಿದೆ ಎಂದು ಹಿರೇಕೆರೂರು ಶಾಸಕ ಬಿ.ಸಿ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ಟಾರ್ ನಟರ ಮನೆ ಮೇಲೆ ಐಟಿ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಐಟಿ ದಾಳಿ ಇದ್ದಕ್ಕಿದ್ದಂತೆ ಆಗಿರೋದು ಬೇಸರ ತಂದಿದೆ. ಸ್ಯಾಂಡಲ್‍ವುಡ್‍ನಲ್ಲಿ ಒಂದರ ಮೇಲೊಂದು ಹಿಟ್ ಸಿನಿಮಾ ಬಂದಿತ್ತು. ಅದರಿಂದ ಸ್ಟಾರ್ ನಟರ ಮನೆ ಮೇಲೆ ಐಟಿ ದಾಳಿ ನಡೆಸಿದ್ದಾರೆ. ಈ ಐಟಿ ದಾಳಿ ಸೂಕ್ತವಲ್ಲವೇನೋ ಅನಿಸುತ್ತದೆ. ಐಟಿ ದಾಳಿ ಅಂದರೆ ಕಳ್ಳತನ, ಕ್ರಿಮಿನಲ್ ಪ್ರಕರಣ ಏನು ಅಲ್ಲ. ಅದು ಆರ್ಥಿಕ ವಿಚಾರಕ್ಕೆ ಸಂಬಂಧಿಸಿದಂತೆ ಪರಿಶೀಲನೆ ಮಾಡುವ ಪರಿ ಅಷ್ಟೇ. ನಟರು ಕೂಡ ಅಧಿಕಾರಿಗಳು ಕೇಳುವ ಎಲ್ಲಾ ದಾಖಲೆಗಳನ್ನು ನೀಡಿರುತ್ತಾರೆ ಎಂಬ ಭರವಸೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೂ ಓದಿ:ಆ ಒಂದು ಡೈರಿಯಿಂದ ಸ್ಟಾರ್ ನಟರ ಮನೆ ಮೇಲೆ ದಾಳಿ!
ಸಚಿವ ಸ್ಥಾನ ಕೈ ತಪ್ಪಿರುವ ವಿಚಾರವಾಗಿ ಮಾತನಾಡಿ, ನಾನು ಸಚಿವನಾಗದೇ ಇದ್ದರೂ ಸರ್ಕಾರಿ ಯೋಜನೆ ತರುವ ಶಕ್ತಿ ನನಗಿದೆ. ಸಚಿವ ಸ್ಥಾನ ಕೈತಪ್ಪಿರೋದಕ್ಕೆ ನನಗೆ ಸರ್ಕಾರದ ಮೇಲೆ ಸಿಟ್ಟಿಲ್ಲ. ಅದು ನನ್ನ ವೈಯಕ್ತಿಕ ವಿಚಾರ. ಸಚಿವ ಸ್ಥಾನ ಕೊಡದಿದ್ದರೆ ಏನು ನನ್ನ ಶಾಸಕ ಸ್ಥಾನವನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಐಟಿ ಅಧಿಕಾರಿಗಳ ಬಳಿ ಕಿಚ್ಚ ಸುದೀಪ್ ಮನವಿ
ಅಲ್ಲದೆ ನಾನು ಯಾವ ಅತೃಪ್ತರ ಸಂಪರ್ಕದಲ್ಲಿಯೂ ಇಲ್ಲ. ಆದರೆ ನನಗೆ ಸಚಿವ ಸ್ಥಾನ ಸಿಗದೇ ಇರೋದು ಇಲ್ಲಿನ ಕಾರ್ಯಕರ್ತರಿಗೆ ಬೇಸರವಾಗಿದೆ. ಯಾರು ಸನ್ಯಾಸಿಗಳಲ್ಲ ಅವರಿಗೂ ನಮ್ಮ ಕ್ಷೇತ್ರಕ್ಕೆ ಮಂತ್ರಿ ಸ್ಥಾನ ಸಿಗಬೇಕು ಎಂಬ ಆಸೆ ಇತ್ತು. ಆದ್ರೆ ಸಚಿವ ಸ್ಥಾನ ಸಿಗಲಿಲ್ಲ, ನನಗೆ ಯಾವುದೇ ಬೇಸರವಿಲ್ಲ. ಶಾಸಕನಾಗಿಯೇ ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದು ಬಿಸಿ ಪಾಟೀಲ್ ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv