– ಮುಡಾ ಹಗರಣದ ಹಗ್ಗ ಸಿಎಂ ಕೊರಳಿಗೆ ಸುತ್ತಲು ಬಹಳ ದಿನ ಉಳಿದಿಲ್ಲ
ಧಾರವಾಡ: ಬಸವಣ್ಣ ಇರುವ ಅನುಭವ ಮಂಟಪ ಇವತ್ತು ಅನುಭವ ಮಂಟಪ ಆಗಿ ಉಳಿದಿಲ್ಲ. ಅಲ್ಲಿ ಪೀರ್ ಭಾಷಾ ಅವರ ಒಂದು ಪೀರ್ ನಡೆಯುತ್ತಿದೆ. ಈ ಸರ್ಕಾರ ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರಕ್ಕೆ ಒಂದೇ ಒಂದು ರೂ. ಹಣ ಬಿಡುಗಡೆ ಮಾಡಿಲ್ಲ ಅದಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶ್ಯಾಮನೂರು ಚಕಾರ ಎತ್ತಿಲ್ಲ ಎಂದು ಅರವಿಂದ್ ಬೆಲ್ಲದ್ (Arvind Bellad) ಕಿಡಿಕಾರಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ಯಾಮನೂರು (Shamanur Shivashankarappa) ಅವರು ಯತ್ನಾಳ್ (Basangouda Patil Yatnal) ಬಗ್ಗೆ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಈ ವೇಳೆ ಯತ್ನಾಳ್ ಬಗ್ಗೆ ಶ್ಯಾಮನೂರು ಅವರ ಬಾಯಲ್ಲಿ ಆ ರೀತಿಯ ಪದ ಬರಬಾರದು. ಅದು ಅವರಿಗೆ ಶೋಭೆ ತರುವಂತದ್ದಲ್ಲ. ಒಣ ಬಾವಿಯಲ್ಲಿ ದೂಡಬೇಕು ಎಂದರೆ ಏನು? ಯತ್ನಾಳ್ ಅವರು ಹೇಳಿದ್ದು ಸರಿ ಇದೆ. ಶ್ಯಾಮನೂರು ಅವರು ಬಸವ ಕಲ್ಯಾಣದಲ್ಲಿ ಏನು ಮಾಡಿದ್ದಾರೆ? ಅವರಿಗೆ ವಯಸ್ಸಾಗಿದೆ. ಅವರು ಮನೆಯಲ್ಲಿ ಕುಳಿತುಕೊಳ್ಳೋದು ಒಳ್ಳೆಯದು. ಈ ರೀತಿ ಬಾಯಿಗೆ ಬಂದಂತೆ ಮಾತನಾಡೋದು ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಯತ್ನಾಳ್ ಹಾಗೂ ವಿಜಯೇಂದ್ರ ತಂಡದ ಮಧ್ಯೆ ಹೈಕಮಾಂಡ್ ಮಧ್ಯೆ ಪ್ರವೇಶಿಸಿರುವ ವಿಚಾರವಾಗಿ, ಪಕ್ಷದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಾಗಿದೆ. ಪಕ್ಷದಲ್ಲಿ ಇದ್ದ ಗೊಂದಲ ಹೈಕಮಾಂಡ್ ಮಧ್ಯಸ್ಥಿಕೆಯಿಂದ ಶಾಂತವಾಗಿದೆ. ಲಕ್ಷಾಂತರ ಕಾರ್ಯಕರ್ತರಿಗೆ ಸಂತೋಷವಾಗಿದೆ. ಪಕ್ಷ ಎಂದ ಮೇಲೆ ಸ್ವಲ್ಪ ಭಿನ್ನಾಭಿಪ್ರಾಯ ಇರೋದು ಸಹಜ. ಈ ಭಿನ್ನಾಭಿಪ್ರಾಯ ಇತ್ಯರ್ಥ ಆಗುವ ಹಾದಿಯಲ್ಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ವಿಚಾರವಾಗಿ, ಬೆಳಗಾವಿ ಅಧಿವೇಶನದ ವೇಳೆ ಹೋರಾಟದ ಬೃಹತ್ ಸಭೆ ಇಟ್ಟುಕೊಂಡಿದ್ದೇವೆ. ಬಿಜೆಪಿ ಸರ್ಕಾರ ಇದ್ದಾಗ ಮೀಸಲಾತಿ ಕೊಡಲಾಗಿತ್ತು. ಈ ಸರ್ಕಾರ ಅದಕ್ಕೆ ಅಡೆತಡೆ ಹಾಕುವಂತಹ ಕೆಲಸ ಮಾಡುತ್ತಿದೆ. ಅದಕ್ಕೆ ನಾವು ಹೋರಾಟ ಮಾಡುತ್ತಿದ್ದೇವೆ ಎಂದಿದ್ದಾರೆ.
ಮುಡಾ ಕೇಸ್ ವಿಚಾರವಾಗಿ, ಇಡಿ ಎಂಟ್ರಿ ಕೊಟ್ಟು ಬಹಳ ದಿನಗಳಾಗಿವೆ. ಸಿಎಂ ಅವರು ಈ ಹಗರಣದಲ್ಲಿದ್ದಾರೆ. ಸುಮಾರು 5 ಸಾವಿರ ಕೋಟಿ ಅಕ್ರಮದಲ್ಲಿ ಸಿಎಂ ಕುಟುಂಬ ಭಾಗಿಯಾಗಿದೆ. ಹಂತ ಹಂತವಾಗಿ ತನಿಖೆ ನಡೆಯುತ್ತಿದೆ. ಈ ಹಗ್ಗ ಸಿಎಂ ಅವರ ಕೊರಳಿಗೆ ಸುತ್ತಿಕೊಳ್ಳಲು ಬಹಳ ದಿನ ಉಳಿದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.