ಮಡಿಕೇರಿ: ಕೊಡಗು ಜಿಲ್ಲೆ ಎರಡು ವರ್ಷಗಳಿಂದ ನಿರಂತರವಾಗಿ ಪ್ರಕೃತಿ ವಿಕೋಪಕ್ಕೆ ನಲುಗಿ ಹೋಗಿದೆ. 2018ರಲ್ಲಿ ಭೂ ಕುಸಿತ ಮತ್ತು ಪ್ರವಾಹ ಎರಡು ಒಟ್ಟೊಟ್ಟಿಗೆ ಸಂಭವಿಸಿತ್ತು. ಈ ವೇಳೆ ಇಡೀ ಬೆಟ್ಟಗಳ ಮಣ್ಣು ಜಲಾಶಯ ನದಿಗಳಲ್ಲಿ ತುಂಬಿ ಹೋಗಿತ್ತು.
ಕೊಡಗಿನ ಏಕೈಕ ಜಲಾಶಯದಲ್ಲಂತು ಬರೋಬ್ಬರಿ 7 ರಿಂದ 8 ಅಡಿಯಷ್ಟು ಮಣ್ಣು ತುಂಬಿತ್ತು. 2019ರಲ್ಲಿ ಕಾವೇರಿ ನದಿ ಉಕ್ಕಿಹರಿದ ಪರಿಣಾಮ ನದಿ ತಟಕ್ಕೆ ಹೊಂದಿಕೊಂಡಂತೆ ಇರುವ ನಾಪೋಕ್ಲು, ಕೊಟ್ಟಡಮುಡಿ, ಕುಶಾಲನಗರ ಸೇರಿದಂತೆ ಹತ್ತಾರು ಹಳ್ಳಿಗಳು ತೀವ್ರ ಸಮಸ್ಯೆ ಎದುರಿಸಿದ್ದವು. ಇದೆಲ್ಲದಕ್ಕೂ ಪ್ರಕೃತಿ ಮೇಲೆ ಮಾನವನು ನಡೆಸಿರುವ ಹಸ್ತಕ್ಷೇಪವೇ ಮುಖ್ಯ ಕಾರಣ ಎಂದು ಭೂ ವಿಜ್ಞಾನಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.
ಈ ಎರಡು ವರ್ಷಗಳಲ್ಲೂ ಹಾರಂಗಿ ಜಲಾಶಯ ಮತ್ತು ಕಾವೇರಿ ನದಿಯಲ್ಲಿ ಅಪಾರ ಪ್ರಮಾಣದ ಹೂಳು ತುಂಬಿ ಹೋಗಿತ್ತು. ಕಾವೇರಿ ನದಿ ಮತ್ತು ಜಲಾಶಯದ ಹಿನ್ನೀರಿನಲ್ಲಿ ತುಂಬಿದ್ದ ಹೂಳಿನಲ್ಲಿ ಗಿಡಗಂಟಿಗಳು ಬೆಳೆದು ಕಾವೇರಿ ನದಿಯ ಸಾಕಷ್ಟು ಕಡೆ ನಡುಗಡ್ಡೆಗಳೇ ನಿರ್ಮಾಣವಾಗಿ, ನದಿ ಹರಿಯುವಿಕೆ ಬದಲಾಗಿದೆ. ಜೊತೆಗೆ ನದಿಯಲ್ಲಿ ನೀರಿನ ಸರಾಗ ಹರಿಯುವಿಕೆಗೆ ಅಡ್ಡಿಯಾಗಿದ್ದು, ಸ್ವಲ್ಪ ಜೋರಾಗಿ ಮಳೆ ಬಂದರು ಮತ್ತೆ ಪ್ರವಾಹ ಉಂಟಾಗುವ ಅಪಾಯ ಎದುರಾಗಿದೆ.
ಈ ಹಿನ್ನೆಲೆಯಲ್ಲಿ ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಅವರು ಕಾವೇರಿ ನದಿಯ ಹಲವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಬಳಿಕ ಕಾವೇರಿ ನದಿಯಲ್ಲಿ ಅಪಾರ ಪ್ರಮಾಣದ ಹೂಳು ತುಂಬಿದೆ. ಇದನ್ನು ತೆಗೆಯದಿದ್ದರೆ ಮತ್ತೆ ಪ್ರವಾಹ ಉಂಟಾಗೋದು ಖಚಿತ. ಅದಕ್ಕಾಗಿ ಕನಿಷ್ಠ 130 ಕೋಟಿ ಅಗತ್ಯವಿದ್ದು, ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಸಿಎಂ ಯಡಿಯೂರಪ್ಪ ಅವರು ಗಮನಹರಿಸಿ ರೈತರ ಸಮಸ್ಯೆ ಆಲಿಸಿ ಹೂಳು ತೆಗೆಯುವುದಕ್ಕೆ ಅನುದಾನ ನೀಡಬೇಕು. ಮಳೆಗಾಲ ಆರಂಭದ ಒಳಗಾಗಿ ಹೂಳು ತೆಗೆಯುವ ಅಗತ್ಯತೆ ಇದೆ ಎಂದರು.