ಮೈಸೂರು: ಒಂದು ಮನೆ ಎಂದ ಮೇಲೆ ಸಣ್ಣಪುಟ್ಟ ವ್ಯತ್ಯಾಸ ಇದ್ದೇ ಇರುತ್ತದೆ ಎಂದು ಶಾಸಕ ಅನಿಲ್ ಚಿಕ್ಕಮಾದು ಈಗ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನನ್ನ ಹೆಸರು ರಾಜೀನಾಮೆಯಲ್ಲಿ ಏಕೆ ಬಂತು ಗೊತ್ತಿಲ್ಲ. ನನಗೆ ಕೆಲವು ಬಾರಿ ಆಶ್ಚರ್ಯವಾಗುತ್ತದೆ. ನಾನು ಮೊನ್ನೆಯಿಂದ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಕಂದಾಯ ಸಭೆ ನಡೆಸಿದೆ. ಮಾಧ್ಯಮದಲ್ಲೂ ನನ್ನ ರಾಜೀನಾಮೆ ಬಗ್ಗೆ ತೋರಿಸುತ್ತಿದ್ದಾರೆ. ನಾನು ರಾಜೀನಾಮೆ ನೀಡುವುದಿಲ್ಲ ಎಂದು ಈಗಾಗಲೇ ಮಾಧ್ಯಮಕ್ಕೆ ಸ್ಪಷ್ಟನೆ ನೀಡಿದ್ದೇನೆ. ಕ್ಷೇತ್ರದ ಮತದಾರರು ನನ್ನ ಮೇಲೆ ನಂಬಿಕೆಯಿಟ್ಟು ಆಶೀರ್ವಾದ ಮಾಡಿದ್ದಾರೆ. ಆ ನಂಬಿಕೆಯನ್ನು ಉಳಿಸಿಕೊಂಡು ನಾನು ಕ್ಷೇತ್ರದಲ್ಲಿ ಇದ್ದು ಕೆಲಸ ಮಾಡುತ್ತೇನೆ ಎಂದರು.
ಅವರವರ ವೈಯಕ್ತಿಕ ವಿಚಾರವಾಗಿ ರಾಜೀನಾಮೆ ಕೊಟ್ಟಿರಬಹುದು. ಕೆಲವರು ಬಿಟ್ಟರೆ ಸಿದ್ದರಾಮಯ್ಯ ಆಪ್ತರು ರಾಜೀನಾಮೆ ನೀಡಿಲ್ಲ. ಒಂದೂವರೆ ವರ್ಷದಿಂದ ನನಗೆ ಯಾವುದೇ ಬಿಜೆಪಿ ನಾಯಕರು ಸಂಪರ್ಕಿಸಿಲ್ಲ. ಮನೆ ಎಂದ ಮೇಲೆ ಸಣ್ಣಪುಟ್ಟ ವ್ಯತ್ಯಾಸ ಬಂದೆ ಬರುತ್ತೆ. ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್ ಆಗಿರಬಹುದು, ಕಾಂಗ್ರೆಸ್ ಆಗಿರಬಹುದು 5 ವರ್ಷ ಸುಭದ್ರವಾಗಿ ಸರ್ಕಾರ ನಡೆಸುತ್ತೇವೆ ಎಂದು ತೀರ್ಮಾನಕ್ಕೆ ಬಂದಿದ್ದರು. ಏನೇ ಸಮಸ್ಯೆ ಇದ್ದರೂ ಹಿರಿಯ ನಾಯಕರ ಜೊತೆ ಮಾತನಾಡಬಹುದಿತ್ತು ಎಂದರು.
ಕ್ಷೇತ್ರದ ಜನತೆ ಒಂದೊಂದು ನಂಬಿಕೆಯಿಟ್ಟು, ನಮ್ಮ ತಂದೆ ಮಾಡಿದ ಕೆಲಸ, ನಮ್ಮ ಎಂಪಿ ಮಾಡಿದ ಕೆಲಸ ಕಾರ್ಯ ಮೆಚ್ಚಿ ವಿಧಾನಸೌಧ ಮಟ್ಟಿಲೇರುವುದ್ದೇನೆ. ಹೆಚ್.ಡಿ ಕೋಟೆ ಜನತೆ ನನ್ನ ಮೇಲೆ ಭರವಸೆ ಇಟ್ಟುಕೊಂಡು ಒಂದು ಹೋರಾಟದ ಮೂಲಕ ಗೆಲ್ಲಿಸಿದ್ದಾರೆ. ಇಂದಿನ ರಾಜಕಾರಣದಲ್ಲಿ ಒಂದೊಂದು ಮತ ಕೂಡ ಬಹಳ ಮುಖ್ಯವಾದದ್ದು, ನಾವು ಅವರಿಗೂ ಎಂದಿಗೂ ಋಣಿಯಾಗಿರಬೇಕು. ನಾನು ಬಿಜೆಪಿಗೆ ಹೋಗದೇ ಕಾಂಗ್ರೆಸ್‍ನಲ್ಲಿಯೇ ಇದ್ದು ಕ್ಷೇತ್ರದ ಅಭಿವೃದ್ಧಿಗಾಗಿ ದುಡಿಯುತ್ತೇನೆ ಎಂದು ಹೇಳಿದರು.
ಬಿಜೆಪಿ ಅವರು ಇದುವರೆಗೂ ಕರೆ ಮಾಡಿಲ್ಲ. ಅವರು ಕರೆ ಮಾಡಿದರೆ, ನಾವು ಪಕ್ಷದಿಂದ ಗೆದ್ದಿದ್ದೇವೆ. ಪಕ್ಷದಲ್ಲಿಯೇ ಇರುತ್ತೇನೆ ಎಂದು ಹೇಳುವುದಾಗಿ ಅವರು ತಿಳಿಸಿದರು.