ಬೆಂಗಳೂರು: ಪಕ್ಷದ ಶಿಸ್ತಿನ ಸಿಪಾಯಿ ಎಂದೇ ಬಿಂಬಿಸಿಕೊಂಡಿದ್ದ ಸುಳ್ಯ ಶಾಸಕ ಎಸ್ ಅಂಗಾರ ಅವರು ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ವಿಡಿಯೋದಲ್ಲಿ ಮಾತನಾಡಿದ ಅವರು, ನಾನು ನಮ್ಮ ಕ್ಷೇತ್ರದಿಂದ ಸಚಿವನಾಗಬೇಕು ಎಂಬುವುದು ನಮ್ಮ ಜಿಲ್ಲೆ ಮತ್ತು ಕ್ಷೇತ್ರದ ಜನರ ಅಪೇಕ್ಷೆಯಾಗಿದೆ. ಆದರೆ ಕಳೆದ ಅನೇಕ ವರ್ಷಗಳಿಂದ ಸಂಘಟನೆಯಲ್ಲಿ ತತ್ವ ಮತ್ತು ಸಿದ್ಧಾಂತವನ್ನು ನಂಬಿ ನಾನು ಕೆಲಸ ಮಾಡಿಕೊಂಡು ಬರುತ್ತಿದ್ದೇನೆ. ಇಂದು ತತ್ವ ನಿಷ್ಠೆಗಳಿಗೆ ಮಹತ್ವ ಇಲ್ಲವೆಂದರೆ ನಾವು ಏನು ಮಾಡುವುದಕ್ಕೆ ಆಗಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
Advertisement
Advertisement
ನಾವು ತತ್ವ ನಿಷ್ಠೆಯನ್ನು ಬಿಡುವುದಕ್ಕೆ ಆಗಲ್ಲ. ಸಂಘಟನೆಯ ಪ್ರಮುಖ ಭಾಗ ಮತ್ತು ಸಂಘಟನೆ ಯಶಸ್ವಿಯಾಗಿ ನಡೆಯಬೇಕಾದರೆ ತತ್ವ ನಿಷ್ಠೆಯೇ ಅತ್ಯಂತ ಪ್ರಮುಖವಾಗಿದೆ. ಆದ ಕಾರಣ ಇಂದು ನಮಗೆ ಸಚಿವ ಸ್ಥಾನ ಸಿಗದೇ ಇರಬಹುದು. ಆದರೆ ಸಂಘಟನೆಯಲ್ಲಿ ಯಾವುದೇ ರೀತಿಯ ಮನಸ್ತಾಪ ಇಲ್ಲ. ಕೆಲವು ಘಟನೆಗಳು ಈ ರೀತಿ ಆಗುತ್ತವೆ. ಅದಕ್ಕೆ ನಾವು ಏನು ಮಾಡುವುದಕ್ಕೆ ಆಗಲ್ಲ. ಇಂದು ನಮ್ಮ ಕ್ಷೇತ್ರದ ಜನರು ನಮ್ಮ ಮೇಲಿನ ಅಭಿಮಾನ ಗೌರವದಿಂದ ಬಂದಿದ್ದರು. ಹೀಗಾಗಿ ಅವರಿಗೆಲ್ಲ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.
Advertisement
ದಕ್ಷಿಣ ಕನ್ನಡದ ಲೋಕಸಭಾ ಕ್ಷೇತ್ರದಲ್ಲಿ ಬರುವ ಒಟ್ಟು 8 ಕ್ಷೇತ್ರಗಳಲ್ಲಿ 7 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದುಕೊಂಡಿದೆ. ಹರೀಶ್ ಪೂಂಜಾ(ಬೆಳ್ತಂಗಡಿ), ಉಮನಾಥ ಕೋಟ್ಯಾನ್(ಮೂಡಬಿದಿರೆ), ಡಾ. ಭರತ್ ಶೆಟ್ಟಿ( ಮಂಗಳೂರು ಉತ್ತರ), ವೇದವ್ಯಾಸ ಕಾಮತ್(ಮಂಗಳೂರು ದಕ್ಷಿಣ), ರಾಜೇಶ್ ನಾಯ್ಕ್(ಬಂಟ್ವಾಳ), ಸಂಜೀವ ಮಠದೂರ್(ಪುತ್ತೂರು) ಜಯಗಳಿಸಿದ್ದರು.
Advertisement
ರಾಜ್ಯದ ಹಿರಿಯ ಬಿಜೆಪಿ ಶಾಸಕರಾಗಿರುವ ಜೊತೆಗೆ ಜಿಲ್ಲೆಗೊಂದು ಉಸ್ತುವಾರಿ ಸಚಿವರಾಗಬೇಕಾದ ಹಿನ್ನೆಲೆಯಲ್ಲಿ ಈ ಬಾರಿ ಎಸ್‍ಸಿ ಮೀಸಲು ಕ್ಷೇತ್ರದಿಂದ ಜಯಗಳಿಸಿದ್ದ ಅಂಗಾರ ಅವರಿಗೆ ಮಂತ್ರಿ ಸ್ಥಾನ ಸಿಗುವುದು ಖಚಿತ ಎನ್ನುವ ಮಾತು ಕೇಳಿ ಬಂದಿತ್ತು. ಅಷ್ಟೇ ಅಲ್ಲದೇ ಬಿಜೆಪಿ ವಲಯದಲ್ಲೂ ಮಂತ್ರಿ ಸ್ಥಾನದ ಬಗ್ಗೆ ವಿಶ್ವಾಸದ ಮಾತು ಕೇಳಿ ಬಂದಿತ್ತು.
ಅಂಗಾರ ಅವರು 1994 ರಿಂದ ಆರಂಭಗೊಂಡು 2018ರವರೆಗೆ ನಡೆದ ಚುನಾವಣೆಯಲ್ಲಿ ಸತತ ಆರು ಬಾರಿ ಗೆದ್ದಿದ್ದಾರೆ. ದೋಸ್ತಿ ಸರ್ಕಾರದಲ್ಲಿ ಮಂಗಳೂರು(ಹಿಂದೆ ಉಳ್ಳಾಲ ಆಗಿತ್ತು) ಕ್ಷೇತ್ರದಿಂದ ಗೆದ್ದಿದ್ದ ಯುಟಿ ಖಾದರ್ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿತ್ತು. ಅದಕ್ಕೂ ಮೊದಲು ಸಿದ್ದರಾಮಯ್ಯ ಸರ್ಕಾರದಲ್ಲಿ ರಾಮನಾಥ ರೈ, ಖಾದರ್ ಸಚಿವರಾಗಿದ್ದರೆ ಪುತ್ತೂರಿನಿಂದ ಗೆದ್ದಿದ್ದ ಶಕುಂತಲಾ ಶೆಟ್ಟಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಸದೀಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು.