ಬಳ್ಳಾರಿ: ಜಿಲ್ಲೆಯ ವಿಜಯನಗರ ಶಾಸಕ ಆನಂದ್ ಸಿಂಗ್ ಕಾಣೆಯಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗೆ ಹಾಜರಾಗಿದ್ದ ಆನಂದ್ ಸಿಂಗ್ ತಾವು ಕಾಣೆಯಾಗಿಲ್ಲ ಎಂದು ವಿವರಣೆ ನೀಡಿದ್ದಾರೆ.
ಅತೃಪ್ತ ಶಾಸಕರ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಆನಂದ್ ಸಿಂಗ್ ಅವರು ರಾಜೀನಾಮೆ ನೀಡಿದ ಬಳಿಕ ಕಾಂಗ್ರೆಸ್ ನಾಯಕರ ಸಂಪರ್ಕದಿಂದ ದೂರ ಇದ್ದರು. ಈ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದ ಹೊಸಪೇಟೆ ಕಾಂಗ್ರೆಸ್ ಪದಾಧಿಕಾರಿಗಳು ಆನಂದ್ ಸಿಂಗ್ ಕಾಣೆಯಾಗಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಸಂಜೆ 9 ಗಂಟೆ ವೇಳೆಗೆ ಹೊಸಪೇಟೆ ನಗರದ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದರು.
Advertisement
Advertisement
ನಾನು ಎಲ್ಲಿಯೂ ಹೋಗಿಲ್ಲ. ತಂದೆಯವರ ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ತೆರಳಿದ್ದೆ. ನಾನು ಜುಲೈ 13ರ ವರೆಗೂ ಹೊಸಪೇಟೆಯಲ್ಲಿ ಇದ್ದೇ, ಅಂದು ಸಂಜೆ ನನ್ನ ತಂದೆ ಅವರು ಮಳೆಯ ತೇವದಲ್ಲಿ ಜಾರಿ ಬಿದ್ದ ಕಾರಣ ಅವರಿಗೆ ಹೊಸಪೇಟೆಯ ವೈದ್ಯರ ಬಳಿ ಚಿಕಿತ್ಸೆ ಕೊಡಿಸಿದ್ದೆವು. ಬಳಿಕ ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ವಿಕ್ರಮ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಕೊಡಿಸಿದ್ದೆವು. ಜುಲೈ 17 ರಂದು ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಬಳಿಕ ಎರಡು ದಿನ ಆಸ್ಪತ್ರೆಗೆ ಭೇಟಿ ನೀಡಿದ್ದೆವು. ಆದರೆ ಮಾಧ್ಯಮಗಳಲ್ಲಿ ಪುನಃ ಕಾಣೆಯಾಗಿದ್ದಾರೆ ಎಂಬ ವರದಿ ಬಂದ ಹಿನ್ನೆಲೆಯಲ್ಲಿ ತಮ್ಮ ಠಾಣೆಗೆ ಹಾಜರಾಗಿ ದಾಖಲಾತಿ ಸಲ್ಲಿಸಿದ್ದೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
Advertisement
ಇದಕ್ಕೂ ಮುನ್ನ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿವರಣೆ ನೀಡಿದ್ದ ಶಾಸಕ ಆನಂದ್ ಸಿಂಗ್, ನನ್ನನ್ನು ಹುಡುಕುವ ಅಗತ್ಯವಿಲ್ಲ. ದೇವರ ದಯೆಯಿಂದ ನಾನು ಚೆನ್ನಾಗಿದ್ದೇನೆ. ನನ್ನ ಬಗ್ಗೆ ಆಲೋಚನೆ ಮಾಡಬೇಡಿ ಎಂದು ಕ್ಷೇತ್ರದ ಜನರಲ್ಲಿ ಮನವಿ ಮಾಡಿದ್ದರು.