– ರಾಜಿ ಸಂಧಾನಕ್ಕೆ ಗಣೇಶ್ ಯತ್ನ
– ಆಸ್ಪತ್ರೆಗೆ ಬಂದು ಕ್ಷಮೆ ಕೇಳ್ತೀನಿ
– ಅರೆಸ್ಟ್ ಆಗದ ಹೊರತು ಬಿಡುಗಡೆಯಾಗಲ್ಲ: ಆನಂದ್ ಸಿಂಗ್ ಪ್ರತಿಜ್ಞೆ
ಬೆಂಗಳೂರು: ಬಿಡದಿ ಈಗಲ್ ಟನ್ ರೆಸಾರ್ಟಿನಲ್ಲಿ ವಿಜಯನಗರ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ `ರೌಡಿ’ ಶಾಸಕ ಕಂಪ್ಲಿ ಗಣೇಶ್ ಎಲ್ಲಿದ್ದಾರೆ ಎನ್ನುವ ಪ್ರಶ್ನೆ ಎದ್ದಿದೆ.
ಸೋಮವಾರ ಮಧ್ಯಾಹ್ನದವರೆಗೂ ರೆಸಾರ್ಟಿನಲ್ಲಿದ್ದ ಗಣೇಶ್ ತನ್ನ ವಿರುದ್ಧ ಎಫ್‍ಐಆರ್ ದಾಖಲಾಗುತ್ತಿದ್ದಂತೆ ದಿಢೀರ್ ಕಣ್ಮರೆಯಾಗಿದ್ದಾರೆ. ಐಪಿಸಿ ಸೆಕ್ಷನ್ 323(ಹಲ್ಲೆ), 324(ದೊಣ್ಣೆಯಿಂದ ಹಲ್ಲೆ), 307(ಕೊಲೆ ಯತ್ನ), 504(ಉದ್ದೇಶ ಪೂರ್ವಕ ಶಾಂತಿ ಕದಡುವುದು) 506(ಜೀವ ಬೆದರಿಕೆ) ಅಡಿ ಬಿಡದಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇಷ್ಟು ಹೊತ್ತಿಗೆ ಬಂಧನವಾಗಬೇಕಿತ್ತು.
Advertisement
Advertisement
ರಾಮನಗರ ಡಿವೈಎಸ್ಪಿ ಪುರುಷೋತ್ತಮ್ ಹಾಗೂ ಬಿಡದಿ ಇನ್ಸ್ ಪೆಕ್ಟರ್ ಹರೀಶ್ ನೇತೃತ್ವದಲ್ಲಿ ಗಣೇಶ್ ಪತ್ತೆಗೆ ಮೂರು ತಂಡ ರಚನೆಯಾಗಿದ್ದು, ಬೆಂಗಳೂರು ಮತ್ತು ಬಳ್ಳಾರಿಯಲ್ಲಿ ಗಣೇಶ್ ಇಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. `ಕೈ’ ಶಾಸಕನಾಗಿರುವ ಗಣೇಶ್ ಹುಡುಕದಂತೆ ಪೊಲೀಸರ ಮೇಲೆ ಸರ್ಕಾರದಿಂದಲೇ ಒತ್ತಡ ಇದ್ಯಾ ಎನ್ನುವ ಪ್ರಶ್ನೆಯೂ ಈಗ ಎದ್ದಿದೆ.
Advertisement
ಸಂಧಾನಕ್ಕೆ ಯತ್ನ:
ಮಾನ ಉಳಿಸಿಕೊಳ್ಳುವಲ್ಲಿ ಭರದಲ್ಲಿ `ರೌಡಿ ಎಂಎಲ್‍ಎ’ ರಕ್ಷಣೆಗೆ ಕಾಂಗ್ರೆಸ್ ಮುಂದಾಗುತ್ತಿದ್ದು, ಗಣೇಶ್ ಮತ್ತು ಆನಂದ್ ಸಿಂಗ್ ಜೊತೆಗೆ ಸಂಧಾನಕ್ಕೆ ಪ್ರಯತ್ನ ನಡೆಸುತ್ತಿದೆ. ದೋಸ್ತಿ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯ ಸಚಿವ ಜಮೀರ್ ಅಹಮದ್ ಜೊತೆ ಗಣೇಶ್ ನಿರಂತರ ಸಂಪರ್ಕದಲ್ಲಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
Advertisement
ಕೋಪದಲ್ಲಿ ಏನೋ ಆಗಿ ಹೋಗಿದೆ. ನಾನು ಅಣ್ಣನ ಕ್ಷಮೆ ಕೇಳುತ್ತೇನೆ ಎಂದು ರಾಜಿ ಸಂಧಾನದಲ್ಲಿ ಪ್ರಕರಣವನ್ನು ಇತ್ಯರ್ಥ ಪಡಿಸಲು ಗಣೇಶ್ ಮುಂದಾಗಿದ್ದಾರೆ. ಜಮೀರ್ ಮೂಲಕ ಗಣೇಶ್ ಸಂಧಾನಕ್ಕೆ ಯತ್ನಿಸಿದ್ದಾರೆ. ಆನಂದ್ ಸಿಂಗ್ ಒಪ್ಪುವುದಾದರೆ ಆಸ್ಪತ್ರೆಗೆ ಗಣೇಶ್ ಅವರನ್ನು ಕರೆದುಕೊಂಡು ಬಂದು ಕ್ಷಮೆ ಕೇಳಿಸುತ್ತೇನೆ ಎಂದು ಜಮೀರ್ ನಾಯಕರ ಜೊತೆ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆನಂದ್ ಸಿಂಗ್ ಪ್ರತಿಜ್ಞೆ:
ಶಾಸಕ ಗಣೇಶ್ ಅರೆಸ್ಟ್ ಆಗಬೇಕು. ಅಲ್ಲಿಯವರೆಗೆ ನಾನು ಆಸ್ಪತ್ರೆಯಿಂದ ಹೊರಬರುವುದಿಲ್ಲ ಎಂದು ಆನಂದ್ ಸಿಂಗ್ ಪ್ರತಿಜ್ಞೆ ಮಾಡಿದ್ದಾರಂತೆ. ಈಗ ನಾನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರೆ ಗಣೇಶ್‍ಗೆ ಜಾಮೀನು ಸಿಗುತ್ತದೆ. ಹೀಗಾಗಿ ಗಣೇಶ್ ಅರೆಸ್ಟ್ ಆಗುವವರೆಗೂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗದೇ ಇರುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎನ್ನುವ ವಿಚಾರವನ್ನು ಮೂಲಗಳು ತಿಳಿಸಿವೆ. ಆನಂದ್ ಸಿಂಗ್ ಗಾಯವೆಲ್ಲಾ ಮಾಸುತ್ತಿದ್ದು, ಕಣ್ಣಿನ ಭಾಗದಲ್ಲಿ ಊತ ಕಡಿಮೆ ಆಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv