ಕೊಡಗು: ಮಡಿಕೇರಿ-ನಾಪೋಕ್ಲು-ಯಡಪಾಲ-ಕೆದಮುಳ್ಳೂರು-ವಿರಾಜಪೇಟೆ ಮಾರ್ಗವಾಗಿ ಮೈಸೂರಿಗೆ ಹಾಗೆಯೇ ಮೈಸೂರು-ವಿರಾಜಪೇಟೆ-ಕೆದಮುಳ್ಳೂರು-ಯಡಪಾಲ-ನಾಪೋಕ್ಲು-ಮಡಿಕೇರಿ ಮಾರ್ಗದ ಕೆಎಸ್‍ಆರ್‌ಟಿಸಿ ಬಸ್ ಸಂಚಾರಕ್ಕೆ ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ (A.S.Ponnanna) ಬುಧವಾರ ಚಾಲನೆ ನೀಡಿದರು.
ನಾಪೋಕ್ಲುವಿನಲ್ಲಿ ಚಾಲನೆ ನೀಡಿ ಮಾತನಾಡಿದ ಶಾಸಕ ಎ.ಎಸ್.ಪೊನ್ನಣ್ಣ ಅವರು ಬೆಳಗ್ಗೆ 7 ಗಂಟೆಗೆ ಮಡಿಕೇರಿಯಿಂದ ಹೊರಟು ನಾಪೋಕ್ಲು-ಯಡಪಾಲ-ಕೆದಮುಳ್ಳೂರು-ವಿರಾಜಪೇಟೆ ಮಾರ್ಗವಾಗಿ ಮೈಸೂರಿಗೆ ತೆರಳಿ ಮತ್ತೆ ಅದೇ ಮಾರ್ಗದಲ್ಲಿ ಸಂಚರಿಸಲಿದೆ ಎಂದು ಹೇಳಿದರು. ಹಲವು ವರ್ಷಗಳಿಂದ ಇಲ್ಲಿನ ಸ್ಥಳೀಯರು ಕೆಎಸ್‍ಆರ್‌ಟಿಸಿ ಬಸ್ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆ ಸಾರ್ವಜನಿಕರ ಬೇಡಿಕೆ ಈಡೇರಿದೆ ಎಂದು ತಿಳಿಸಿದರು. ಇದನ್ನೂ ಓದಿ: ಸಿಎಂ ನೇತೃತ್ವದ ನಿಯೋಗದಿಂದ ರಕ್ಷಣಾ ಸಚಿವರ ಭೇಟಿ – ರಾಜ್ಯದಲ್ಲಿ 2 ಡಿಫೆನ್ಸ್ ಕಾರಿಡಾರ್‌ಗೆ ಮನವಿ
ಕೆಎಸ್‍ಆರ್‌ಟಿಸಿ ವಿಭಾಗೀಯ ನಿಯಂತ್ರಕರಾದ ಅಮರಲಿಂಗಯ್ಯ, ವಿಭಾಗೀಯ ಸಂಚಲನಾಧಿಕಾರಿ ಜಯ ಶಾಂತಕುಮಾರ್, ಮಡಿಕೇರಿ ಕೆಎಸ್‍ಆರ್‌ಟಿಸಿ ಘಟಕದ ವ್ಯವಸ್ಥಾಪಕ ಎಂ.ಮೆಹಬೂಬ್ ಅಲಿ ಇತರರು ಇದ್ದರು.
ಇದೇ ಸಂದರ್ಭದಲ್ಲಿ ಗ್ರಾ.ಪಂ. ವತಿಯಿಂದ ನಿರ್ಮಾಣ ಮಾಡಿರುವ ಬಸ್ ನಿಲ್ದಾಣವನ್ನು ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು. ನಾಪೋಕ್ಲು ಗ್ರಾ.ಪಂ. ಅಧ್ಯಕ್ಷರಾದ ವನಜಾಕ್ಷಿ, ಉಪಾಧ್ಯಕ್ಷ ಶಶಿ ಮಂದಣ್ಣ, ಪಿಡಿಒ ಚೋಂದಕ್ಕಿ, ಸದಸ್ಯರು ಇತರರು ಉಪಸ್ಥಿತರಿದ್ದರು. ಇದನ್ನೂ ಓದಿ: ರಾಜ್ಯದ ಮನವಿಗಳಿಗೆ ಕೇಂದ್ರ ರಕ್ಷಣಾ ಸಚಿವರ ಸಕಾರಾತ್ಮಕ ಸ್ಪಂದನೆ: ಸಿದ್ದರಾಮಯ್ಯ