ಮಿಜೋರಾಂನಲ್ಲಿ ಭಾರೀ ಮಳೆ- ಕಲ್ಲುಕ್ವಾರಿ ಕುಸಿದು 10 ಮಂದಿ ದುರ್ಮರಣ, ಹಲವರು ನಾಪತ್ತೆ

Public TV
1 Min Read
MIZORAM RAIN 2

ಐಜ್ವಾಲ್:‌ ಇಂದು (ಮಂಗಳವಾರ) ಬೆಳಗ್ಗೆ ಎಡೆಬಿಡದೆ ಸುರಿದ ಭಾರೀ ಮಳೆಯಿಂದಾಗಿ ಮಿಜೋರಾಂನ ಐಜ್ವಾಲ್ (Aizawl, Mizoram)  ಜಿಲ್ಲೆಯಲ್ಲಿ ಕಲ್ಲುಕ್ವಾರಿ ಕುಸಿದು ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಹಲವರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಐಜ್ವಾಲ್ ಪಟ್ಟಣದ ದಕ್ಷಿಣ ಪರಿಧಿಯಲ್ಲಿ ನೆಲೆಗೊಂಡಿರುವ ಮೆಲ್ತಮ್ ಮತ್ತು ಹ್ಲಿಮೆನ್ ಸಮೀಪದಲ್ಲಿ ಬೆಳಗ್ಗೆ 6 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಮೃತರಲ್ಲಿ 7 ಮಂದಿ ಸ್ಥಳೀಯರು ಹಾಗೂ ಮೂವರು ಹೊರ ರಾಜ್ಯದವರು. ಇನ್ನೂ 10ಕ್ಕೂ ಹೆಚ್ಚು ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ ಇದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

MIZORAM RAIN 1

ಇದುವರೆಗೆ 10 ಮೃತದೇಹಗಳು ಪತ್ತೆಯಾಗಿದೆ. ಇನ್ನೂ ಹಲವರು ಅವಶೇಷಗಳಡಿ ಸಿಲುಕಿದ್ದಾರೆ. ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸಲು ಎಲ್ಲ ಪ್ರಯತ್ನಗಳು ನಡೆಯುತ್ತಿವೆ. ಆದರೆ ಭಾರೀ ಮಳೆಯಿಂದಾಗಿ ಕಾರ್ಯಾಚರಣೆಗೆ ತೊಂದರೆಯಾಗುತ್ತಿದೆ ಎಂದು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅನಿಲ್ ಶುಕ್ಲಾ ತಿಳಿಸಿದ್ದಾರೆ. ಇದನ್ನೂ ಓದಿ: ಪಪುವಾ ನ್ಯೂಗಿನಿಯಾದಲ್ಲಿ ಭಾರೀ ಭೂಕುಸಿತ – 2,000ಕ್ಕೂ ಹೆಚ್ಚು ಮಂದಿ ಜೀವಂತ ಸಮಾಧಿ!

ಹಲವೆಡೆ ಭೂಕುಸಿತ: ನಿರಂತರ ಮಳೆಯ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆಗೆ ಅಡಚಣೆಯಾಗುತ್ತಿದೆ. ಅಧಿಕಾರಿಗಳ ಪ್ರಕಾರ, ಮಳೆಯಿಂದಾಗಿ ರಾಜ್ಯದ ಹಲವೆಡೆ ಭೂಕುಸಿತ ಉಂಟಾಗಿದೆ. ಹುಂತಾರ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 6 ರಲ್ಲಿ ಭೂಕುಸಿತದಿಂದಾಗಿ ಐಜ್ವಾಲ್ ದೇಶದ ಇತರ ಭಾಗಗಳಿಂದ ಸಂಪರ್ಕ ಕಡಿತಗೊಂಡಿದೆ. ಇದಲ್ಲದೆ ಹಲವಾರು ಅಂತರ್-ರಾಜ್ಯ ಹೆದ್ದಾರಿಗಳು ಭೂಕುಸಿತದಿಂದ ಸಂಚಾರಕ್ಕೆ ಅಡ್ಡಿಯಾಗಿದೆ.

MIZORAM RAIN

ಪರಿಸ್ಥಿತಿಯನ್ನು ಅವಲೋಕಿಸಲು ಮುಖ್ಯಮಂತ್ರಿ ಲಾಲ್ದುಹೋಮ ಅವರು ಗೃಹ ಸಚಿವ ಕೆ ಸಪ್ದಂಗ, ಮುಖ್ಯ ಕಾರ್ಯದರ್ಶಿ ರೇಣು ಶರ್ಮಾ ಮತ್ತು ಇತರ ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಸಭೆಯನ್ನು ಕರೆದಿದ್ದಾರೆ. ಇನ್ನು ಭಾರೀ ಮಳೆಯ ಕಾರಣ, ಎಲ್ಲಾ ಶಾಲೆಗಳನ್ನು ಮುಚ್ಚಲಾಗಿದೆ ಮತ್ತು ಅಗತ್ಯ ಸೇವೆಗಳನ್ನು ಒದಗಿಸುವವರನ್ನು ಹೊರತುಪಡಿಸಿ ಸರ್ಕಾರಿ ನೌಕರರನ್ನು ಮನೆಯಿಂದಲೇ ಕೆಲಸ ಮಾಡಲು ತಿಳಿಸಲಾಗಿದೆ.

Share This Article