ಉಡುಪಿ: ಸುಮ್ನಿರಲಾರದವ ಇರುವೆ ಬಿಟ್ಕೊಂಡ ಅನ್ನೋ ಪರಿಸ್ಥಿತಿ ಯೂತ್ ಕಾಂಗ್ರೆಸ್ ಮುಖಂಡ ಮಿಥುನ್ ರೈ (Congres Leader Mithun Rain) ಅವರದ್ದು. ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ‘ಕೈ’ಗೆ ‘ರೈ’ ಅಸ್ತ್ರ ಕೊಟ್ಟಿದ್ದಾರೆ. ಉಡುಪಿ ಕೃಷ್ಣ ಮಠಕ್ಕೆ ಸಂಬಂಧಪಟ್ಟಂತೆ ಮಿಥುನ್ ಕೊಟ್ಟ ಹೇಳಿಕೆ ಚರ್ಚೆಗೆ ಕಾರಣವಾಗಿದೆ. ಬಿಜೆಪಿ (BJP) ನಾಯಕರು ರೈ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಚುನಾವಣೆ ಹತ್ತಿರವಾಗುತ್ತಿದ್ದಂತೆ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ತಿಕ್ಕಾಟ ಶುರುವಾಗಿದೆ. ಒಂದೊಂದು ಹೇಳಿಕೆಗಳು ಚರ್ಚಾಸ್ಪದ ವಿವಾದಾತ್ಮಕವಾಗುತ್ತಿದೆ. ಕಾಂಗ್ರೆಸ್ ಮುಖಂಡ ಡಿ.ಕೆ ಶಿವಕುಮಾರ್ ಆಪ್ತ ಮಿಥುನ್ ರೈ ಕೊಟ್ಟ ಹೇಳಿಕೆ ಈಗ ತೀವ್ರ ಚರ್ಚೆಗೆ ಕಾರಣವಾಗಿದೆ. ಉಡುಪಿ ಕೃಷ್ಣ ಮಠ (Krishna Mutt, Udupi) ದ ಜಮೀನನ್ನು ಮುಸಲ್ಮಾನ ದೊರೆ ಧಾರವಾಹಿ ನೀಡಿದ್ದ ಎಂಬ ಹೇಳಿಕೆ ಭಾರೀ ವಿರೋಧಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಆಪ್ ನಾಯಕರ ಬಂಧನ – ಹೋಳಿ ತೊರೆದು ಧ್ಯಾನ ಆರಂಭಿಸಿದ ಕೇಜ್ರಿವಾಲ್
ಮೂಡಬಿದರೆ ವಿಧಾನಸಭಾ ಕ್ಷೇತ್ರ (Mudabidire Vidhanasabha Constituency) ದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಮಿಥುನ್ ರೈ ನಮ್ಮೂರ ಮಸೀದಿ ನೋಡಬನ್ನಿ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದಾರೆ. ಸೌಹಾರ್ದದ ಮಾತಿನ ನಡುವಿನ ಹೇಳಿಕೆ ಚರ್ಚೆಗೆ ಕಾರಣವಾಗಿದೆ. ಈ ಹೇಳಿಕೆಗೆ ಉಡುಪಿ ಶಾಸಕ ರಘುಪತಿ ಭಟ್ (Raghupathi Bhat) ತಿರುಗೇಟು ಕೊಟ್ಟಿದ್ದಾರೆ. ಅಯೋಧ್ಯೆ, ಕಾಶಿ – ಮಥುರಾದಲ್ಲಿ ನಿಮ್ಮ ಅಣ್ಣ ತಮ್ಮಂದಿರು ಏನು ಮಾಡಿದ್ದಾರೆ ಎಂದು ಇಡೀ ದೇಶಕ್ಕೆ ಗೊತ್ತಿದೆ. ಸತ್ಯ ತಿಳಿದುಕೊಂಡು ಮಾತನಾಡಿ ಎಂದಿದ್ದಾರೆ.
ಆ ಕಾಲದಲ್ಲಿ ಕೃಷ್ಣ ಮಠಕ್ಕೆ ಮುಸಲ್ಮಾನರು ಕೊಡುಗೆಗಳನ್ನು ನೀಡಿದ್ದಾರೆ, ಎಣ್ಣೆ ಬತ್ತಿ ಮತ್ತಿತರ ಪರಿಕರಗಳನ್ನು ಕೊಟ್ಟಿದ್ದಾರೆ ಎಂಬುದು ಬಾಯಿ ಮಾತಿನಲ್ಲಿದೆ. ಹಾಜಿ ಅಬ್ದುಲ್ಲಾ ಸಾಹೇಬ್ ಎಣ್ಣೆಯ ಹರಕೆ ಜನಜನಿತವಾಗಿದೆ. ಆದರೆ ಮುಸಲ್ಮಾನ ದೊರೆಯ ಜಮೀನು ಬಳುವಳಿ ವಿಚಾರ ಚುನಾವಣೆಯವರೆಗೂ ಚರ್ಚೆ ಆಗುವ ಸಾಧ್ಯತೆ ಇದೆ.