ಸೀರೆ ಉಟ್ಟು ಬ್ಯಾಟ್ ಮಾಡಿದ ಮಿಥಾಲಿ- ಟೀಂ ಇಂಡಿಯಾಗೆ ವಿಶೇಷ ಸಂದೇಶ

Public TV
2 Min Read
Mithali Raj22

ನವದೆಹಲಿ: ಸೀರೆ ಉಟ್ಟು ಬ್ಯಾಟ್ ಮಾಡಿರುವ ಭಾರತ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್, ಮಹಿಳಾ ಟಿ-20 ವಿಶ್ವಕಪ್‍ನಲ್ಲಿ ಫೈನಲ್ ತಲುಪಿರುವ ಟೀಂ ಇಂಡಿಯಾಗೆ ಒಂದು ವಿಶೇಷ ಸಂದೇಶವನ್ನು ಕಳುಹಿಸಿದ್ದಾರೆ.

ನಾಳೆ ಇರುವ ವಿಶ್ವ ಮಹಿಳಾ ದಿನದ ಅಂಗವಾಗಿ ವಿಶೇಷವಾಗಿ ವಿಡಿಯೋ ಮಾಡಿರುವ ಮಿಥಾಲಿ, ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಸೀರೆ ಉಟ್ಟು ಬ್ಯಾಟ್ ಮಾಡಿರುವ ಮಿಥಾಲಿ ರಾಜ್, ಇಡೀ ಪ್ರಪಂಚಕ್ಕೆ ನಾವು ಕೂಡ ವಿಶ್ವಕಪ್ ಗೆಲ್ಲುತ್ತೇವೆ ಎಂದು ತೋರಿಸಬೇಕು. ಕಮಾನ್ ಟೀಂ ಇಂಡಿಯಾ ಟ್ರೋಫಿಯನ್ನು ಗೆದ್ದು ತನ್ನಿ ಎಂದು ಹೇಳಿದ್ದಾರೆ.

MITHALI RAJ 2

ಈ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಾಕಿಕೊಂಡಿರುವ ಮಿಥಾಲಿ, ಪ್ರತಿ ಸೀರೆಯು ನಿಮಗಿಂತ ಹೆಚ್ಚು ಮಾತನಾಡುತ್ತದೆ ಎಂಬುದು ನನಗೆ ಗೊತ್ತು. ಅದು ನಿಮ್ಮನ್ನು ಫಿಟ್ ಆಗಿ ಇರಿ ಎಂದು ಹೇಳುವುದಿಲ್ಲ. ಬದಲಿಗೆ ನಿಮ್ಮನ್ನು ಎದ್ದು ಕಾಣುವಂತೆ ಮಾಡುತ್ತದೆ. ಈ ಮಹಿಳಾ ದಿನದಂದು ಅಮೂಲ್ಯವಾದುದನ್ನು ಏನಾದರೂ ಪ್ರಾರಂಭಿಸೋಣ ಹಾಗೂ ನಾವು ಕೂಡ ಸಾಧಿಸಬಹುದು ಎಂಬುದನ್ನು ಜಗತ್ತಿಗೆ ತೋರಿಸೋಣ. ಜೀವನವನ್ನು ಆರಂಭಿಸುವ ಸಮಯವಿದು ಎಂದು ಬರೆದುಕೊಂಡಿದ್ದಾರೆ.

https://www.instagram.com/p/B9UVMI8pXiv/

ಇದರ ಜೊತೆಗೆ ಈ ವಿಡಿಯೋವನ್ನು ಹೆಣ್ಣು ಮಕ್ಕಳಿಗೆ ಅರ್ಪಣೆ ಮಾಡಲಾಗಿದ್ದು, 55 ಸೆಕೆಂಡ್ ಇರುವ ಈ ವಿಡಿಯೋದಲ್ಲಿ ಮಿಥಾಲಿ ರಾಜ್ ಅವರು ಮಾಡಿದ ವಿಶೇಷ ಸಾಧನೆಗಳ ಬಗ್ಗೆಯೂ ಕೂಡ ತಿಳಿಸಲಾಗಿದೆ. 1999 ರಲ್ಲಿ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ ಮಿಥಾಲಿ, ಇಲ್ಲಿಯವರೆಗೂ 209 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಹಾಗೂ ಏಕದಿನ ಕ್ರಿಕೆಟ್‍ನಲ್ಲಿ 6,000 ರನ್ ಪೂರೈಸಿದ ಮೊದಲ ಮಹಿಳಾ ಕ್ರಿಕೆಟರ್ ಆಗಿದ್ದಾರೆ. ಇವರಿಗೆ 2003 ರಲ್ಲಿ ಅರ್ಜನ ಅವಾರ್ಡ್ ಹಾಗೂ 2015 ರಲ್ಲಿ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದೆ.

MITHALI RAJ 4

ಹರ್ಮನ್‍ಪ್ರೀತ್ ಕೌರ್ ನಾಯಕತ್ವದಲ್ಲಿ ಭಾರತದ ಮಹಿಳಾ ತಂಡ 2020ರ ಟಿ-20 ಮಹಿಳಾ ವಿಶ್ವಕಪ್‍ನಲ್ಲಿ ಮೊದಲ ಬಾರಿಗೆ ಫೈನಲ್ ತಲುಪಿದೆ. ಲೀಗ್ ಹಂತದಲ್ಲಿ ಉತ್ತಮವಾಗಿ ಆಡಿದ ಟೀಂ ಇಂಡಿಯಾ ಆಡಿದ ನಾಲ್ಕು ಪಂದ್ಯಗಳಲ್ಲಿ ಎಲ್ಲಾ ಪಂದ್ಯಗಳಲ್ಲೂ ಗೆಲವು ಸಾಧಿಸಿ 8 ಅಂಕಗಳೊಂದಿಗೆ ‘ಎ’ ಗುಂಪಿನಲ್ಲಿ ಮೊದಲ ಸ್ಥಾನದಲ್ಲಿ ಇತ್ತು. ಕಳೆದ ಗುರುವಾರ ನಡೆಯಬೇಕಿದ್ದ ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ ಪಂದ್ಯ ಮಳೆಗೆ ರದ್ದಾದ ಕಾರಣ ಎ ಗುಂಪಿನಲ್ಲಿ ಮೊದಲ ಸ್ಥಾನದಲ್ಲಿದ್ದ ಭಾರತ ನೇರವಾಗಿ ಫೈನಲ್ ತಲುಪಿದೆ.

MITHALI RAJ 3

2009ರಿಂದ ಐಸಿಸಿ ಮಹಿಳಾ ಟಿ-20 ಟೂರ್ನಿ ನಡೆಸುತ್ತಿದೆ. ಇಲ್ಲಿಯವರೆಗೂ ನಡೆದಿರುವ 7 ಟೂರ್ನಿಗಳಲ್ಲಿ ಭಾರತ ಒಂದು ಬಾರಿಯೂ ಫೈನಲ್ ಗೆ ಹೋಗಿರಲಿಲ್ಲ. ಕಳೆದ ಬಾರಿ ಸೆಮಿಫೈನಲ್‍ನಲ್ಲಿ ಎಡವಿದ್ದ ಭಾರತ, ಈ ಬಾರಿ ಶೆಫಾಲಿ ವರ್ಮಾ ಬ್ಯಾಟಿಂಗ್ ಬಲ ಮತ್ತು ಭಾರತ ಮಹಿಳಾ ಸ್ಪಿನ್ನರ್ ಗಳ ಬಿಗು ಬೌಲಿಂಗ್ ನೆರವಿನಿಂದ ಫೈನಲ್ ತಲುಪಿದೆ. ಮೊದಲ ಬಾರಿಗೆ ಫೈನಲ್ ತಲುಪಿರುವ ಭಾರತಕ್ಕೆ ಶುಭಾಶಯದ ಮಹಾಪೂರವೇ ಹರಿದು ಬರುತ್ತಿದೆ.

Womens T20

ಗುರುವಾರ ಫೈನಲ್‍ಗೆ ಆಯ್ಕೆಯಾದ ಭಾರತ ತಂಡ ಮಾರ್ಚ್ 8 ರಂದು ಭಾನುವಾರ ನಡೆಯಲಿರುವ ಫೈನಲ್‍ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಹೀಗಾಗಿ ಭಾರತದ ಪುರುಷ ತಂಡದ ನಾಯಕ ಕೊಹ್ಲಿ, ಕೆಲ್ ರಾಹುಲ್, ಶಿಖರ್ ಧವನ್, ಮಾಜಿ ಆಟಗಾರದ ಸಚಿನ್, ವಿವಿಎಸ್ ಲಕ್ಷ್ಮಣ್ ಎಲ್ಲರೂ ಟ್ವೀಟ್ ಮಾಡುವ ಮೂಲಕ ಶುಭಕೋರಿದ್ದರು. ಈಗ ಮಿಥಾಲಿ ರಾಜ್ ಅವರು ಸೀರೆ ಉಟ್ಟು ಬ್ಯಾಟ್ ಮಾಡುವ ಮೂಲಕ ಭಾರತದ ವನಿತೆಯರಿಗೆ ಕಪ್ ತೆಗೆದುಕೊಂಡು ಬನ್ನಿ ಎಂದು ಸಂದೇಶ ಕಳುಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *