ಕ್ಯಾನ್‌ಬೆರಾ: ಆಸ್ಟ್ರೇಲಿಯಾ ತಂಡದ ವೇಗಿ ಮಿಚೆಲ್ ಸ್ಟಾರ್ಕ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ದಿಢೀರ್ ವಿದಾಯ ಹೇಳಿದ್ದಾರೆ.
ಟೆಸ್ಟ್, ಏಕದಿನ ವಿಶ್ವಕಪ್ ಮೇಲೆ ಗಮನ ಹರಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ. 2027 ರ ಪುರುಷರ ಏಕದಿನ ವಿಶ್ವಕಪ್‌ಗಾಗಿ ತಮ್ಮ ಉತ್ತಮ ಸ್ಥಿತಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಬೇಕಾಗಿದೆ ಎಂದು ಸ್ಟಾರ್ಕ್ ತಿಳಿಸಿದ್ದಾರೆ.
ಯುಎಸ್ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆದ ಕಳೆದ ಟಿ-20 ವಿಶ್ವಕಪ್ ನಂತರ ಈ ಸ್ವರೂಪದಲ್ಲಿ ಸ್ಟಾರ್ಕ್ ಕಾಣಿಸಿಕೊಂಡಿಲ್ಲ. ಭಾರತ ಮತ್ತು ಶ್ರೀಲಂಕಾದಲ್ಲಿ ಮುಂದಿನ ಆವೃತ್ತಿಯ ಪಂದ್ಯಾವಳಿಗೆ ಕೇವಲ ಆರು ತಿಂಗಳ ಮೊದಲು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಆಸ್ಟ್ರೇಲಿಯಾದ ಪರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಆಗಿದ್ದಾರೆ. ಆಡಮ್ ಜಂಪಾ ಮೊದಲ ಸ್ಥಾನದಲ್ಲಿದ್ದಾರೆ. 2012 ರಲ್ಲಿ ಪಾಕಿಸ್ತಾನ ವಿರುದ್ಧ ತಮ್ಮ ಮೊದಲ ಪಂದ್ಯ ಆಡಿದರು. 65 ಪಂದ್ಯಗಳ ವೃತ್ತಿಜೀವನದಲ್ಲಿ ಅವರು 7.74 ರ ಎಕಾನಮಿ ದರದಲ್ಲಿ 79 ವಿಕೆಟ್‌ಗಳನ್ನು ಕಿತ್ತಿದ್ದಾರೆ. ಆರು ಟಿ20 ವಿಶ್ವಕಪ್‌ಗಳ ಪೈಕಿ ಐದರಲ್ಲಿ ಆಡಿದ್ದಾರೆ. ಗಾಯದಿಂದಾಗಿ 2016 ರ ಆವೃತ್ತಿಯನ್ನು ಮಾತ್ರ ಕಳೆದುಕೊಂಡಿದ್ದರು. 2021 ರಲ್ಲಿ ದುಬೈನಲ್ಲಿ ಆಸ್ಟ್ರೇಲಿಯಾ ಪ್ರಶಸ್ತಿ ಗೆಲ್ಲುವಲ್ಲಿ ಸ್ಟಾರ್ಕ್ ಪ್ರಮುಖ ಪಾತ್ರ ವಹಿಸಿದ್ದರು.
ಟೆಸ್ಟ್ ಕ್ರಿಕೆಟ್ ನನ್ನ ಅತ್ಯುನ್ನತ ಆದ್ಯತೆಯಾಗಿದೆ. ನಾನು ಆಸ್ಟ್ರೇಲಿಯಾ ಪರ ಆಡಿದ ಪ್ರತಿಯೊಂದು ಟಿ20 ಪಂದ್ಯದ ಪ್ರತಿ ನಿಮಿಷವನ್ನೂ ಪ್ರೀತಿಸುತ್ತೇನೆ. 2021 ರ ವಿಶ್ವಕಪ್ ಅನ್ನು ಮರೆಯಲು ಸಾಧ್ಯವಿಲ್ಲ. ನಾವು ಗೆದ್ದಿದ್ದಕ್ಕಾಗಿ ಮಾತ್ರವಲ್ಲ, ಅದೊಂದು ಅದ್ಭುತ ತಂಡ. ಟೂರ್ನಿ ಹಾದಿಯುದ್ದಕ್ಕೂ ಮೋಜಿನಿಂದ ಕೂಡಿತ್ತು ಎಂದು ನೆನಪಿಸಿಕೊಂಡಿದ್ದಾರೆ.