ಮಾಸ್ಟರ್ ಆನಂದ್ (Master Anand) ಪುತ್ರಿ, ಬಾಲನಟಿ ವಂಶಿಕಾ (Vamshika) ಹೆಸರು ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಅಚ್ಚರಿಯ ಬೆಳವಣಿಗೆಗಳು ನಡೆಯುತ್ತಿವೆ. ವಂಚನೆಯ (Fraud) ಆರೋಪಿ ನಿಶಾ ನರಸಪ್ಪ (Nisha Narsappa) 14 ದಿನಗಳ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಈ ಕಡೆ ಅವರ ಮೇಲೆ ದೂರುಗಳ ಮೇಲೆ ದೂರು (Complaint)ಬರುತ್ತಿವೆ. ಇಂದು ಬೆಳಗ್ಗೆ 10 ಗಂಟೆಯ ನಂತರ 20ಕ್ಕೂ ಹೆಚ್ಚು ಕುಟುಂಬಗಳು ನಿಶಾ ವಿರುದ್ಧ ದೂರು ದಾಖಲಿಸುತ್ತಿವೆ.
ಸದಾಶಿವನಗರ ಪೊಲೀಸ್ ಅಧಿಕಾರಿಗಳು ಸೂಚಿಸಿದಂತೆ ವಂಚನೆಗೆ ಒಳಗಾದ ಕುಟುಂಬಗಳು ತಾವು ವಾಸಿಸುವ ಮನೆಯ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಿದ್ದಾರೆ ಎಂದು ತಿಳಿದು ಬಂದಿದೆ. ಮಕ್ಕಳಿಗೆ ಫೋಟೊ ಶೂಟ್, ಆಲ್ಬಂ ಶೂಟ್, ಅವಕಾಶ ಕೊಡುವ ನೆಪದಲ್ಲಿ ಹಲವರಿಗೆ ನಿಶಾ ವಂಚನೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಅನೇಕರು ನಿಶಾ ವಿರುದ್ಧ ದೂರು ನೀಡಲು ಸಜ್ಜಾಗಿದ್ದಾರೆ. ಇದನ್ನೂ ಓದಿ:ರಿಷಬ್ ನಿರ್ಮಾಣದ ‘ಶಿವಮ್ಮ’ನಿಗೆ ಮತ್ತೆ ಅಂತಾರಾಷ್ಟ್ರೀಯ ಪ್ರಶಸ್ತಿ
ಕಳೆದ ತಿಂಗಳು ದಾಖಲಾದ ದೂರುಗಳ ಬೆನ್ನಲ್ಲೇ ಇದೀಗ ಸಾಕಷ್ಟು ಮಂದಿಯಿಂದ ದೂರುಗಳು ದಾಖಲೆಯಾಗುತ್ತಿವೆ. ಈ ಹಿಂದೆ ತಾರಾ ಎಂಬುವರಿಗೆ ನಿಶಾ ಇಪ್ಪತ್ತು ಲಕ್ಷ ರೂಪಾಯಿ ವಂಚನೆ ಮಾಡಿದ್ದರು ಎನ್ನುವ ಆರೋಪ ಕೂಡ ಇದೆ. ಈವೆಂಟ್ ಮ್ಯಾನೇಜ್ಮೆಂಟ್ ಹೆಸರಲ್ಲಿ ನಿಶಾ ಲಕ್ಷಾಂತರ ರೂಪಾಯಿ ಹಣ ವಂಚನೆ ಮಾಡಿದ್ದಾರಂತೆ. ಈ ಬಗ್ಗೆ ಕಳೆದ ತಿಂಗಳು ಯಲಹಂಕ ನ್ಯೂ ಟೌನ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಲ್ಲದೇ, ಕೋಣನಕುಂಟೆ ಹಾಗೂ ಜ್ಞಾನಭಾರತಿ ಠಾಣೆಯಲ್ಲಿ ನಿಶಾ ವಿರುದ್ದ ವಂಚನೆ ದೂರುಗಳು ದಾಖಲಾಗಿವೆ. ಸದಾಶಿವನಗರ ಠಾಣೆಯಲ್ಲಿ ದಾಖಲಾದ ಕೇಸ್ ನಲ್ಲಿ ಬರೋಬ್ಬರಿ 35 ಲಕ್ಷ ವಂಚನೆ ಮಾಡಿರೋದು ಬೆಳಕಿಗೆ ಬಂದಿದೆ. ಸಾಲದ ರೂಪದಲ್ಲಿ ಹಾಗೂ ಇನ್ವೆಸ್ಟ್ ಮಾಡಿದ್ರೆ ಲಾಭಾಂಶ ನೀಡುವುದಾಗಿ ನಿಶಾ ವಂಚನೆ ಮಾಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
ಮೊದ ಮೊದಲು ಲಾಭಾಂಶದ ಹಣ ಕೊಟ್ಟು ಎರಡರಷ್ಟು ಹಣ ಪಡೆದು ವಂಚನೆ ಮಾಡಿದ್ದಾರಂತೆ ನಿಶಾ. ಬೆಂಗಳೂರು ದೊಡ್ಡ ಮಾಲ್‌ಗಳಲ್ಲಿ ಈವೆಂಟ್ ಮ್ಯಾನೇಜ್ಮೆಂಟ್ ಮಾಡ್ತಿದ್ದ ರಾಮನಗರ ಮೂಲದ ನಿಶಾ, ಬೆಂಗಳೂರು ಹೊರಹೊಲಯದಲ್ಲಿನ ರೆಸಾರ್ಟ್ ಗಳಲ್ಲಿ ಶೂಟಿಂಗ್ ಮಾಡುವ ಮೂಲಕ ಪೋಷಕರಿಗೆ ಮಕ್ಮಲ್ ಟೋಪಿ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಸದಾಶಿವನಗರ ಠಾಣೆಗೆ ಬರುತ್ತಿರುವ ದೂರುಗಳನ್ನು ತಮ್ಮ ಮನೆ ವ್ಯಾಪ್ತಿಯ ಠಾಣೆಯಲ್ಲಿ ನೀಡಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ.
Web Stories