ರಾಯಚೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪಥಸಂಚಲನದಲ್ಲಿ ಗಣವೇಷಧಾರಿಯಾಗಿ ಭಾಗವಹಿಸಿ ಅಮಾನತುಗೊಂಡಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿ(PDO) ಪ್ರವೀಣ್ ಕುಮಾರ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಲಿಂಗಸುಗೂರು ತಾಲ್ಲೂಕಿನ ರೋಡಲಬಂಡಾ ಗ್ರಾಮದಲ್ಲಿ ಪಿಡಿಒ ಆಗಿ ಕೆಲಸ ಮಾಡುತ್ತಿರುವ ಪ್ರವೀಣ್ ಮೇಲೆ ಕರ್ತವ್ಯ ಲೋಪ, ಹಣ ದುರ್ಬಳಕೆಯ ಆರೋಪ ಕೇಳಿಬಂದಿದೆ.
ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ್ ಆಪ್ತ ಸಹಾಯಕನಾದ ನಂತರ ಪ್ರವೀಣ್ ಅವರನ್ನು 2023ರ ಜೂನ್ 15 ರಂದು ಪಿಡಿಓ ಕರ್ತವ್ಯದಿಂದ ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿದ್ದರು.
ಈ ಆದೇಶದ ಅನ್ವಯ ಜೂನ್ 30 ರಂದು ಗ್ರಾಪಂಗಳ ಕಾರ್ಯಭಾರ ಹಸ್ತಾಂತರವಾಗಿತ್ತು. ಈ ಮಧ್ಯೆ ಜೂನ್ 25 ರಿಂದ 30 ರ ವರೆಗೆ ಎರಡು ಪಂಚಾಯತಿಯಿಂದ 14. 38 ಲಕ್ಷ ರೂ. ಅನುದಾನ ಖರ್ಚು ಮಾಡಿದ್ದಾರೆ. ಗಣದಿನ್ನಿ ಪಂಚಾಯತಿಯಲ್ಲಿ 5.18 ಲಕ್ಷ ರೂ., ಹಿರೇಹಣಗಿ ಪಂಚಾಯತ್‌ನಲ್ಲಿ 9.20 ಲಕ್ಷ ರೂ. ಖರ್ಚು ಮಾಡಿದ್ದಾರೆ. ಇದನ್ನೂ ಓದಿ: RSS ಪಥಸಂಚಲನದಲ್ಲಿ ಭಾಗವಹಿಸಿದ್ದಕ್ಕೆ PDO ಅಮಾನತು – ಸರ್ಕಾರದ ಕ್ರಮ ಖಂಡಿಸಿ ಆದೇಶ ಹಿಂಪಡೆಯುವಂತೆ ಬಿಜೆಪಿ ಶಾಸಕ ಒತ್ತಾಯ
15 ನೇ ಹಣಕಾಸು ಯೋಜನೆಯ ಅನುದಾನದ ಅಡಿ ಬೀದಿ ದೀಪ, ಸ್ಯಾನಿಟರಿ ಸಾಮಗ್ರಿ, ಪಂಪ್ ಸೇರಿ ಹಲವು ಸಾಮಗ್ರಿಗಳ ಖರೀದಿ ಮಾಡಿದ್ದಾರೆ. ಬೇರೆ ಕಡೆ ನಿಯೋಜನೆಯಾಗಿದ್ದರೂ ಪಿಡಿಓ ಸ್ಥಾನದಲ್ಲಿ ಉಳಿದು ಅನುದಾನದ ಹಣವನ್ನು ದುರ್ಬಳಕೆ ಮಾಡಿದ್ದಾರೆ ಎಂಬ ಆರೋಪ ಪ್ರವೀಣ್ ಮೇಲೆ ಬಂದಿದೆ. ಈ ಸಂಬಂಧ ಸಿರವಾರ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಯಿಂದ ಜಿಲ್ಲಾ ಪಂಚಾಯತ್ ಸಿಇಓಗೆ ವರದಿ ಸಲ್ಲಿಕೆಯಾಗಿದ್ದು ಪರಿಶೀಲನೆ ಹಂತದಲ್ಲಿದೆ.
ಅಕ್ಟೋಬರ್12 ರಂದು ಲಿಂಗಸುಗೂರು ಪಟ್ಟಣದಲ್ಲಿ ಆರ್‌ಎಸ್‌ಎಸ್ ಶತಮಾನೋತ್ಸವದ ಹಿನ್ನೆಲೆಯಲ್ಲಿ ಪಂಥಸಂಚಲನ ಕಾರ್ಯಕ್ರಮ ನಡೆದಿತ್ತು. ಈ ಪಥಸಂಚಲನದಲ್ಲಿ ಕೈಯಲ್ಲಿ ದೊಣ್ಣೆ ಹಿಡಿದುಕೊಂಡು ಗಣವೇಷ ಧರಿಸಿ ಪ್ರವೀಣ್ ಭಾಗವಹಿಸಿದ್ದರು.
ಕರ್ನಾಟಕ ಸಿವಿಲ್ ಸೇವಾ ನಿಯಮಗಳ ಉಲ್ಲಂಘನೆ ಹಾಗೂ ಸರ್ಕಾರಿ ನೌಕರನ ತರವಲ್ಲದ ರೀತಿ ನಡೆದುಕೊಂಡಿದ್ದಾರೆ ಎಂದು ಹೇಳಿ ಪ್ರವೀಣ್ ಕುಮಾರ್ ಅವರನ್ನು ಪಂಚಾಯತ್ ರಾಜ್ ಇಲಾಖೆ ಆಯುಕ್ತೆ ಡಾ.ಅರುಂಧತಿ ಅವರು ಇಲಾಖಾ ತನಿಖೆ ಕಾಯ್ದಿರಿಸಿ ಅಮಾನತು ಮಾಡಿದ್ದಾರೆ.

