ಗದಗ: ಕಾಣೆಯಾಗಿದ್ದ ಮಹಿಳೆ ಮೂರು ದಿನಗಳ ಕಾಲ 60 ಅಡಿ ಆಳದ ಬಾವಿಯಲ್ಲಿದ್ದು, ಬದುಕಿ ಬಂದಿರುವ ರೋಚಕ ಘಟನೆ ಜಿಲ್ಲೆಯ ಗಜೇಂದ್ರಗಡ (Gajendragad) ತಾಲೂಕಿನ ತೋಟಗಂಟಿ ಗ್ರಾಮದಲ್ಲಿ ನಡೆದಿದೆ.
ಮಹಿಳೆಯನ್ನು ತೋಡಗಂಟಿ ಗ್ರಾಮದ ನಿವಾಸಿ ಪಾರ್ವತಿ ವೀರಯ್ಯ ಕಲ್ಮಠ ಎಂದು ಗುರುತಿಸಲಾಗಿದೆ. ಗ್ರಾಮದಿಂದ ಸುಮಾರು ಒಂದೂವರೆ ಕಿ.ಮೀ. ದೂರದ ಜಮೀನಿನಲ್ಲಿರುವ ಬಾವಿಯಲ್ಲಿ ಮಹಿಳೆ ಬಿದ್ದಿದ್ದಾಳೆ.ಇದನ್ನೂ ಓದಿ: ಹಿರಿಯ ರಾಜಕಾರಣಿ, ಮಾಜಿ ಸಚಿವ ಕೆ.ಹೆಚ್.ಶ್ರೀನಿವಾಸ್ ನಿಧನ
ಬೆಳಿಗ್ಗೆ 5 ಗಂಟೆಗೆ ಎದ್ದು ಮನೆಯಿಂದ ಹೊರಗೆ ಬಂದಿದ್ದಾಳೆ. ಆಗ ಅಪರಿಚಿತ ಮಹಿಳೆಯೊಬ್ಬಳು ಭೇಟಿಯಾಗಿ ನೀನು ನನಗೆ ಬೇಕು. ನಿನ್ನ ಮಾಂಗಲ್ಯ ಸರ, ಕೈಬಳೆ, ಕಾಲುಂಗುರ ನನಗೆ ಬೇಕು ಕೊಡು ಎಂದು ಒತ್ತಾಯಿಸಿದ್ದಾಳೆ. ಆಗ ಪಾರ್ವತಿ ಕೊಡಲು ನಿರಾಕರಿಸಿದ್ದಾಳೆ. ಬಲವಂತವಾಗಿ ಕಣ್ಣುಮುಚ್ಚಿ, ಕುತ್ತಿಗೆಗೆ ಕೈಹಿಡಿದೆಳೆದು ಅದೇ ಜಮೀನಲ್ಲಿರುವ ಬಾವಿಗೆ ದೂಡಿದ್ದಾಳೆ.
ಅಲ್ಲಿಂದ ಮುಂದೆ ಏನಾಯ್ತು ಎನ್ನುವುದು ಗೊತ್ತಾಗಲಿಲ್ಲ. ಬಾವಿಗೆ ಬಿದ್ದ 2ನೇ ದಿನಕ್ಕೆ ಮಳೆ ಬಂದಿದ್ದರಿಂದ ಪ್ರಜ್ಞೆ ಬಂದಿದೆ. ಎಚ್ಚರಗೊಂಡ ನಂತರ ನರಳಾಟ, ಕೂಗಾಟ ಮಾಡಿದರೂ ಯಾರಿಗೂ ಕೇಳಲಿಲ್ಲ. 3ನೇ ದಿನ ಜಮೀನಿನ ಕೆಲಸಕ್ಕೆ ಬಂದವರು ಕಿರುಚಾಟದ ಧ್ವನಿ ಕೇಳಿಸಿಕೊಂಡು ಬಾವಿ ಬಳಿ ಬಂದಿದ್ದಾರೆ.
ಆಕೆಯ ಮಾಂಗಲ್ಯ ಸರ, ಕೈಬಳೆ, ಎಡಗಾಲಿನ ಒಂದು ಕಾಲುಂಗುರ ಇಲ್ಲದಿರುವುದು ಆಕೆಯ ಗಮನಕ್ಕೆ ಬಂದಾಗ ಅದು ಎಲ್ಲಿದೆ ಎನ್ನುವುದು ಗೊತ್ತಿಲ್ಲ ಎಂದು ಸಂತ್ರಸ್ತ ಮಹಿಳೆ ನಡೆದ ವಿಚಾರವನ್ನು ತಿಳಿಸಿದ್ದಾಳೆ. ನಂತರ ಸ್ಥಳೀಯರು ಹಾಗೂ ಪೊಲೀಸರ ಸಹಾಯದಿಂದ ಬಾವಿಗೆ ಬಿದ್ದಿದ್ದ ಮಹಿಳೆಯನ್ನು ರಕ್ಷಿಸಿದ್ದಾರೆ. ಮೂರು ದಿನ ಉಪವಾಸವಿದ್ದ ಮಹಿಳೆಗೆ ಉಪಹಾರ ನೀಡಿ ರಕ್ಷಣೆ ಮಾಡಿದ್ದಾರೆ. ರಕ್ಷಣೆ ಮಾಡಿದ ಬಳಿಕ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಇದನ್ನೂ ಓದಿ: ಸೆಪ್ಟೆಂಬರ್ 3 ಬಳಿಕ ವಿಸ್ತಾರ ಫ್ಲೈಟ್ ಬುಕ್ಕಿಂಗ್ ಇಲ್ಲ
ಮಹಿಳೆ ಕಾಣೆಯಾಗಿರುವ ಬಗ್ಗೆ ಗದಗ (Gadag) ಜಿಲ್ಲೆಯ ನರೇಗಲ್ (Naregal) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಸುಮಾರು 60 ಅಡಿ ಆಳದ ಬಾವಿ ಇದಾಗಿದ್ದು, ನೀರಿಲ್ಲದ್ದಕ್ಕೆ ಮಹಿಳೆ ಬದುಕಿದ್ದಾಳೆ.