ಉಡುಪಿ: ಆ ಏಳು ಜನ ಜೀವವನ್ನು ಪಣಕ್ಕಿಟ್ಟು ಅರಬ್ಬೀ ಸಮುದ್ರಕ್ಕಿಳಿದ ಕಡಲ ಮಕ್ಕಳು. ಬೋಟು ಹತ್ತುವಾಗ ಹಾಕಿದ ಲೆಕ್ಕಾಚಾರದ ಪ್ರಕಾರ ಅವರು 10 ದಿನದಲ್ಲಿ ಮತ್ತೆ ದಡಕ್ಕೆ ಬರಬೇಕಿತ್ತು. ಅದೇನಾಯ್ತೋ ಏನೋ ಕಸುಬಿಗೆ ತೆರಳಿದ ಎರಡೇ ದಿನಕ್ಕೆ ಏಳು ಜೀವಗಳು, ಕೋಟಿ ವೆಚ್ಚದ ಬೋಟ್ ಕುರುಹೇ ಇಲ್ಲದೆ ಕಣ್ಮರೆಯಾಗಿದೆ. ಇದೊಂಥರಾ ಮಿಸ್ಸಿಂಗ್ ಸೆವೆನ್ ಮಿಸ್ಟರಿಯಾಗಿ ಎಲ್ಲರ ನಿದ್ದೆಗೆಡಿಸಿದೆ.
ಪ್ರಾಣವನ್ನೇ ಪಣವಾಗಿಟ್ಟು ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆ ಮಾಡುವ ಕಡಲಮಕ್ಕಳು ಬೆಚ್ಚಿ ಬಿದ್ದಿದ್ದಾರೆ. ಡಿಸೆಂಬರ್ 17ರಂದು ಆಳಸಮುದ್ರ ಮೀನುಗಾರಿಕೆಗೆಂದು ತೆರಳಿದ್ದ 7 ಮೀನುಗಾರರು ಕಳೆದ 17 ದಿನಗಳಿಂದ ಕಣ್ಮರೆ ಆಗಿರುವುದು ಆತಂಕಕ್ಕೆ ಕಾರಣವಾಗಿದೆ. ಡಿಸೆಂಬರ್ 13ರ ರಾತ್ರಿ ಉಡುಪಿಯ ಮಲ್ಪೆಯಿಂದ `ಸುವರ್ಣ ತ್ರಿಭುಜ’ ಎಂಬ ಹೆಸರಿನ ಮೀನುಗಾರಿಕಾ ಬೋಟ್ ಗೋವಾ – ಮಹಾರಾಷ್ಟ್ರ ಗಡಿ ಕಡೆ ಕಸುಬು ಮಾಡಲು ತೆರಳಿತ್ತು. ಡಿಸೆಂಬರ್ 15ರ ಮಧ್ಯರಾತ್ರಿ 1 ಗಂಟೆ ನಂತರ ಬೋಟ್ ನ ಜಿಪಿಎಸ್ ಮತ್ತು ಫೋನ್ ಸಂಪರ್ಕ ಕಡಿತವಾಗಿದೆ. ಸಮುದ್ರದಲ್ಲಿ ಎಲ್ಲಿ ಹುಡುಕಾಟ ನಡೆಸಿದ್ರೂ ಬೋಟ್, ಮೀನುಗಾರರು ಪತ್ತೆಯಾಗಿಲ್ಲ. ಕೋಸ್ಟ್ ಗಾರ್ಡ್ ನೌಕಾದಳ, ಏರ್ ಫೋರ್ಸ್ ಅಧಿಕಾರಿಗಳು ಹುಡುಕಾಟ ಮಾಡಿದ್ರೂ ಉಪಯೋಗವಾಗಿಲ್ಲ. ಜನಪ್ರತಿನಿಧಿಗಳು- ರಾಜ್ಯ ಸರ್ಕಾರ- ಕೇಂದ್ರ ಸರ್ಕಾರ ಸಂಪರ್ಕ ಮಾಡಿದರೂ ಏನೂ ರಿಸಲ್ಟ್ ಇಲ್ಲ. ಸ್ವತಃ ಮೀನುಗಾರರೇ ಕರಾವಳಿ ಕಾವಲು ಪಡೆಯ ಸ್ಪೀಡ್ ಬೋಟ್ ಹತ್ತಿ ಮಹಾರಾಷ್ಟ್ರ, ಗೋವಾದ ಗಡಿಯಲ್ಲಿ, ರಾಜ್ಯದೊಳಗೆ ನದಿ- ಹಿನ್ನೀರು ಪ್ರದೇಶದಲ್ಲಿ ಹುಡುಕಾಟ ಮಾಡಿದ್ರೂ ಕಣ್ಮರೆಯಾದವರ ಸುಳಿವಿಲ್ಲ. ಅಷ್ಟು ದೊಡ್ಡ ಬೋಟ್ ಎಲ್ಲೂ ಕಾಣಿಸುತ್ತಿಲ್ಲ. ಸಮುದ್ರದಲ್ಲಿ ಮುಳುಗಿರಲು ಸಾಧ್ಯವೇ ಇಲ್ಲದ ಬೋಟ್ ಎಲ್ಲಿ ಹೋಯ್ತು ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ.
Advertisement
Advertisement
ಮೀನುಗಾರರ ಮುಖಂಡ ಗುಂಡು ಅಮೀನ್ ಮಾತನಾಡಿ, ಕರಾವಳಿ ಜಿಲ್ಲೆಗಳ ಇತಿಹಾಸದಲ್ಲೇ ಇಂತಹ ಘಟನೆ ನಡೆದಿರುವುದು ಇದೇ ಮೊದಲು. ಕಡಲ್ಗಳ್ಳರು, ಮಹಾರಾಷ್ಟ್ರ ಗೋವಾದ ಮೀನುಗಾರರು ಬೋಟ್ ಅಪಹರಿಸಿ ಅದರ ಬಣ್ಣ ಬದಲಿಸಿ, ನಮ್ಮವರನ್ನು ಕೂಡಿಹಾಕಿ ಚಿತ್ರಹಿಂಸೆ ಕೊಡುತ್ತಿರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
Advertisement
ಮಹಾರಾಷ್ಟ್ರದ ದೇವಘಡ, ಗೋವಾ – ಮಹಾರಾಷ್ಟ್ರ ಗಡಿಯ ಮಾಲ್ವಾನ್ ಎಂಬಲ್ಲಿ ಕಡಲ್ಗಳ್ಳರ ಹಾವಳಿ ಸಿಕ್ಕಾಪಟ್ಟೆ ಜಾಸ್ತಿ. ಉತ್ತರದ ಕಡೆ ಮೀನುಗಾರಿಕೆಗೆ ತೆರಳುವಾಗ ಗುಂಪಿನ ಕೊನೆಯಲ್ಲಿದ್ದ ಬೋಟ್ ಕಣ್ಮರೆಯಾಗಿದೆ. ಒಂಟಿಯಾದ ಬೋಟ್ ಮೇಲೆ ಆಗಂತುಕರು ದಾಳಿ ಮಾಡಿ ಕಿಡ್ನಾಪ್ ಮಾಡಿದ್ರಾ ಎಂಬ ಸಂಶಯ ದಟ್ಟವಾಗಿದೆ. ಕೇವಲ ಏಳು ಕುಟುಂಬಗಳು ಮಾತ್ರ ತಲೆಕೆಡಿಸಿಕೊಂಡಿಲ್ಲ. ಮೂರು ಜಿಲ್ಲೆಯ ಲಕ್ಷಾಂತರ ಮೀನುಗಾರರ ಜೊತೆ ತಮಿಳುನಾಡು, ಕೇರಳದ ಮೀನುಗಾರರಿಗೂ ಈ ಘಟನೆ ದಂಗುಬಡಿಸಿದೆ. ಪಾಕಿಸ್ತಾನ ಗಡಿಯಾಚೆ ಬೋಟ್ ಅಪಹರಣವಾಯ್ತಾ ಎಂಬ ಭಯವೂ ಕಡಲಮಕ್ಕಳನ್ನು ಕಾಡುತ್ತಿದೆ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
ಕೋಸ್ಟ್ ಗಾರ್ಡ್, ಪೊಲೀಸರೂ ಕೇಸು ದಾಖಲಿಸಿಕೊಂಡು ಹುಡುಕಾಟ ನಡೆಸಿದರೂ 7 ಮಂದಿ ಮೀನುಗಾರರು – ಎರಡು ಕೋಟಿ ರೂಪಾಯಿಯ ದೊಡ್ಡ ಬೋಟ್, ದಿನಸಿ, ಡೀಸೆಲ್- ಬಲೆ- ಕಂಟೈನರ್ ಬಗ್ಗೆಯೂ ಸುಳಿವಿಲ್ಲ. ಇಷ್ಟೆಲ್ಲ ಆದರೂ ಸರ್ಕಾರ ಮಾತ್ರ ಯಾವ ಗೋಜಿಗೇ ಹೋಗಿಲ್ಲ.
ಮಲ್ಪೆ ಆಳಸಮುದ್ರ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಅಮೀನ್ ಮಾತನಾಡಿ, ಮೀನುಗಾರಿಕಾ ಇಲಾಖೆ- ಪೊಲೀಸ್ ಇಲಾಖೆ, ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಕರಾವಳಿ ಮೂರು ಜಿಲ್ಲೆಯ ಮೀನುಗಾರರು ಎರಡು ದಿನದ ಗಡುವು ನೀಡುತ್ತಿದ್ದೇವೆ. ಕಣ್ಮರೆಯಾದ ಏಳು ಮೀನುಗಾರರ ಸುಳಿವು ಸಿಗದೇ ಇದ್ದಲ್ಲಿ ಇಡೀ ರಾಜ್ಯದ ಬಂದರನ್ನು ಬಂದ್ ಮಾಡಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv