ಹಾಸನ: ಮದುವೆಗೆ ಬಂದಿದ್ದ ಮಹಿಳೆ (v) ನಿಗೂಢವಾಗಿ ನಾಪತ್ತೆಯಾಗಿದ್ದ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಫೆ.12 ರಂದು ರಾತ್ರಿ ಕುಣಿಗಲ್ನಿಂದ (Kunigal) ಚಿಕ್ಕಮಗಳೂರಿಗೆ (Chikkamagaluru) ಬಂದಿದ್ದ ಬೇಲೂರು (Beluru) ತಾಲೂಕಿನ, ಮತ್ತಾವರ ಗ್ರಾಮದ ಮಹಿಳೆ ಪ್ರಿಯಾಂಕ ನಿಗೂಢ ರೀತಿಯಲ್ಲಿ ಕಣ್ಮರೆಯಾಗಿದ್ದಳು. ಕಲ್ಕೆರೆ ಗ್ರಾಮದ ಬಳಿ ಆಕೆಯ ಒಳುಉಡುಪು, ವ್ಯಾನಿಟಿ ಬ್ಯಾಗ್, ವೇಲ್, ಟಾಪ್ ಪತ್ತೆಯಾಗಿದ್ದವು. ಇದನ್ನು ಕಂಡ ಆಕೆಯ ಕುಟುಂಬಸ್ಥರು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ, ಚಿನ್ನಾಭರಣಕ್ಕಾಗಿ ಕೊಲೆ ಮಾಡಲಾಗಿದೆ. ಪೊಲೀಸರು ದೂರು ಸ್ವೀಕರಿಸಲಿಲ್ಲ ಎಂದು ಆರೋಪಗಳ ಸುರಿಮಳೆಗೈದಿದ್ದರು. ಪ್ರಕರಣವನ್ನು ಸವಲಾಗಿ ಸ್ವೀಕರಿಸಿದ ಎಸ್ಪಿ ಶುಭನ್ವಿತಾ ಪ್ರಕರಣದ ತನಿಖೆಗಾಗಿ ವಿಶೇಷ ತಂಡ ರಚನೆ ಮಾಡಿದ್ದರು.
ತನಿಖೆಗಿಳಿದ ಪೊಲೀಸರು ಪ್ರಿಯಾಂಕ ಕಾಲ್ ಡಿಟೇಲ್ಸ್ ಹಾಗೂ ಸಿಸಿಟಿವಿಯನ್ನು ಪರಿಶೀಲನೆ ನಡೆಸಿದ್ದ ವೇಳೆ ಹಲವು ಮಾಹಿತಿಗಳು ಸಿಕ್ಕಿದ್ದವು. ಇದನ್ನೇ ಆಧರಿಸಿ ಕುಣಿಗಲ್ಗೆ ತೆರಳಿದ ಕೆ.ಆರ್.ಪುರಂ ಪೊಲೀಸ್ ಠಾಣೆ ಪಿಎಸ್ಐ ವಿನಯ್ಕುಮಾರ್ ನೇತೃತ್ವದ ತಂಡ ಫೆ.14ರ ರಾತ್ರಿ ರಾತ್ರಿ ಪ್ರಿಯಾಂಕ ಆಕೆಯ ಪ್ರಿಯಕರ ಪಶ್ಚಿಮಬಂಗಾಳ ಮೂಲದ ಡೇವಿಡ್ ಮನೆಯಲ್ಲಿ ಆತನೊಂದಿಗೆ ಸಿಕ್ಕಿಬಿದ್ದಿದ್ದಳು. ಇಂದು ಹಾಸನದ ಡಿವೈಎಸ್ಪಿ ಗಂಗಾಧರಪ್ಪ ಅವರು ಇಬ್ಬರನ್ನು ಕಚೇರಿಗೆ ಕರೆ ತಂದು ವಿಚಾರಣೆ ನಡೆಸಿದ ವೇಳೆ ಸಿನಿಮಾ ಕಥೆಗೂ ಮೀರಿಸುವ ರೀತಿ ಪ್ರಿಯಾಂಕ ಹೆಣೆದಿದ್ದ ಕಥೆ ಹೊರಬಿದ್ದಿದೆ. ಇದನ್ನೂ ಓದಿ: ಹಾಸನ ಮಹಿಳೆ ನಾಪತ್ತೆ ಕೇಸ್ಗೆ ಟ್ವಿಸ್ಟ್ – ಕುಣಿಗಲ್ನಲ್ಲಿ ಜೀವಂತವಾಗಿ ಪತ್ತೆ
ಕಳೆದ ನಾಲ್ಕೈದು ವರ್ಷಗಳಿಂದ ಕುಣಿಗಲ್ ಬಳಿಯ ಕೆಮಿಕಲ್ ಫ್ಯಾಕ್ಟರಿಯಲ್ಲಿ ಪ್ರಿಯಾಂಕ ಹಾಗೂ ಡೇವಿಡ್ ಕೆಲಸ ಮಾಡುತ್ತಿದ್ದರು. ತನಗೆ ಮದುವೆಯಾಗಿ ಗಂಡು ಮಗುವಿದ್ದರು ಪ್ರಿಯಾಂಕ ಡೇವಿಡ್ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳು. ಆನಂತರದಲ್ಲಿ ಇಬ್ಬರ ಸಂಬಂಧ ಹೊಂದಿದ್ದರು. ಈ ಬಗ್ಗೆ ಪತಿ ಹಾಗೂ ತಮ್ಮ ಕುಟುಂಬದವರಿಗೆ ಯಾವುದೇ ಅನುಮಾನ ಬಾರದ ರೀತಿ ನಡೆದುಕೊಂಡಿದ್ದಳು. ಫೆ.12 ರಂದು ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಿಯಾಂಕ ನಾಪತ್ತೆ ಪ್ರಕರಣ ದಾಖಲಾಗಿದ್ದು, ನಂತರ ಅದನ್ನು ಅರೇಹಳ್ಳಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು.
ಫೆ.12 ರಂದು ಸಂಜೆ 6.45 ರ ಸಮಯದಲ್ಲಿ ತಾಯಿ ಜೊತೆ ಬಂದಿದ್ದ ಕೈಮರದ ಬಳಿ ಬಂದಿದ್ದ ಪ್ರಿಯಾಂಕ ಸಾರಿಗೆ ಬಸ್ ಹತ್ತಿದ್ದಳು. ನಂತರ ಬೇಲೂರು ಬಸ್ ನಿಲ್ದಾಣಕ್ಕೆ ಬಂದ ಪ್ರಿಯಾಂಕ 7:59 ರಲ್ಲಿ ತಾಯಿಗೆ ಕರೆ ಮಾಡಿ ಕುಣಿಗಲ್ ತೆರುಳುವುದಾಗಿ ಹೇಳಿ, ನಂತರ 8:07 ನಿಮಿಷಕ್ಕೆ ಚಿಕ್ಕಮ್ಮ ಸೌಮ್ಯ ಅವರಿಗೆ ಕರೆ ಮಾಡಿ ಅದೇ ರೀತಿ ಹೇಳಿದ್ದಳು. 8:12 ಕ್ಕೆ ಪ್ರಿಯಾಂಕ ಫೋನ್ ಸ್ವಿಚ್ ಆಫ್ ಆಗಿತ್ತು. ಪ್ರಿಯಾಂಕ ಕಾಲ್ ಡಿಟೇಲ್ಸ್ ಆಧರಿಸಿ ಒಂದು ಪೊಲೀಸ್ ತಂಡವನ್ನು ಕುಣಿಗಲ್ಗೆ ಕಳಿಸಿದ್ದು ಅಲ್ಲಿ ಡೇವಿಡ್ ಮನೆಯಲ್ಲಿ ಸಿಕ್ಕಿ ಬಿದ್ದಿದ್ದಳು.
ಪ್ರಿಯಾಂಕ ಗಂಡನನ್ನು ಬಿಟ್ಟು ಪ್ರಿಯಕರನ ಜೊತೆ ವಾಸ ಮಾಡಲು ನಿರ್ಧರಿಸಿದ್ದು, ಅದಕ್ಕಾಗಿ ಮೊದಲೇ ಪ್ಲ್ಯಾನ್ ಮಾಡಿ ಫೆ.12 ರಂದು ಬೇಲೂರಿಗೆ ಬರುತ್ತಿದ್ದಂತೆ ಡೇವಿಡ್ ಬೈಕ್ ಹತ್ತಿ ಕಲ್ಕೆರೆ ಬಳಿ ಬಂದು ಬಟ್ಟೆಗಳನ್ನು ಬಿಸಾಡಿ ಚಿನ್ನಾಭರಣಕ್ಕಾಗಿ ಕೊಲೆ ಮಾಡಿದ್ದಾರೆ ಎಂದು ಬಿಂಬಿಸಿದ್ದಳು. ಪ್ರಿಯಾಂಕ ಮತ್ತೊಂದು ಫೋನ್ನನ್ನು ಬಳಸುತ್ತಿದ್ದು ಈ ಯಾವುದೇ ವಿಚಾರ ಗಂಡನಿಗೆ, ಆಕೆಯ ಕುಟುಂಬಸ್ಥರರಿಗೆ ತಿಳಿದಿರಲಿಲ್ಲ. ಡೇವಿಡ್ ಪಶ್ಚಿಮಬಂಗಾಳ ಮೂಲದವನಾಗಿದ್ದು, ಕೆಲವೇ ತಿಂಗಳಲ್ಲಿ ಫ್ಯಾಕ್ಟರಿ ಪಶ್ಚಿಮ ಬಂಗಾಳಕ್ಕೆ ಶಿಫ್ಟ್ ಆಗುತ್ತಿತ್ತು. ಇಬ್ಬರು ಅಲ್ಲಿಗೆ ಹೋಗಿ ಸೆಟಲ್ ಆಗಲು ನಿರ್ಧರಿಸಿದ್ದರು. ಅದಕ್ಕಾಗಿ ಈ ರೀತಿಯ ನಾಟಕವಾಡಿರುವುದಾಗಿ ತನಿಖೆ ವೇಳೆ ಬಾಯ್ಬಿಟ್ಟಿದ್ದಾಳೆ. ಇಬ್ಬರನ್ನು ಪೊಲೀಸರು ರಕ್ಷಣೆ ಮಾಡಲಾಗಿದ್ದು, ಚಿನ್ನಾಭರಣಗಳು ಅವರ ಬಳಿಯೇ ಇದೆ ಎಂದು ಎಸ್ಪಿ ಶುಭನ್ವಿತಾ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದು ಡಿವೈಎಸ್ಪಿ ಕಚೇರಿಗೆ ಬಂದ ಪ್ರಿಯಾಂಕ ಸಹೋದರ ವಿಷಯ ಕೇಳಿ ಆಘಾತಗೊಂಡಿದ್ದಾರೆ. ನಮ್ಮ ಅಕ್ಕ ನಾಲ್ಕೈದು ವರ್ಷಗಳಿಂದ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಳು. ಅಲ್ಲಿ ಅವಳಿಗೆ ಆತನ ಪರಿಚಯವಾಗಿದೆ. ಇದೆಲ್ಲಾ ವಿಚಾರ ಅವರಿಬ್ಬರು ಪೊಲೀಸರಿಗೆ ಸಿಕ್ಕ ನಂತರ ನಮಗೂ ಗೊತ್ತಾಗಿದೆ. ನಾನು ಅವಳ ಜೊತೆ ಮಾತನಾಡುತ್ತೇನೆ. ಅವಳು ಇನ್ನೊಂದು ಫೋನ್ ಬಳಸುತ್ತಿರುವ ಬಗ್ಗೆ ನಮಗೆ ಯಾರಿಗೂ ಗೊತ್ತಿಲ್ಲ. ಆತನನ್ನು ಇಷ್ಟ ಪಡುತ್ತಿರುವುದು ಗೊತ್ತಿಲ್ಲ. ನಮ್ಮ ಬಾವ ನಮಗೆ ಮನೆ ಮಗನಿದ್ದಂತೆ. ಗಂಡ-ಹೆಂಡತಿ ಅನ್ಯೋನ್ಯವಾಗಿದ್ದರು. ಆದರೆ ಈ ರೀತಿ ಏಕೆ ಆಯ್ತು ಎನ್ನುವುದು ತಿಳಿಯುತ್ತಿಲ್ಲ. ನಮ್ಮ ಅಕ್ಕನ ಬಗ್ಗೆ ಯಾರು ಕೆಟ್ಟದಾಗಿ ಮಾತನಾಡಲ್ಲ, ಅಷ್ಟು ಒಳ್ಳೆಯವಳಾಗಿದ್ದಳು. ಇದು ನಮ್ಮ ಕುಟುಂಬದ ವೈಯುಕ್ತಿಕ ಸಮಸ್ಯೆ, ನಾವೇ ಬಗೆಹರಿಸಿಕೊಳ್ತೇವೆ. ನಮ್ಮ ಅಕ್ಕನ ಬಗ್ಗೆ ಯಾರು ಕೆಟ್ಟದಾಗಿ ಕಮೆಂಟ್ ಮಾಡಬೇಡಿ. ಎಲ್ಲಾ ಕುಟುಂಬದಲ್ಲೂ ಒಂದಲ್ಲ ಒಂದು ಸಮಸ್ಯೆಗಳು ಇರುತ್ತವೆ. ಕೈಮುಗಿದು ಕೇಳಿಕೊಳ್ಳುತ್ತೇನೆ ಯಾರು ಕೆಟ್ಟದಾಗಿ ಕಮೆಂಟ್ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ಇಡೀ ರಾಜ್ಯಾದ್ಯಂತ ಸದ್ದು ಮಾಡಿದ್ದ ಪ್ರಿಯಾಂಕ ನಾಪತ್ತೆ ಪ್ರಕರಣದ ಅಸಲಿಯತ್ತು ಅವರಿಬ್ಬರ ಬಂಧನದ ಬಳಿಕ ಹೊರಬಿದ್ದಿದೆ. ಇಡೀ ಪ್ರಕರಣ ಭೇದಿಸಿದ ಹಾಸನ ಪೊಲೀಸರ ತಂಡಕ್ಕೆ ಎಸ್ಪಿ ಶುಭನ್ವಿತಾ ಅಭಿನಂದನೆ ಸಲ್ಲಿಸ ಬಹುಮಾನ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಮದುವೆಗೆ ಬಂದಿದ್ದ ಮಹಿಳೆ ನಿಗೂಢ ನಾಪತ್ತೆ – ಚಿನ್ನಾಭರಣಕ್ಕಾಗಿ ಕೊಲೆ ಶಂಕೆ

