ಬೆಂಗಳೂರು: ಕೊಡಗಿನ ವಿರಾಜಪೇಟೆಯಿಂದ ಮನೆಬಿಟ್ಟು ತೆರಳಿದ್ದ ಬಾಲಕಿ ದೀಕ್ಷಿತಾ ಬೆಂಗಳೂರಿನ ಬಾಗಲಕುಂಟೆಯ ಪಿಜಿಯಲ್ಲಿ ಸುರಕ್ಷಿತವಾಗಿ ಪತ್ತೆಯಾಗಿದ್ದಾಳೆ.
ಎಟಿಎಂ ಮತ್ತು ಮೊಬೈಲ್ ನಂಬರ್ ಆಧಾರಿಸಿ ವಿರಾಜಪೇಟೆ ಪೊಲೀಸರು ಮತ್ತು ಮಾವ ಹರೀಶ್ ದೀಕ್ಷಿತಾಳನ್ನು ಪತ್ತೆ ಮಾಡಿದ್ದಾರೆ.
Advertisement
ಸಿಕ್ಕಿದ್ದು ಹೇಗೆ?
ಪ್ರಥಮ ಪಿಯುಸಿ ಫೇಲ್ ಆದ ಹಿನ್ನೆಲೆ ಮನೆ ಬಿಟ್ಟು ತೆರಳಿದ್ದ ಬಾಲಕಿ ಆಲ್ಟೋ ಕಾರ್‍ನಲ್ಲಿ ಮೂರು ದಿನಗಳಿಂದ ಮೈಸೂರು, ಮಂಡ್ಯ, ತುಮಕೂರು, ಶಿರಾ ಸುತ್ತಾಡಿ ಬೆಂಗಳೂರು ತಲುಪಿದ್ದಳು. ಬುಧವಾರ ಜಾಲಹಳ್ಳಿ ಕ್ರಾಸ್‍ನ ಐಸಿಐಸಿಐ ಬ್ಯಾಂಕ್‍ನ ಎಟಿಎಂನಲ್ಲಿ ಹಣವನ್ನು ದೀಕ್ಷಿತಾ ಡ್ರಾ ಮಾಡಿದ್ದಳು. ಎಟಿಎಂನಲ್ಲಿ ಹಣ ಡ್ರಾ ಮಾಡಿದ ಮೆಸೇಜ್ ಬ್ಯಾಂಕ್‍ಗೆ ಹೋಗಿತ್ತು. ಅಷ್ಟೇ ಅಲ್ಲದೇ ಬುಧವಾರ ದೀಕ್ಷಿತಾ ತಂದೆಯಾಗಿರುವ ಸುರೇಶ್ ಅವರ ಮೊಬೈಲ್‍ಗೆ ಬಾಗಲಕುಂಟೆ ವ್ಯಾಪ್ತಿಯಿಂದ ಮಿಸ್ ಕಾಲ್ ಬಂದಿತ್ತು. ಈ ಕರೆ ಬಂದ ಜಾಗದಲ್ಲಿ ಎಲ್ಲ ಜಡೆ ಹುಡುಕಾಡಿದಾಗ ಒಂದು ಕಡೆ ಕಾರು ನಿಂತುಕೊಂಡಿರುವುದು ಕಾಣಿಸಿತ್ತು. ಕಾರು ನಿಂತಿರುವುದನ್ನು ನೋಡಿದ ಹಿನ್ನೆಲೆಯಲ್ಲಿ ಸಮೀಪದ ನಿವಾಸಿಗಳಲ್ಲಿ ಸುರೇಶ್ ವಿಚಾರಿಸಿದಾಗ ಇಲ್ಲಿ ಒಬ್ಬಳು ಹುಡುಗಿ ನಿನ್ನೆ ಬಂದಿದ್ದಾಳೆ. ಮೇಲುಗಡೆ ಇರುವ ಪಿಜಿಯಲ್ಲಿ ಇದ್ದಾಳೆ ಎಂದು ತಿಳಿಸಿದ್ದಾರೆ.
Advertisement
ಇದಾದ ಬಳಿಕ ಮಾವ ಮತ್ತು ಪೊಲೀಸರು ಪಿಜಿ ಮಾಲೀಕರಿಗೆ ಮಾಧ್ಯಮಗಳಲ್ಲಿ ಬಂದ ಸುದ್ದಿಯನ್ನು ತೋರಿಸಿ ಮನವರಿಕೆ ಮಾಡಿಕೊಟ್ಟ ಬಳಿಕ ದೀಕ್ಷಿತಾ ಪತ್ತೆಯಾಗಿದ್ದಾಳೆ. ಮಾವ ಹರೀಶ್ ಅವರನ್ನು ನೋಡಿದ ದೀಕ್ಷಿತಾ ಗಾಬರಿಯಾಗಿದ್ದು ಸಮಾಧಾನ ಮಾಡಿ ಮನೆಗೆ ಕರೆದುಕೊಂಡು ಹೋಗಲು ಈಗ ಸಿದ್ಧತೆಗಳು ನಡೆದಿದೆ.
Advertisement
ಏನಿದು ಪ್ರಕರಣ?
ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲ ಗ್ರಾಮದ ಸುರೇಶ್ ಎಂಬುವವರ ಮಗಳು ದೀಕ್ಷಿತಾ(17) 4 ದಿನಗಳ ಹಿಂದೆ ನಾಪತ್ತೆಯಾಗಿದ್ದಳು. ತಂದೆ ಮಗಳನ್ನು ಹೋಟೆಲ್ ಹೋಗೋಣ ಬಾ ಎಂದು ಕರೆದಿದ್ದರು. ಆದ್ರೆ ತಂದೆಯೊಂದಿಗೆ ಹೋಗದ ದೀಕ್ಷಿತಾ, ‘ನೀನು ಬೈಕ್ ನಲ್ಲಿ ಹೋಗು ನಾನು ಮತ್ತೆ ಬರುತ್ತೇನೆ’ ಎಂದು ಹೇಳಿದ್ದಳು.
Advertisement
ಮಗಳ ಮಾತು ಕೇಳಿ ಸುರೇಶ್ ಬೈಕ್ ನಲ್ಲಿ ಹೋಟೆಲ್‍ಗೆ ತೆರಳಿದ್ದಾರೆ. ಆದರೆ ಈಕೆ ಮನೆಯಲ್ಲಿದ್ದ ತಂದೆಯ ಎಟಿಎಂ ಕಾರ್ಡ್ ತೆಗೆದುಕೊಂಡು ಕೆ.ಎ.02 ಝೆಡ್ 3394 ನೋಂದಣಿಯ ಆಲ್ಟೊ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಳು.
ಇತ್ತ ದೀಕ್ಷಿತಾ ಮನೆ ಬಿಟ್ಟು ಹೋಗಿದ್ದಾಳೆಂದು ತಿಳಿದ ಪೋಷಕರು ಹುಡುಕಾಟಕ್ಕೆ ಆರಂಭಿಸಿದ್ದರು. ಪೋಷಕರು ಗೋಣಿಕೊಪ್ಪ ಮಾರ್ಗವಾಗಿ ಸಂಬಂಧಿಕರ ಮನೆಯಲ್ಲಿ ಹುಡುಕಾಡಿದ್ದಾರೆ. ಆದರೆ ದೀಕ್ಷಿತಾ ಬಗ್ಗೆ ಸುಳಿವು ಸಿಕ್ಕದ ಹಿನ್ನೆಲೆಯಲ್ಲಿ ವಿರಾಜಪೇಟೆ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ದೀಕ್ಷಿತಾಳ ಪತ್ತೆ ಕಾರ್ಯ ಆರಂಭಿಸಿದ್ದರು.
ಬುಧವಾರ ಬೆಳಗ್ಗೆ ಮಂಡ್ಯ ರಾಮನಗರದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿದ್ಯಾರ್ಥಿನಿ ಕಾರ್ ಡ್ರೈವ್ ಮಾಡಿಕೊಂಡು ಹೋಗಿದ್ದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ದೃಶ್ಯ ಆಧರಿಸಿ ದೀಕ್ಷಿತಾ ಪತ್ತೆಗಾಗಿ 6 ಜಿಲ್ಲೆಯ ಪೋಲಿಸರು ಹುಡುಕಾಟ ನಡೆಸುತ್ತಿದ್ದರು.