ವಿಜಯಪುರ: ಮಕ್ಕಳ ಕಳ್ಳರ ಹಾವಳಿ ಮಧ್ಯದಲ್ಲೆ ಮನೆಯಿಂದ ನಾಪತ್ತೆಯಾಗಿದ್ದ ಬಾಲಕಿ ಬೆಳಗ್ಗೆ ಶವವಾಗಿ ಪತ್ತೆಯಾದ ಘಟನೆ ಜಿಲ್ಲೆಯ ಸಿಂಧಗಿ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ವಿದ್ಯಾ ನಗರದ ನಿವಾಸಿ 8 ವರ್ಷದ ಜ್ಯೋತಿ ಕೊರೆ ಶವವಾಗಿ ಪತ್ತೆಯಾದ ಬಾಲಕಿ. ಮಂಗಳವಾರ ಸಾಯಂಕಾಲ 6 ಗಂಟೆಗೆ ಮನೆಯಿಂದ ಆಡಲು ಹೋಗಿದ್ದ ಬಾಲಕಿ ರಾತ್ರಿಯಾದರೂ ವಾಪಸ್ ಆಗಿರಲಿಲ್ಲ. ಇದರಿಂದ ಗಾಬರಿಗೊಂಡು ಪೋಷಕರು ತಡ ರಾತ್ರಿಯವರೆಗೂ ಹುಡುಕಾಟ ನಡೆಸಿ ನಂತರ ಸಿಂದಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಬುಧವಾರ ಬೆಳಗ್ಗೆ ವಿದ್ಯಾನಗರ ಸಮೀಪದ ಇಂಡಸ್ಟ್ರಿಯಲ್ ಏರಿಯಾದಲ್ಲಿ ಬಾಲಕಿ ಜ್ಯೋತಿ ಶವ ಪತ್ತೆಯಾಗಿದೆ. ಸದ್ಯ ಸ್ಥಳದಲ್ಲಿ ಜ್ಯೋತಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸಿಂದಗಿ ಪಟ್ಟಣದಲ್ಲಿ ಉದ್ದದ ಗಡ್ಡ ಬಿಟ್ಟುಕೊಂಡ ಕೆಲ ಅಪರಚಿತ ವ್ಯಕ್ತಿಗಳು ಅನುಮಾನಾಸ್ಪದವಾಗಿ ಅಡ್ಡಾಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದು, ಮಕ್ಕಳ ಕಳ್ಳರು ಬಂದಿದ್ದಾರೆ ಅಂತ ಹಾವಳಿ ಬೆನ್ನಲ್ಲೆ ಬಾಲಕಿ ನಾಪತ್ತೆಯಾಗಿ ಏಕಾಏಕಿ ಶವವಾಗಿ ಪತ್ತೆಯಾಗಿರೋದು ಅನುಮಾನಕ್ಕೆ ಕಾರಣವಾಗಿದೆ.
ಅನುಮಾನಾಸ್ಪದ ವ್ಯಕ್ತಿಗಳು ಬಂದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರೂ ಅವರು ಅಸಡ್ಯೆ ತೋರಿದ್ದಾರೆ ಎಂದು ಉದ್ರಿಕ್ತಗೊಂಡ ಜನರು ಸಿಂಧಗಿಯಲ್ಲಿ ರಾತ್ರೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ. ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ ಅಂತ ಪೋಷಕರ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೇ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಬಸವೇಶ್ವರ ವೃತ್ತದಲ್ಲಿ ದಲಿತರ ಸಂಘಟನೆಯವರು ಟಯರ್ ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದ್ದಾರೆ.
ಇನ್ನು ಈ ಪ್ರಕರಣವನ್ನು ದಾಖಲಿಸಿಕೊಂಡಿರುವ ಸಿಂಧಗಿ ಸಿಪಿಐ ದ್ಯಾಮನ್ನವರ್ ತನಿಖೆ ಮುಂದುವರೆಸಿದ್ದಾರೆ.