ಕಾಣೆಯಾದ ಮೀನುಗಾರರು ಉತ್ತರಭಾಗದಲ್ಲಿದ್ದಾರೆ- ಬೊಬ್ಬರ್ಯ ದೈವದ ಪಾತ್ರಿ ನುಡಿ

Public TV
2 Min Read
UDUP FISH copy

ಉಡುಪಿ: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ 7 ಮಂದಿ ಬೋಟ್ ಸಮೇತ ನಾಪತ್ತೆಯಾಗಿದ್ದು, ಇವರೆಲ್ಲರೂ ಉತ್ತರ ಭಾಗದಲ್ಲಿದ್ದಾರೆ ಎಂದು ಬೊಬ್ಬರ್ಯ ದೈವ ಪಾತ್ರಿ ನುಡಿದಿದ್ದಾರೆ.

ಡಿಸೆಂಬರ್ 13 ರಿಂದ ದಾಮೋದರ್, ರಮೇಶ್, ಹರೀಶ್, ಲಕ್ಷ್ಮಣ್, ರವಿ, ಸತೀಶ್, ಚಂದ್ರಶೇಖರ್ ಎಂಬವರು ನಾಪತ್ತೆಯಾಗಿದ್ದು, ಇದುವರೆಗೂ ಪತ್ತೆಯಾಗದ ಹಿನ್ನೆಲೆಯಲ್ಲಿ ಮೀನುಗಾರರ ಕುಟುಂಬಸ್ಥರು ಬೊಬ್ಬರ್ಯ ದೈವದ ಮೊರೆ ಹೋಗಿದ್ದಾರೆ.

UDP FISH 2

ದೈವದ ನುಡಿಯೇನು..?
ಉಡುಪಿಯ ಮಲ್ಪೆ ಸಮೀಪದ ಬಡನಿಡಿಯೂರಿನಲ್ಲಿರುವ ದೈವಸ್ಥಾನದಲ್ಲಿ ದರ್ಶನ ಸೇವೆಯ ಸಂದರ್ಭದಲ್ಲಿ, ಕಣ್ಮರೆಯಾದವರು ದೇಶದ ಉತ್ತರ ಭಾಗದಲ್ಲಿದ್ದಾರೆ. ಮೀನುಗಾರರಿಂದ ನಾಪತ್ತೆಯಾದವರ ಪತ್ತೆ ಅಸಾಧ್ಯವಾಗಿದೆ. ಪೊಲೀಸರು, ಸೈನ್ಯದಿಂದ ಮಾತ್ರ ಅವರನ್ನು ಪತ್ತೆ ಹಚ್ಚಬಹುದು. ದಟ್ಟ ಪೊದೆಗಳ ಮಧ್ಯೆ ಕಣ್ಮರೆಯಾಗಿದ್ದಾರೆ. 6-7 ದಿನದೊಳಗೆ ಅವರ ಕುರುಹು ಪತ್ತೆಯಾಗುತ್ತದೆ. ಸರ್ಕಾರದ ಮಟ್ಟದಲ್ಲಿ ಈ ಕೆಲಸ ಆಗಬೇಕು ಎಂದು ದೈವ ಬೊಬ್ಬರ್ಯ ಪಾತ್ರಿ ನುಡಿ ಕೊಟ್ಟಿದ್ದಾರೆ. ಇದನ್ನೂ ಓದಿ: ಮೀನುಗಾರರ ಪತ್ತೆಗೆ ಇಸ್ರೋ, ಗೂಗಲ್ ನೆರವು: ಸಚಿವ ವೆಂಕಟರಾವ್ ನಾಡಗೌಡ

UDP FISH 3

ಎಲ್ಲಾ ಪ್ರಯತ್ನ ವಿಫಲ:
ಕಳೆದ 28 ದಿನಗಳಿಂದ 7 ಮಂದಿ ಮೀನುಗಾರರು ನಾಪತ್ತೆಯಾಗಿದ್ದಾರೆ. ಬೋಟ್ ಮಲ್ಪೆಗೆ ಸೇರಿದ್ದಾಗಿದ್ದು, ಅದರಲ್ಲಿ 5 ಮಂದಿ ಉತ್ತರ ಕನ್ನಡ ಹಾಗೂ ಇಬ್ಬರು ಉಡುಪಿ ಜಿಲ್ಲೆಯವರಾಗಿದ್ದಾರೆ. ಇವರನ್ನು ಹುಡುಕಲು ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸಿದ್ದರೂ ಅವರನ್ನು ಪತ್ತೆಹಚ್ಚಲು ಸರ್ಕಾರದಿಂದ ಸಾಧ್ಯವಾಗಲಿಲ್ಲ. ಅಲ್ಲದೇ ಸ್ವತಃ ಮೀನುಗಾರರೇ 15-20 ದಿನಗಳಿಂದ ನಿರಂತರವಾಗಿ ಹುಡುಕಾಟ ನಡೆಸಿದ್ದಾರೆ. ಆದ್ರೆ ನಾಪತ್ತೆಯಾದವರ ಕುರುಹು ಸಿಗಲಿಲ್ಲ. ಹೀಗಾಗಿ ಮೀನುಗಾರರು ಇಂದು ಬೊಬ್ಬರ್ಯ ದೈವದ ಮೊರೆ ಹೋಗಿದ್ದಾರೆ.

ಮೀನುಗಾರರು ತಾವು ಮೀನು ಹಿಡಿಯಲು ಸಮುದ್ರಕ್ಕೆ ಇಳಿಯುವ ಮೊದಲು ಬೊಬ್ಬರ್ಯ ದೈವಕ್ಕೆ ಕೈ ಮುಗಿಯುತ್ತಾರೆ. ಹೀಗಾಗಿ ಬೊಬ್ಬರ್ಯ ದೈವ ಕೊಟ್ಟ ನುಡಿಯನ್ನು ಪಾಲಿಸುತ್ತಾ, ಸರ್ಕಾರಕ್ಕೆ ಮತ್ತಷ್ಟು ಒತ್ತಡ ಹೇರುವ ಪ್ರಯತ್ನ ಮಾಡುತ್ತಾರೆ.

UDP FISH

ಬುಧವಾರ ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ ಅವರು ನಾಪತ್ತೆಯಾದವರ ಮನೆಗೆ ಭೇಟಿ ನೀಡಿ ಭರವಸೆ ನೀಡಿದ್ದಾರೆ. ಆದ್ರೆ 28 ದಿನಗಳ ಬಳಿಕ ಸಚಿವರು ಭೇಟಿ ಕೊಟ್ಟಿರುವುದಕ್ಕೆ ಮೀನುಗಾರರು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *