ಶಿವಮೊಗ್ಗ: ಎಸ್.ಪಿ ಕಚೇರಿಯಿಂದ ನಿಗೂಢ ರೀತಿಯಲ್ಲಿ ಕಣ್ಮರೆಯಾಗಿದ್ದ ಆನೆ ದಂತ ಕೊನೆಗೂ ಅನುಮಾನಾಸ್ಪದವಾಗಿ ಸಿಕ್ಕಿದೆ.
ಮಂಗಳವಾರ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಯಲ್ಲಿ ಕೊಠಡಿಯೊಂದನ್ನು ಸ್ವಚ್ಛಗೊಳಿಸುವ ವೇಳೆಯಲ್ಲಿ ಇದು ಪತ್ತೆಯಾಗಿದೆ ಎಂದು ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಮುತ್ತುರಾಜ್ ಹೇಳಿದ್ದಾರೆ. ಆದರೆ, ದಂತದ ತಳಭಾಗದಲ್ಲಿ ಒಂದಷ್ಟು ಕತ್ತರಿಸಲಾಗಿದ್ದು, ಕತ್ತರಿಸಿರುವ ಗುರುತು ಸಹ ಹೊಸದಾಗಿದೆ. ಈ ದಂತ ನಾಪತ್ತೆ ಪ್ರಕರಣವನ್ನು ರಾಜ್ಯ ಸರ್ಕಾರವು ಕಳೆದ ಜನವರಿಯಲ್ಲಿ ಸಿಐಡಿ ತನಿಖೆ ಒಪ್ಪಿಸಿದೆ.
ಸಿಐಡಿ ತನಿಖೆ ಆರಂಭಗೊಳ್ಳುವ ಹಂತದಲ್ಲೇ ಎಸ್‍ಪಿ ಕಚೇರಿಯಲ್ಲೇ ದಂತ ಮೊಟಕು ದಂತ ಪತ್ತೆಯಾಗಿದ್ದು, ಇಲಾಖೆ ದಂತಕತೆ ಹೇಳುತ್ತಿದೆ ಎಂಬ ಶಂಕೆಗೆ ಕಾರಣವಾಗಿದೆ. 2011ರ ಫೆಬ್ರವರಿವರೆಗೂ ಎಸ್‍ಪಿ ಚೇಂಬರ್ ನಲ್ಲೇ ದಂತ ಇದ್ದ ಬಗ್ಗೆ ಪುರಾವೆಗಳಿವೆ. ನಂತರ ಇದೂವರೆಗೂ ಐವರು ಎಸ್‍ಪಿಗಳು ಬದಲಾಗಿದ್ದಾರೆ.
ಎಸ್‍ಪಿ ಕಚೇರಿ ಆವರಣದಲ್ಲಿ ಇದ್ದ ಪುರಾತನ ಶಿಲ್ಪಗಳನ್ನು ಕುವೆಂಪು ವಿವಿ ಪ್ರಾಕ್ತನ ವಿಭಾಗಕ್ಕೆ ಕಳೆದ ವರ್ಷ ಒಪ್ಪಿಸುವ ಹಂತದಲ್ಲಿ ಈ ದಂತ ನಾಪತ್ತೆ ಆಗಿರುವುದು ಬೆಳಕಿಗೆ ಬಂದಿತ್ತು. ಇಲಾಖೆ ತನಿಖೆ ನಡೆದು ನಂತರ ಹೆಚ್ಚುವರಿ ಪೊಲೀಸ್ ಅಧೀಕ್ಷಕರಿಂದಲೂ ತನಿಖೆ ನಡೆಯಿತು. ಆಗ ಪೊಲೀಸ್ ಇಲಾಖೆಗೆ ಸೇರಿದ ಎಲ್ಲಾ ಕಟ್ಟಡಗಳಲ್ಲೂ ಸಂಪೂರ್ಣ ಶೋಧ ನಡೆಸಲಾಗಿತ್ತು.
ಆಗಲೂ ದಂತ ಪತ್ತೆ ಆಗದಿದ್ದಾಗ 22-5-2018ರಂದು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಈ ದಂತ ಕಳವು ಪ್ರಕರಣದ ಕುರಿತು ಅಧಿಕೃತವಾಗಿ ದೂರು ದಾಖಲಿಸಿ, ತನಿಖಾಧಿಕಾರಿಯನ್ನೂ ನೇಮಿಸಲಾಗಿತ್ತು. ಇಂತಹ ಯಾವ ತನಿಖೆ ವೇಳೆಯೂ ದೊರಕದ ದಂತ ಈಗ ದಿಢೀರನೇ ಎಸ್‍ಪಿ ಕಚೇರಿಯ ಹಳೆ ಸಾಮಗ್ರಿಗಳ ನಡುವೆ ಬಂದದ್ದಾರೂ ಹೇಗೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ದಂತ ನಾಪತ್ತೆ ಪ್ರಕರಣದಲ್ಲಿ ಅಮಾಯಕ ಪೊಲೀಸ್ ಪೇದೆಗಳ ಮೇಲೂ ಕ್ರಮ ಜರುಗಿಸಲಾಗಿತ್ತು. ಈ ದಂತ ನಾಪತ್ತೆ- ಪತ್ತೆ ಪ್ರಕರಣದಲ್ಲಿ ಹಿರಿಯ ಅಧಿಕಾರಿಗಳ ಕೈವಾಡ ಇದೆ ಎಂಬ ಶಂಕೆ ವ್ಯಾಪಕವಾಗಿದೆ. ಕಳೆದು ಹೋದ ದಂತ ಪತ್ತೆಯಾಗಿದ್ದು, ಮಂಗಳವಾರ ಪತ್ತೆ ಆಗಿದ್ದು, ಹೇಗೆ ಎಂಬ ಬಗ್ಗೆಯೇ ಮತ್ತೊಂದು ತನಿಖೆ ಅಗತ್ಯವಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv