ಚಿಕ್ಕಬಳ್ಳಾಪುರ: ಡಿ.15 ರಂದು ಕಾಣೆಯಾಗಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿ ಇಂದು ಶವವಾಗಿ ಪತ್ತೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಸಾಧುಮಠ ಗ್ರಾಮದ ಸಮೀಪ ಪತ್ತೆಯಾಗಿದೆ. ರಸ್ತೆ ಬದಿಯ ಮೋರಿಯೊಂದರ ಹಳ್ಳದಲ್ಲಿ ಬೈಕ್ ಸಮೇತ ಬಾಲಕನ ಶವ ಪತ್ತೆಯಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡರಾಯಪ್ಪನಹಳ್ಳಿ ನಿವಾಸಿ ನಿಶಾಂಕ್ ಎನ್ (15) ಮೃತ ಬಾಲಕನಾಗಿದ್ದು, ಈತ ಚಿಕ್ಕಬಳ್ಳಾಪುರ ನಗರದ (Chikkaballapura City) ಬೆಸ್ಟ್ ಪಿಯುಸಿ ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ಇಂದು ಸಾಧು ಮಠ ಗ್ರಾಮದ ರಸ್ತೆ ಬದಿಯ ಮೋರಿಯಲ್ಲಿ ಬಾಲಕನ ಮೃತದೇಹ ಕೊಳತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಬೈಕ್ (Bike) ಸಹ ಹಳ್ಳದಲ್ಲಿ ಬಿದ್ದಿದೆ. ಇದನ್ನೂ ಓದಿ: ಸಲೀಂ ಹೊಟ್ಟೆಪಾಡಿಗಾಗಿ ಕೆಲಸ ಮಾಡ್ತಿದ್ದ, ಆತಂಕ ಪಡುವ ಅಗತ್ಯವಿಲ್ಲ: ಮಹದೇವಪ್ಪ

ಕೊಲೆ ಶಂಕೆ
ಮಗನ ಸಾವಿನ ಸುದ್ದಿ ಕೇಳಿ ತಂದೆ ಹಾಗೂ ತಾಯಿ ಇಬ್ಬರೂ ಆಘಾತಕ್ಕೊಳಗಾಗಿದ್ದು ಕಣ್ಣೀರು ಸುರಿಸುತ್ತಿದ್ದಾರೆ. ಇನ್ನು ಘಟನೆ ಬಗ್ಗೆ ಮಾತನಾಡಿರುವ ತಾಯಿ ಹಾಗೂ ತಂದೆ ಡಿಸೆಂಬರ್ 15 ರಂದು ನನ್ನ ಮಗನಿಗೆ ಹುಷಾರ್ ಇಲ್ಲದ ಕಾರಣ ಕಾಲೇಜಿಗೆ ಹೋಗದೇ ಮನೆಯಲ್ಲಿ ಇದ್ದ. ಮಗನಿಗೆ ಸ್ನಾನ ಮಾಡಿಕೊ ಅಂತ ಹೇಳಿದೆ. ಅದಾದ್ಮೇಲೆ ಬೆಳಗ್ಗೆ 7:30 ಗಂಟೆಗೆ ಊರ ಒಳಗೆ ಹೋಗಿ ಬರ್ತೀನಿ ಅಂತ ಹೇಳಿ ಹೋದವನು ಸಂಜೆಯಾದರೂ ಮನೆಗೆ ಬರಲಿಲ್ಲ. ನಂತರ ಮಗನಿಗೆ ಫೋನ್ ಮಾಡಿದರೆ ಸ್ವಿಚ್ ಆಫ್ ಅಂತ ಬಂತು. ಇದನ್ನೂ ಓದಿ: ಅಣ್ತಮ್ಮ ಜೋಡೆತ್ತು ಕಣೋ ಹಾಡಿನ ಜೊತೆ ಕೆಡಿ ಸಿನಿಮಾ ರಿಲೀಸ್ ಡೇಟ್ ಔಟ್
ನಂತರ ಸ್ನೇಹಿತರನ್ನ ವಿಚಾರಣೆ ಮಾಡಿದೆವು ಹಾಗೂ ಸಂಬಂಧಿಕರ ಮನೆಯಲ್ಲಿ ಫೋನ್ ಮಾಡಿ ವಿಚಾರಿಸಲಾಗಿ ಅಲ್ಲಿಗೂ ಸಹ ಹೋಗಿರಲಿಲ್ಲ. ನಮಗೆ ನಮ್ಮ ಪಕ್ಕದ ಮನೆಯವರ ದ್ವಿಚಕ್ರ ವಾಹನ ತೆಗೆದುಕೊಂಡು ಹೋಗಿದ್ದ ಅಂತ ತಿಳಿದು ಬಂತು. ಆದ್ದರಿಂದ ಕಾಣೆಯಾಗಿರುವ ನನ್ನ ಮಗನನ್ನ ಪತ್ತೆ ಮಾಡಿಕೊಡಬೇಕೆಂದು ಡಿ.16ರಂದು ಮಹಿಳಾ ಠಾಣೆಯಲ್ಲಿ ನಾವು ದೂರು ನೀಡಿದ್ದೆವು. ಆದರೆ ಇಂದು ನಮ್ಮ ಮಗ ಶವವಾಗಿ ಪತ್ತೆಯಾಗಿದ್ದಾನೆ. ಇದು ಅಪಘಾತ ಅಲ್ಲ, ಉದ್ದೇಶಪೂರ್ವಕವಾಗಿಯೇ ನಮ್ಮ ಮಗ ಪ್ರೀತಿಸುತ್ತಿದ್ದ ಎನ್ನಲಾಗಿರುವ ಬಾಲಕಿ ಅಣ್ಣನೆ ಈ ಕೃತ್ಯ ಮಾಡಿರುವ ಅನುಮಾನವಿದೆ ಅಂತ ಆರೋಪಿಸಿದ್ದಾರೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ವಿಧಿ ವಿಜ್ಞಾನ ಪ್ರಯೋಗಾಲಯದ ತಂಡ ಸಹ ಭೇಟಿ ಮಾಡಿ ಪರಿಶೀಲನೆ ನಡೆಸುತ್ತಿದೆ. ಪೊಲೀಸರ ಸಂಪೂರ್ಣ ತನಿಖೆಯಿಂದ ಇದು ಅಪಘಾತವೋ ಇಲ್ಲ ಕೊಲೆಯೋ ಎಂಬುದು ತಿಳಿದು ಬರಬೇಕಿದೆ. ಇದನ್ನೂ ಓದಿ: ಸಿಎಂ ಬದಲಾವಣೆ ಗೊಂದಲದ ನಡುವೆ ಸಿದ್ದರಾಮಯ್ಯ ದೆಹಲಿಗೆ; ಹೈಕಮಾಂಡ್ ಜೊತೆ ನಡೆಯಲಿದ್ಯಾ ಪ್ರತ್ಯೇಕ ಮಾತುಕತೆ?

