ಹೈದರಾಬಾದ್: ನಾಪತ್ತೆಯಾಗಿದ್ದ ಇಬ್ಬರು ಮಕ್ಕಳ ಮೃತದೇಹ ಪಾರ್ಕ್ ಮಾಡಿದ್ದ ಕಾರಿನಲ್ಲಿ ಪತ್ತೆಯಾಗಿರುವ ಘಟನೆ ತೆಲಂಗಾಣದ ನಿಜಾಮಾಬಾದ್‍ದಲ್ಲಿ ನಡೆದಿದೆ.
ಮುಜಾಹಿದ್ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮೊಹಮ್ಮದುದ್ದೀನ್ (5) ಮತ್ತು ಮೊಹಮ್ಮದ್ ರಿಯಾಜ್ (10) ಮೃತ ಮಕ್ಕಳು. ಇವರಿಬ್ಬರು ಮಂಗಳವಾರ ಬೆಳಿಗ್ಗೆಯಿಂದ ನಾಪತ್ತೆಯಾಗಿದ್ದರು. ಮಕ್ಕಳ ಪೋಷಕರು ಎಲ್ಲ ಕಡೆ ಹುಡುಕಾಡಿ ತಕ್ಷಣ ಪೊಲೀಸ್ ಠಾಣೆಗೆ ಹೋಗಿ ನಾಪತ್ತೆ ದೂರು ದಾಖಲಿಸಿದ್ದರು.
Advertisement
Advertisement
ನಂತರ ಮನೆಯ ಸುತ್ತಮುತ್ತಲು ಪೋಷಕರು ಹುಡುಕಲು ಶುರು ಮಾಡಿದ್ದರು. ಅವರ ಮನೆಯಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ನಿಲ್ಲಿಸಿದ್ದ ಹ್ಯುಂಡೈ ವರ್ನಾ ಕಾರಿನಲ್ಲಿ ಮಕ್ಕಳ ಶವಗಳನ್ನು ಪತ್ತೆಯಾಗಿವೆ. ಕಾರಿನ ಮಾಲೀಕ ಡೋರ್ ಓಪನ್ ಮಾಡಿ ನೋಡಿದಾಗ ಮಕ್ಕಳು ಮೃತಪಟ್ಟಿದ್ದು ಬೆಳಕಿಗೆ ಬಂದಿದೆ. ತಕ್ಷಣ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.
Advertisement
ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ಮಕ್ಕಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತ ಮಕ್ಕಳು ಸ್ವಂತ ಅಕ್ಕ-ತಂಗಿಯ ಮಕ್ಕಳಾಗಿದ್ದು, ಮಕ್ಕಳನ್ನು ಕಳೆದುಕೊಂಡ ತಾಯಿಯಂದಿರ ಆಕ್ರಂದನ ಮುಗಿಲು ಮುಟ್ಟಿತ್ತು. ಕಾರನ್ನು ಒಳಗಿನಿಂದ ಲಾಕ್ ಮಾಡಲಾಗಿತ್ತು. ಹೀಗಾಗಿ ಪೋಷಕರು ಅನುಮಾನವನ್ನು ವ್ಯಕ್ತಪಡಿಸಿದ್ದಾರೆ ಎಂದು ಎಸಿಪಿ ಶ್ರೀನಿವಾಸ್ ಕುಮಾರ್ ತಿಳಿಸಿದ್ದಾರೆ.
Advertisement
ಕಾರಿನ ಮಾಲೀಕರು ಕಾರನ್ನು ಲಾಕ್ ಮಾಡದೇ ನಿಲ್ಲಿಸಿದ್ದಾರೆ. ಈ ವೇಳೆ ಮಕ್ಕಳು ಆಟವಾಡಲು ಕಾರಿನೊಳಗೆ ಹೋಗಿದ್ದಾರೆ. ಆಗ ಆಕಸ್ಮಿಕವಾಗಿ ಕಾರಿನ ಬಾಗಿಲು ಲಾಕ್ ಆಗಿದೆ. ಈ ವೇಳೆ ಮಕ್ಕಳಿಗೆ ಹೊರಗೆ ಬರಲು ಸಾಧ್ಯವಾಗದೇ ಕಾರಿನೊಳಗೆ ಉಸಿರುಗಟ್ಟಿ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಸದ್ಯಕ್ಕೆ ಪೊಲೀಸರು ಈ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.