ವಾಷಿಂಗ್ಟನ್: ಮಿಸ್ ವರ್ಲ್ಡ್ ಅಮೆರಿಕ 2019 ಫಿನಾಲೆಯಲ್ಲಿ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದ ಭಾರತೀಯ ಮೂಲದ ಮಾಡೆಲ್‍ಗೆ ಆಯೋಜಕರು ಆಸ್ಪತ್ರೆಗೆ ಹೋಗಿ ಕಿರೀಟ ನೀಡಿದ್ದಾರೆ.
ಭಾರತೀಯ ಮೂಲದ ಶ್ರೀ ಸೈನಿ ಮಂಗಳವಾರ ಸಂಜೆ ಗೌನ್ ರೌಂಡ್‍ನಲ್ಲಿ ಭಾಗವಹಿಸುವ ಮೊದಲು ಕುಸಿದು ಬಿದ್ದಿದ್ದರು. ಪರಿಣಾಮ ಅವರ ಕಾಲಿಗೆ ಗಂಭೀರವಾಗಿ ಗಾಯಗಳಾಗಿತ್ತು. ಬಳಿಕ ಸೈನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಸೈನಿ ಕುಸಿದು ಬಿದ್ದ ನಂತರ ಅವರ ತಾಯಿ ಏಕ್ತಾ, ಮಗಳ ಇನ್‍ಸ್ಟಾಗ್ರಾಂನಲ್ಲಿ ನಾವು ಆಸ್ಪತ್ರೆಯಲ್ಲಿ ರಾತ್ರಿ 9 ಗಂಟೆಯಿಂದ ಇದ್ದೇವೆ. ವೈದ್ಯರು ಸೈನಿಗೆ ಬೇರೆ ಬೇರೆ ಸ್ಕ್ಯಾನಿಂಗ್‍ಗಳನ್ನು ಮಾಡುತ್ತಿದ್ದಾರೆ ಎಂದು ಬರೆದು ಪೋಸ್ಟ್ ಮಾಡಿದ್ದರು.
ಸೈನಿ ಈಗಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಪರ್ಧೆಯಲ್ಲಿ ಆಕೆ ಗೆದ್ದಿದ್ದ ಐದು ಪ್ರಶಸ್ತಿಗಳನ್ನು ಮಿಸ್ ವರ್ಲ್ಡ್ ಅಮೆರಿಕ ಆಯೋಜಕರು ಆಸ್ಪತ್ರೆಗೆ ಭೇಟಿ ನೀಡಿ ಪುರಸ್ಕರಿಸಿದ್ದಾರೆ. ಸೈನಿ ‘ಬ್ಯುಟಿ ವಿತ್ ಎ ಪರ್ಪಸ್ ಅವಾರ್ಡ್’, ‘ಟಾಪ್ ಇನ್‍ಫ್ಲೂಯೆನ್ಸರ್ ಅವಾರ್ಡ್, ‘ಎಂಟರ್ ಪ್ರೆನ್ಯೂರ್ ಚಾಲೆಂಜ್ ಅವಾರ್ಡ್’, ಮೊದಲನೇ ರನ್ನರಪ್ ಟ್ಯಾಲೆಂಟ್ ಅವಾರ್ಡ್, ಹಾಗೂ ‘ಮೊದಲನೇ ರನ್ನರಪ್ ಟಾಪ್ ಮಾಡೆಲ್ ಅವಾರ್ಡ್’ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಕಿರೀಟ ಪಡೆಯುತ್ತಿರುವ ಫೋಟೋವನ್ನು ಶೈನಿ ಅಪ್ಲೋಡ್ ಮಾಡಿ ಅದಕ್ಕೆ, ನನ್ನ ಸಹಸ್ಪರ್ಧಿಗಳಿಗೆ ಹಾಗೂ ಅಂಬುಲೆನ್ಸ್ ಕರೆಸಿ ನನ್ನ ಜೀವ ಉಳಿಸಿದವರಿಗೆ ಧನ್ಯವಾದಗಳು. ನಾನು ಆಕಸ್ಮಿಕವಾಗಿ ಏಕೆ ಕುಸಿದು ಬಿದ್ದೆ ಎಂದು ಕಂಡುಹಿಡಿಯಲು ವೈದ್ಯರಿಗೆ ಸಾಧ್ಯವಾಗಲಿಲ್ಲ. ಸ್ಪರ್ಧೆಗಳಿಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ನನ್ನನ್ನು ಹೇಗೆ ಸಿದ್ಧಪಡಿಸಬೇಕೆಂಬುದು ನನಗೆ ತಿಳಿಯಿತು. ಇನ್‍ಸ್ಟಾದಲ್ಲಿ ಶುಭಹಾರೈಸಿದ ಎಲ್ಲರಿಗೂ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.