Connect with us

Districts

ರೈತರೇ ದೇಶದ ಬೆನ್ನೆಲುಬು, ಅವರಿಗೆ ಬೆಂಗಾವಲಾಗಿ ನಿಲ್ಬೇಕು- ಸಂದರ್ಶನದಲ್ಲಿ ಆಡ್ಲಿನ್ ಮನದ ಮಾತು

Published

on

– ಉಡುಪಿ ಗಡ್‍ಬಡ್, ಫಿಶ್ ಫ್ರೈ ಇಷ್ಟ

ಉಡುಪಿ: ಲಿವಾ ಮಿಸ್ ದಿವಾ 2020 ಗೆದ್ದ ಆಡ್ಲಿನ್ ಕ್ಯಾಸ್ಟಲಿನೋ ಹುಟ್ಟೂರು ಉಡುಪಿಗೆ ಬಂದಿದ್ದಾರೆ. ಕುಟುಂಬದ ಜೊತೆ ಬ್ಯೂಟಿ ಕಂಟೆಸ್ಟ್ ಗೆದ್ದ ಖುಷಿ ಹಂಚಿಕೊಂಡಿದ್ದು, ಪಬ್ಲಿಕ್ ಟಿವಿ ಜೊತೆ ಆಡ್ಲಿನ್ ಮಾತನಾಡಿದ್ದಾರೆ.

ಬ್ಯೂಟಿ ಕಂಟೆಸ್ಟ್‌ನಲ್ಲಿ ಆಡ್ಲಿನ್ ಕಲಿತ ಪಾಠ ಏನು?
ಬ್ಯೂಟಿ ಕಂಟೆಸ್ಟ್‌ನಲ್ಲಿ ನಾನು ಸಾಕಷ್ಟು ಪಾಠಗಳನ್ನು ಕಲಿತಿದ್ದೇನೆ. ಪ್ರತಿ ಹಂತದ ಸೋಲು ಮತ್ತು ಗೆಲುವುಗಳ ಎರಡೆರಡು ಪಾಠಗಳನ್ನು ಕಲಿಸುತ್ತದೆ. ನಾನು ಏನು ಎನ್ನುವುದನ್ನು ತೆರೆದುಕೊಳ್ಳಲು ಈ ಬ್ಯೂಟಿ ಕಂಟೆಸ್ಟೆಂಟ್ ಸಹಕಾರ ಆಯಿತು.

ಶಿಕ್ಷಣ ಮತ್ತು ಲೈಫ್ ಸ್ಟೋರಿ ಹೇಳ್ತಿರಾ ಆಡ್ಲಿನ್..
ಕುವೈಟ್‍ನ ಇಂಡಿಯನ್ ಸೆಂಟ್ರಲ್ ಸ್ಕೂಲ್‍ನಲ್ಲಿ ನನ್ನ ಶಿಕ್ಷಣ ಆರಂಭವಾಯಿತು. ಪಿಯುಸಿ ಶಿಕ್ಷಣಕ್ಕೆ ಸೈಂಟ್ ಕ್ಸೇವಿಯರ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಆಯ್ಕೆ ಮಾಡಿದೆ. ಹಾಗಾಗಿ ಭಾರತಕ್ಕೆ ಬಂದೆ. ವಿಜ್ಞಾನ ವಿಷಯದಲ್ಲಿ ಬೆಸೆಂಟ್ ಕಾಲೇಜಿನಲ್ಲಿ ನಾನು ಪದವಿಯನ್ನು ಮುಗಿಸಿದ್ದೇನೆ.

ಕುವೈಟ್ ಸೇರಿದ್ಮೇಲೆ ಇಂಡಿಯಾ ಜೊತೆ ಹೇಗೆ ಸಂಪರ್ಕ ಇಟ್ಕೊಂಡ್ರಿ?
ನಾನು ಕುವೈಟ್‍ನಲ್ಲಿ ಇದ್ದಾಗ ರಜೆಗಾಗಿ ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದೆ. ಉಡುಪಿಯಂತಹ ಸುಂದರ ನಗರವನ್ನು ನಾನು ನನ್ನ ಜೀವನದಲ್ಲಿ ಎಲ್ಲೂ ಕಂಡಿಲ್ಲ. ನನ್ನೂರಿಗೆ ಬಂದಾಗ ಸಂಬಂಧಿಕರು, ಆಪ್ತರು ಪರಿಚಯ ಇಲ್ಲದವರು ಕೂಡ ನನ್ನನ್ನು ಬರಮಾಡಿಕೊಂಡಿದ್ದಾರೆ. ಇಷ್ಟು ದೊಡ್ಡ ಸ್ವಾಗತ ಸಿಗುತ್ತದೆ ಎಂದು ನಾನು ಅಂದುಕೊಂಡಿಲ್ಲ.

ದೇಶ ಬಿಟ್ಟರೂ ಭಾಷೆ, ಸಂಸ್ಕೃತಿ ಬಿಟ್ಟಿಲ್ವಂತೆ.. ಹೌದಾ ಆಡ್ಲಿನ್?
ದೇವರ ಪೂಜೆ ಮತ್ತು ಆರಾಧನೆ ಭಾರತೀಯ ಸಂಸ್ಕೃತಿ. ಏನೇ ಒಳ್ಳೆಯ ಕಾರ್ಯಗಳನ್ನು ಮಾಡುವ ಮುನ್ನ ನಾವು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಇಲ್ಲಿ ಬಂದು ಪೂಜೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ. ನನ್ನ ಈ ಸಾಧನೆಗೆ ನನ್ನ ಕುಟುಂಬದವರ ಪ್ರಾರ್ಥನೆ ಮತ್ತು ಭಗವಂತನ ಆಶೀರ್ವಾದ ಎಂಬುದರಲ್ಲಿ ಎರಡು ಮಾತಿಲ್ಲ . ಪೂಜೆ ಪ್ರಾರ್ಥನೆ ಎಲ್ಲವೂ ಕೊಂಕಣಿ ಭಾಷೆಯಲ್ಲೇ ಎಂಬುದು ಖುಷಿ.

ರೈತರ ಬಗ್ಗೆ ಕಾಳಜಿ ವ್ಯಕ್ತಪಡಿಸಿರೋದು ಸ್ಪರ್ಧೆಯ ಗಿಮಿಕ್ ಅಲ್ಲ ತಾನೆ?
ಗಿಮಿಕ್ ಮಾಡಿ ಗೆದ್ದು ನನಗೇನು ಆಗಬೇಕಾಗಿಲ್ಲ. ರೈತರೇ ಈ ದೇಶದ ಬೆನ್ನೆಲುಬು. ಅವರಿಗೆ ನಾವೆಲ್ಲಾ ಬೆಂಗಾವಲಾಗಿ ನಿಲ್ಲುವ ಅವಶ್ಯಕತೆ ಇದೆ. ನನ್ನ ಈ ಪ್ಲಾಟ್ ಫಾರ್ಮನ್ನು ಇದೇ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತೇನೆ. ರೈತ ಮಹಿಳೆಯರಿಗೆ ಎಲ್ಲರೂ ಆದ್ಯತೆ ಮತ್ತು ಪ್ರೋತ್ಸಾಹವನ್ನು ಕೊಡಬೇಕು. ರೈತ ಮಹಿಳೆಯರ ಸಬಲೀಕರಣದಿಂದ ದೇಶದ ಆರ್ಥಿಕ ಪ್ರಗತಿ ಸಾಧ್ಯ.

ಮಿಸ್ ಯುನಿವರ್ಸ್ ಗೆಲ್ಲುವ ಕನಸಿದ್ಯಾ? ಫಿಲಂ ಫೀಲ್ಡಿಗೆ ಎಂಟ್ರಿಯಾ?
ದೇಶದ ನೂರಾ ಮೂವತ್ತು ಕೋಟಿ ಜನರು ಮಿಸ್ ಯೂನಿವರ್ಸ್ ಕಿರೀಟವನ್ನು ಭಾರತ ಗೆಲ್ಲಬೇಕೆಂಬ ಹಂಬಲದಲ್ಲಿದ್ದಾರೆ. ಇಪ್ಪತ್ತು ವರ್ಷದ ಹಿಂದೆ ಲಾರಾ ದತ್ತ ಮೇಡಂ ಅವರು ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಮಿಸ್ ಯೂನಿವರ್ಸ್ ಸ್ಪರ್ಧೆಗೆ ಶೇಕಡ ನೂರಕ್ಕೆ ಇನ್ನೂರರಷ್ಟು ನನ್ನನ್ನು ನಾನು ಕೊಟ್ಟುಕೊಳ್ಳುತ್ತೇನೆ. ಛಲ ಮತ್ತು ಆತ್ಮ ವಿಶ್ವಾಸ ನನ್ನ ಒಳಗೆ ಇದೆ. ಕರಾವಳಿ ಭಾಗದಿಂದ ಸಾಕಷ್ಟು ಮಂದಿ ಸಾಧನೆ ಮಾಡಿದ ಮಹಿಳೆಯರಿದ್ದಾರೆ. ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಕಷ್ಟು ಹೆಸರುಗಳು ಈ ಭಾಗದಿಂದ ಕೇಳಿ ಬರುತ್ತವೆ. ಐಶ್ವರ್ಯ ರೈ, ಶಿಲ್ಪಾ ಶೆಟ್ಟಿ ಇವರೆಲ್ಲ ನನ್ನ ರೋಲ್ ಮಾಡೆಲ್‍ಗಳು .

ಉಡುಪಿ ಅಂತ ಹೇಳಿದ ಕೂಡಲೇ ಏನು ನೆನಪಾಗುತ್ತೆ?
ಉಡುಪಿ ಅಂದ ಕೂಡ್ಲೆ ನನ್ನ ಮತ್ತು ನನ್ನ ದೊಡ್ಡಪ್ಪನ ಮನೆ ನೆನಪಾಗುತ್ತದೆ. ಉಡುಪಿಗೆ ಬಂದಾಗಲೆಲ್ಲ ಚರ್ಚ್‍ಗಳಿಗೆ ಭೇಟಿ ಕೊಡೋದು ನನ್ನ ಇಷ್ಟದ ವಿಷಯಗಳು. ಗಡ್ ಬಡ್ ಐಸ್ಕ್ರೀಂ ನನಗೆ ಇಷ್ಟ. ಉಡುಪಿಗೆ ಬಂದಾಗ ನಾನು ಗಡ್ ಬಡ್ ತಿನ್ನೋದನ್ನು ಯಾವತ್ತೂ ಮರೆತಿಲ್ಲ. ನನ್ನ ದೊಡ್ಡಮ್ಮ ಅಂದರೆ ಅಮ್ಮನ ಅಕ್ಕ ಮಾಡುವ ಮೀನು ಗಸಿ ಅಂದರೆ ನನಗೆ ಬಹಳ ಇಷ್ಟ. ನಾನು ಕುವೈಟ್ ನಲ್ಲಿದ್ದಾಗ ಮೇನ್ ಸಿಕ್ಕರೂ ನಾನು ಮೀನು ತಿಂತಾ ಇರಲಿಲ್ಲ. ಆದರೆ ದೊಡ್ಡಮ್ಮ ಮಾಡಿದ ಮೀನಿನ ಖಾದ್ಯಗಳನ್ನು ನಾನು ಬಿಡೋದೇ ಇಲ್ಲ.

ನಮ್ಮ ಮೇಲೆ ನಮಗೆ ಆತ್ಮವಿಶ್ವಾಸ ಬೇಕು
ನೀವು ಮೊದಲು ನಿಮ್ಮ ಮೇಲೆ ನಂಬಿಕೆ ಇಡಿ. ಆತ್ಮವಿಶ್ವಾಸ ಇಡಿ. ನೀವು ಏನು ಸಾಧನೆ ಮಾಡಬೇಕು ಅನ್ನೋದನ್ನು ನಿಮ್ಮ ತಂದೆ ತಾಯಿ ನಿಮ್ಮ ಆಪ್ತರು ನಿರ್ಧರಿಸುವುದಲ್ಲ. ನಿಮ್ಮ ಒಳಗೆ ನಿಮಗೆ ಏನು ಅನ್ನಿಸುತ್ತದೆ ಅದನ್ನು ಬೆನ್ನತ್ತಿ ಹೋಗಿ. ಹಾರ್ಡ್ ವರ್ಕ್ ಇಲ್ಲದೆ ಏನು ಮಾಡಲು ಸಾಧ್ಯ ಇಲ್ಲ.

ನನಗೆ ಯಾರೂ ಫ್ಯಾನ್ಸ್ ಇಲ್ಲ. ನನ್ನನ್ನು ಇಷ್ಟಪಡುವವರು ಎಲ್ಲರೂ ನನ್ನ ಫ್ಯಾಮಿಲಿ. ಬ್ಯೂಟಿ ಕಾಂಟೆಸ್ಟ್ ಸಂದರ್ಭದಲ್ಲಿ ಪ್ರೀತಿ ಮತ್ತು ಪ್ರೋತ್ಸಾಹ ಕೊಟ್ಟಿದ್ದೀರಿ. ಕೇವಲ ಭಾರತ ಅಲ್ಲ ಶ್ರೀಲಂಕಾ, ಕೊಲಂಬಿಯಾ, ಫಿಲಿಫೈನ್ಸ್ ದೇಶಗಳಿಂದಲೂ ನನಗೆ ಸಪೋರ್ಟ್ ಸಿಕ್ಕಿದೆ. ದೂರದ ಕೆನಡಾ ದೇಶದವರು ಕೂಡ ನನ್ನನ್ನು ಬೆಂಬಲಿಸಿದ್ದಾರೆ.

ದೀಪಕ್ ಜೈನ್

Click to comment

Leave a Reply

Your email address will not be published. Required fields are marked *