ಆನೇಕಲ್: ಎಮ್ಮೆ ಹಾಗೂ ಹಸುಗಳ ಮೇಲೆ ಆ್ಯಸಿಡ್ ಎರಚಿ ಅಮಾನುಷವಾಗಿ ನಡೆದುಕೊಂಡಿರುವ ಘಟನೆ ತಮಿಳುನಾಡಿನ ಮೆಟ್ಟುಪಾಳ್ಯಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನೆಟ್ಟುಪಾಳ್ಯಂ ಸಮೀಪದ ರಾಜಕುಮಾರ್ ಎಂಬವರಿಗೆ ಸೇರಿದ ಸುಮಾರು 20ಕ್ಕೂ ಹೆಚ್ಚು ಎಮ್ಮೆ ಹಾಗೂ ಹಸುಗಳ ಮೇಲೆ ಕೆಲ ದುಷ್ಕರ್ಮಿಗಳು ಆ್ಯಸಿಡ್ ಎರಚಿ ಪರಾರಿಯಾಗಿದ್ದಾರೆ. ರಾಜಕುಮಾರ್ ಹೈನುಗಾರಿಕೆಯನ್ನೇ ನಂಬಿಕೊಂಡು ಜೀವನವನ್ನು ಸಾಗಿಸುತ್ತಿದ್ದರು. ಆದರೆ ಯಾರೋ ಕಿಡಿಗೇಡಿಗಳು ಮೊನ್ನೆ ರಾತ್ರಿ ಪ್ರಾಣಿಗಳ ಮೇಲೆ ಆ್ಯಸಿಡ್ ಎರಚಿದ್ದು, ಬೆನ್ನು ತಲೆ ಕಾಲು ಹಾಗೂ ದೇಹದ ಹಲವು ಭಾಗಗಳಿಗೆ ಆ್ಯಸಿಡ್ ಬಿದ್ದು ತೀವ್ರ ರಕ್ತಸ್ರಾವವಾಗಿದೆ.
ಸ್ಥಳಕ್ಕೆ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ಜಾನುವಾರುಗಳಿಗೆ ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ಈ ಕೃತ್ಯವನ್ನು ಮಾಡಿರುವಂತಹ ಕಿಡಿಗೇಡಿಗಳು ಯಾರು ಎಂಬ ಮಾಹಿತಿ ಇನ್ನು ಸಹ ಲಭ್ಯವಾಗಿಲ್ಲ.
ಅಮಾನುಷ ಕೃತ್ಯ ಎಸಗಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಆಜಾನ್ ವೇಳೆ ಧ್ವನಿವರ್ಧಕ ಬಳಕೆ ನಿಷೇಧಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ