ತುಮಕೂರು: ದೇಶ ಕಾಯೋ ಯೋಧನ ಕುಟುಂಬದ ಜೀವನಾಧಾರವಾಗಿದ್ದ ಪೆಟ್ಟಿಗೆ ಅಂಗಡಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಪುಂಡತನ ಮೆರೆದಿರುವ ಘಟನೆ ಜಿಲ್ಲೆಯ ಪಾವಗಡ ಪಟ್ಟಣದ ಹೌಸಿಂಗ್ ಬೋರ್ಡ್‍ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಈ ಘಟನೆ ಮೂರು ತಿಂಗಳ ಹಿಂದೆ ನಡೆದಿದೆ. ನಂತರ ಯೋಧರ ಕುಟುಂಬದವರು ಪಾವಗಡ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಆರೋಪಿಗಳನ್ನ ಪತ್ತೆಹಚ್ಚಿ ನ್ಯಾಯ ಕೊಡಿಸಬೇಕೆಂದು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಪಾವಗಡ ಮೂಲದ ಯೋಧ ಮಂಜುನಾಥ್ ಒಡಿಶಾದಲ್ಲಿ ಬಿಎಸ್‍ಎಫ್ ಯೋಧರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ತಂದೆ ಸಣ್ಣಪಯ್ಯ ಹಾಗೂ ತಾಯಿ ರಾಮಲಕ್ಷ್ಮಮ್ಮ ಪಾವಗಡ ಪಟ್ಟಣದಲ್ಲಿ ವಾಸಿಸುತ್ತಿದ್ದರು. ಜೀವನ ನಿರ್ವಹಣೆಗಾಗಿ ತಂದೆ ತಾಯಿ ಇಬ್ಬರೂ ಹೌಸಿಂಗ್ ಬೋರ್ಡ್ ರಸ್ತೆಯಲ್ಲಿ ಚಿಕ್ಕ ಪೆಟ್ಟಿಗೆ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು.
ಯೋಧನ ಕುಟುಂಬ ಪೆಟ್ಟಿಗೆ ಅಂಗಡಿಯಿಟ್ಟಿದ್ದ ಜಾಗ ನೆಡಿಪನ್ನ ಸ್ವಾಮಿ ದೇವಾಲಯಕ್ಕೆ ಸೇರಿದ್ದು. ದೇವಾಲಯದವರ ಅನುಮತಿ ಪಡೆದು ಪೆಟ್ಟಿಗೆ ಅಂಗಡಿಯಿಟ್ಟುಕೊಂಡಿದ್ದರು. ಆದರೆ ಇವರಿಗೆ ಒಳ್ಳೇ ವ್ಯಾಪಾರವಾಗುವುದನ್ನು ಕಂಡ ದೇವಾಲಯದ ಕಮಿಟಿ ಸದಸ್ಯರಾದ ಲಕ್ಷ್ಮಿನರಸಮ್ಮ ಹಾಗೂ ರಾಮಕೃಷ್ಣಪ್ಪ ಪೆಟ್ಟಿಗೆ ಅಂಗಡಿ ತೆರವು ಮಾಡುವಂತೆ ಮೂರ್ನಾಲ್ಕು ಬಾರಿ ಧಮ್ಕಿ ಹಾಕಿದ್ದರು.
ಆದರೆ ಯೋಧ ಮಂಜುನಾಥ್ ಅವರ ಪೋಷಕರು ಪೆಟ್ಟಿಗೆ ಅಂಗಡಿಯನ್ನು ತೆರವು ಮಾಡದಿದ್ದಕ್ಕೆ ಕಳೆದ ಆಗಸ್ಟ್ 27ರಂದು ರಾತ್ರಿ 11 ಗಂಟೆ ಸಮಯದಲ್ಲಿ ಪೆಟ್ಟಿಗೆ ಅಂಗಡಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದರು. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಇನ್ನು ಯಾವುದೇ ಕ್ರಮ ಕೈಗೊಂಡಿಲ್ಲ.