ಮಂಗಳೂರು: ಗುಡ್ಡಕ್ಕೆ ಬೆಂಕಿ ಬಿದ್ದು 15 ಎಕರೆ ಪ್ರದೇಶಕ್ಕೆ ಬೆಂಕಿ ಹಬ್ಬಿದ ಕಾರಣ ಆತಂಕ ಸೃಷ್ಟಿಯಾದ ಘಟನೆ ಗುರುವಾರ ರಾತ್ರಿ ಮಂಗಳೂರು ತಾಲೂಕಿನ ಕುಪ್ಪೆಪದವು ಬಳಿ ನಡೆದಿದೆ.
ಯಾರೋ ದುಷ್ಕರ್ಮಿಗಳು ಮಾಣಿಪಲ್ಲ ಎಂಬಲ್ಲಿನ ಗುಡ್ಡದ ಪೊದೆ ತೆಗೆಯುವುದಕ್ಕಾಗಿ ಸಂಜೆ ಹೊತ್ತಿಗೆ ಬೆಂಕಿ ಹಚ್ಚಿದ್ದರು. ಆದರೆ ಬೆಂಕಿಯ ಕೆನ್ನಾಲಿಗೆ ಹರಡುತ್ತಾ ಇಡೀ ಗುಡ್ಡಕ್ಕೆ ಆವರಿಸಿದೆ. 15 ಎಕರೆ ವ್ಯಾಪ್ತಿಯಲ್ಲಿ ಬೆಂಕಿ ಹರಡಿದ್ದರಿಂದ ಹತೋಟಿಗೆ ತರಲು ಸಾಧ್ಯವಾಗಲಿಲ್ಲ.
ಇದರಿಂದಾಗಿ ಆಸುಪಾಸಿನ ಹತ್ತಕ್ಕೂ ಹೆಚ್ಚು ಮನೆಗಳ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದರು. ಮುಂಜಾಗ್ರತಾ ಕ್ರಮವಾಗಿ ಅಲ್ಲಿಯೇ ಹತ್ತಿರ ಇದ್ದ ಪೆಟ್ರೋಲ್ ಪಂಪನ್ನು ಬಂದ್ ಮಾಡಲಾಗಿತ್ತು. ಅಗ್ನಿಶಾಮಕ ಸಿಬಂದಿ ಮತ್ತು ಸ್ಥಳೀಯರು ಸೇರಿ ಕಾರ್ಯಾಚರಣೆ ನಡೆಸಿದ್ದು ತಡರಾತ್ರಿ ವರೆಗೂ ಬೆಂಕಿಯ ಕೆನ್ನಾಲಿಗೆ ಹರಡಿಕೊಂಡಿತ್ತೆಂದು ಸ್ಥಳೀಯರು ತಿಳಿಸಿದ್ದಾರೆ.
ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv