ಶಿವಮೊಗ್ಗ: ಇಲ್ಲಿಗೆ ಸಮೀಪದ ಹೊಸಳ್ಳಿ- ಮತ್ತೂರು ನಡುವೆ ಇರುವ ಚೆಕ್ ಡ್ಯಾಂ ಬಳಿ ತುಂಗಾ ನದಿಗೆ ಅಪಾರ ಪ್ರಮಾಣದ ವಿಷ ಬೆರೆಸಿರುವ ಆತಂಕಕಾರಿ ಘಟನೆ ನಡೆದಿದೆ.
ಸಂಸ್ಕೃತ ಗ್ರಾಮ ಎಂದೇ ವಿಶ್ವವಿಖ್ಯಾತಿ ಪಡೆದಿರುವ ಮತ್ತೂರು- ಹೊಸಳ್ಳಿ ಸೇರಿ ಸುತ್ತಮುತ್ತಲಿನ 15ಕ್ಕೂ ಹೆಚ್ಚು ಹಳ್ಳಿಗಳಿಗೆ ಇಲ್ಲಿಂದಲೇ ಕುಡಿಯುವ ನೀರು ಪೂರೈಕೆ ಆಗುತ್ತಿದೆ. ನೀರಿನಲ್ಲಿ ವಿಷ ಬೆರೆತಿರುವುದು ಖಚಿತವಾಗಿರುವ ಹಿನ್ನಲೆಯಲ್ಲಿ ಹೊನ್ನಾಪುರ, ಹೊಸಕೊಪ್ಪ, ಮಂಡನೇಕೊಪ್ಪ, ಲಕ್ಷ್ಮೀಪುರ, ಮತ್ತೂರು, ಹೊಸಳ್ಳಿ ಸಿದ್ದರಹಳ್ಳಿ ಇನ್ನಿತರ ಗ್ರಾಮಗಳಿಗೆ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ.
ಕಳೆದ ಮೂರು-ನಾಲ್ಕು ದಿನಗಳಿಂದ ನೀರು ಕ್ರಮೇಣ ಹಸಿರು ಬಣ್ಣಕ್ಕೆ ತಿರುಗುತ್ತಿತ್ತು. ಮಂಗಳವಾರದಿಂದ ಭಾರೀ ಗಾತ್ರದ ಮೀನುಗಳು ಸತ್ತು ಬಿದ್ದಿದ್ದವು. ಇದನ್ನು ಗಮನಿಸಿದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿ ಗ್ರಾಮ ಪಂಚಾಯ್ತಿಗೆ ದೂರು ನೀಡಿದ್ದಾರೆ. ಲಕ್ಷಾಂತರ ಮೀನುಗಳು ಸತ್ತು ತೇಲುತ್ತಿದ್ದು, ಹದ್ದು, ಕಾಗೆಗಳಿಗೆ ಆಹಾರವಾಗುತ್ತಿವೆ.
Advertisement
Advertisement
ಕಳೆದ ನಾಲ್ಕು ದಿನಗಳ ಹಿಂದೆ ದುಷ್ಕರ್ಮಿಗಳು ಬಂದು ಮಧ್ಯರಾತ್ರಿ ಬಂದು ವಿಷ ಹಾಕಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ತೀವ್ರ ರೀತಿಯ ಹರಳು ರೂಪದ ವಿಷಯ ಬೆರೆಸಿರುವ ಶಂಕೆ ವ್ಯಕ್ತವಾಗುತ್ತಿದ್ದು, ಅದು ನೀರಿನಲ್ಲಿ ಕರಗಿ ಬರುತ್ತಿದೆ ಎಂದು ಶಂಕಿಸಲಾಗಿದೆ.
Advertisement
ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮೊದಲು ಸುತ್ತಮುತ್ತಲಿನ ಎಲ್ಲಾ ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಆಗಬೇಕು. ವಿಷ ಬೆರಕೆ ಬಗ್ಗೆ ತನಿಖೆ ಆಗಬೇಕು. ಈ ಜಾಗದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳು ನಿಲ್ಲಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.